ಸದೃಢ ಕುಟುಂಬಗಳ ಬಳಿ ಬಿಪಿಎಲ್ ಕಾರ್ಡ್: ಪತ್ತೆಗೆ ಸರ್ಕಾರ ಕ್ರಮ| ಕೆಲ ಸದೃಢ ಕುಟುಂಬದವರು ಸುಳ್ಳು ಮಾಹಿತಿ ನೀಡಿ, ಪಡೆದುಕೊಂಡು ಸರ್ಕಾರಕ್ಕೆ ವಂಚಿಸುತ್ತಿರುವುದು ಕಂಡು ಬಂದಿದೆ| ವಂಚಕರ ವಿರುದ್ಧ ಕ್ರಮಕ್ಕೆ ಮುಂದಾದ ಸರ್ಕಾರ| ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹ| ವಂಚಕರನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಪತ್ತೆ ಮಾಡುತ್ತಿದೆ|
ದಾವಣಗೆರೆ(ಸೆ.27) ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಕೇಂದ್ರ, ರಾಜ್ಯ ಸರ್ಕಾರ ನೀಡುವ ಬಿಪಿಎಲ್ ಪಡಿತರವನ್ನು ಕೆಲ ಸದೃಢ ಕುಟುಂಬದವರು ಸುಳ್ಳು ಮಾಹಿತಿ ನೀಡಿ, ಪಡೆದುಕೊಂಡು ಸರ್ಕಾರಕ್ಕೆ ವಂಚಿಸುತ್ತಿರುವುದು ಕಂಡು ಬರುತ್ತಿದ್ದು, ಅಂತಹ ವಂಚಕರ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
ವೇತನ ಗಣನೆಗೆ ತೆಗೆದುಕೊಳ್ಳದೇ ಎಲ್ಲಾ ಕಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹವಾಗಿರುತ್ತವೆ ಎಂದು ಜಿಲ್ಲಾಡಳಿತ ತಿಳಿಸಿದೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸರ್ಕಾರ ಒಂದು ಕೆಜಿ ಅಕ್ಕಿಗೆ ಸುಮಾರು 28-30 ರು. ಕೊಟ್ಟು ಖರೀದಿಸಿ, ಉಚಿತವಾಗಿ ಬಡ ಕುಟುಂಬಗಳಿಗೆ ನೀಡುತ್ತಿರುವ ಈ ಯೋಜನೆಯ ಲಾಭವನ್ನು ಕೆಲವು ಸದೃಢರು ಸುಳ್ಳು ಮಾಹಿತಿ ನೀಡಿ, ಕಬಳಿಸಿರುವುದು ವಿಷಾದದ ಸಂಗತಿ. ಈ ವಂಚಕರನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ, ಪತ್ತೆ ಮಾಡುತ್ತಿದೆ. ಈಗಾಗಲೇ ಅಂತಹ ಸದೃಢ ಕುಟುಂಬಗಳಿಗೆ ಕಾರ್ಡ್ ಮರಳಿಸಲು ಸೂಚನೆ ನೀಡಿದ್ದು, ಇನ್ನು ಮುಂದೆ ಸರ್ಕಾರ ಸುಳ್ಳು ಮಾಹಿತಿ ನೀಡಿ, ಬಿಪಿಎಲ್ ಕಾರ್ಡ್ ಹೊಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಿದೆ.
ಸುಳ್ಳು ಹೇಳಿ ವಂಚಿಸಿ, ಬಿಪಿಎಲ್ ಕಾರ್ಡ್ ಪಡೆದ ಸದೃಢ ಕುಟುಂಬ ಸೆ.30ರ ಒಳಗಾಗಿ ತಹಸೀಲ್ದಾರ್ ಕಚೇರಿ, ದಾವಣಗೆರೆ ತಾಲೂಕು, ದಾವಣಗೆರೆ(ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯಾಜ್ಯಗಳ ಇಲಾಖೆ) ಅಥವಾ ಸಹಾಯಕ ನಿರ್ದೇಶಕರ ಕಚೇರಿ, ಅನೌಪಚಾರಿಕ ಪಡಿತರ ಪ್ರದೇಶ, ದಾವಣಗೆರೆ ಕಚೇರಿಗೆ ಅಂತಹ ಕಾರ್ಡ್‌ಗಳನ್ನು ಹಿಂದಿರುಗಿಸಬೇಕು.
ಸದೃಢ ಕುಟುಂಬಗಳು ತಾವು ಹೊಂದಿರುವ ಬಿಪಿಎಲ್ ಕಾರ್ಡ್‌ಗಳನ್ನು ಹಿಂದುರಿಗಿಸದಿದ್ದರೆ ಸರ್ಕಾರವೇ ಪತ್ತೆ ಮಾಡಿ, ಪಡಿತರ ಚೀಟಿ ಪಡೆದ ದಿನದಿಂದ ಈವರೆಗೆ ಎಷ್ಟು ಪಡಿತರ ಪಡೆದಿದ್ದಾರೆ ಎಂಬುದನ್ನು ಲೆಕ್ಕ ಮಾಡಿ ದಂಡ ವಸೂಲಿ ಮಾಡುವ ಜೊತೆಗೆ ಅಂತಹವರ ವಿರುದ್ಧ ಕರ್ನಾಟಕ ಪ್ರಿವೆನ್ಷನ್ ಆಫ್ ಅನ್ ಅಥೈರೈಸ್ಡ್ ಪ್ರೊಸೆಷನ್ ಆಫ್ ರೇಷನ್ ಕಾರ್ಡ್ ಆರ್ಡರ್ 1977ರ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಅನರ್ಹ ಪಡಿತರ ಚೀಟಿಯನ್ನು ಹೊಂದುವುದು ಎಷ್ಟು ಅಪರಾಧವೋ ಅದೇ ರೀತಿ ನ್ಯಾಯ ಬೆಲೆ ಅಂಗಡಿಯಿಂದ ಪಡೆಯುವ ಅಕ್ಕಿಯನ್ನು ಇತರರಿಗೆ ಮಾರಾಟ ಮಾಡುವುದೂ ಅಷ್ಟೇ ದೊಡ್ಡ ಅಪರಾಧವಾಗಿರುತ್ತದೆ. ಅಲ್ಲದೇ, ಅಕ್ಕಿಯನ್ನು ಮಾರಾಟ ಮಾಡಿಕೊಳ್ಳುವವರಿಗೂ ಸಹ ಅನರ್ಹರಿಗೆ ನೀಡುವಂತಹ ಶಿಕ್ಷೆಗೆ ಗುರಿಪಡಿಸಲಾಗುವುದು ಜಿಲ್ಲಾ ಆಡಳಿತ ತಿಳಿಸಿದೆ.