ಕೊರೋನಾದಿಂದ ಪತ್ನಿ ಸಾವು: ಆಕೆಯ ಬರ್ತ್‌ಡೇ ದಿನವೇ 4 ಮಕ್ಕಳ ಜೊತೆ ತಂದೆ ಆತ್ಮಹತ್ಯೆ

By Kannadaprabha News  |  First Published Oct 24, 2021, 7:48 AM IST
  • ಪತ್ನಿಯ ಸಾವಿಂದ ನೊಂದಿದ್ದ ಬೆಳಗಾವಿ ನಿವೃತ್ತ ಸೈನಿಕ
  • ನಾಲ್ಕು ಮಕ್ಕಳಿಗೆ ವಿಷವುಣ್ಣಿಸಿ ತಾನೂ ಸಾವಿಗೆ ಶರಣು
  • ಕೋವಿಡ್‌ ಖಿನ್ನತೆ: ಮತ್ತೆ ಇಡೀ ಕುಟುಂಬ ನಾಶ!

ಸಂಕೇಶ್ವರ(ಅ.24): ರಾಜ್ಯದಲ್ಲಿ ಕೋವಿಡ್‌ ಖಿನ್ನತೆಗೆ ಮತ್ತೊಂದು ಕುಟುಂಬ ಸರ್ವನಾಶವಾಗಿದೆ. ಪತ್ನಿ ಬ್ಲ್ಯಾಕ್‌ ಪಂಗಸ್‌ಗೆ ತುತ್ತಾಗಿ ಮೃತಪಟ್ಟಿದ್ದರಿಂದ ತೀವ್ರವಾಗಿ ನೊಂದಿದ್ದ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೋರಗಲ್‌ ಗ್ರಾಮದ ನಿವೃತ್ತ ಸೈನಿಕರೊಬ್ಬರು ಶುಕ್ರವಾರ ಪತ್ನಿಯ ಜನ್ಮದಿನದಂದೇ ತಮ್ಮ ನಾಲ್ವರು ಮಕ್ಕಳಿಗೆ ವಿಷ ಉಣಿಸಿ ಬಳಿಕ ತಾನೂ ವಿಷ(Poison)ಸೇವಿಸಿ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ.

ಗೋಪಾಲ ದುಂಡಪ್ಪ ಹಾದಿಮನಿ(46), ಸೌಮ್ಯಾ ಗೋಪಾಲ ಹಾದಿಮನಿ(19), ಶ್ವೇತಾ ಗೋಪಾಲ ಹಾದಿಮನಿ (16), ಸಾಕ್ಷಿ ಗೋಪಾಲ ಹಾದಿಮನಿ (14), ಸೃಜನ್‌ ಗೋಪಾಲ ಹಾದಿಮನಿ (8) ಮೃತಪಟ್ಟವರು.

Tap to resize

Latest Videos

ಹುಟ್ಟುಹಬ್ಬ ಆಚರಿಸಿ ವಿಷ ಸೇವನೆ:

ಕಳೆದ ಜೂನ್‌ನಲ್ಲಿ ಗೋಪಾಲ ಅವರ ಪತ್ನಿ ಜಯಶ್ರೀ ಅವರಿಗೆ ಕೋವಿಡ್‌(Covid 19) ಸೋಂಕು ತಗುಲಿತ್ತು. ಬಳಿಕ ಬ್ಲ್ಯಾಕ್‌ ಫಂಗಸ್‌ ಕಾಣಿಸಿಕೊಂಡು ಅವರು ಮೃತಪಟ್ಟಿದ್ದರು. ಇದರಿಂದ ಗೋಪಾಲ ಮಾನಸಿಕವಾಗಿ ನೊಂದಿದ್ದರು ಎಂದು ಹೇಳಲಾಗಿದೆ. ಶುಕ್ರವಾರ ಸಂಜೆ ಮಕ್ಕಳ ಸಮೇತ ಗೋಪಾಲ ತನ್ನ ಪತ್ನಿ ಜಯಶ್ರೀಯ ಜನ್ಮದಿನ ಆಚರಿಸಿದ್ದಾರೆ. ತಡರಾತ್ರಿ ಗೋಪಾಲ ತಮ್ಮ ನಾಲ್ವರು ಮಕ್ಕಳಿಗೆ ವಿಷ ಉಣಿಸಿ, ಬಳಿಕ ತಾವೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಗೋಪಾಲ ಅವರ ಲಾರಿ ಚಾಲಕ ಮನೆ ಬಾಗಿಲು ಬಡಿದಾಗ ಒಳಗಿನಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬರಲಿಲ್ಲ. ಸಂಶಯಗೊಂಡ ಲಾರಿ ಚಾಲಕ ಮತ್ತು ಅಕ್ಕಪಕ್ಕದವರು ಬಾಗಿಲು ಮುರಿದು ಒಳಗೆ ಹೋದ ವೇಳೆ ಐವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಕೋವಿಡ್‌ನಿಂದ ಮಕ್ಕಳಲ್ಲಿ ಮಾನಸಿಕ ಸಮಸ್ಯೆ ಉಲ್ಬಣ..!

ನಿವೃತ್ತ ಸೈನಿಕನ ಇಡೀ ಕುಟುಂಬ ಸಾವಿಗೆ ಶರಣಾದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಘಟನಾ ಸ್ಥಳದತ್ತ ಧಾವಿಸಿ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ನಿವೃತ್ತ ಸೈನಿಕನ ಕುಟುಂಬದ ಸಾವಿನಿಂದ ಇಡೀ ಗ್ರಾಮ ಶೋಕಸಾಗರದಲ್ಲಿ ಮುಳುಗಿತ್ತು.

ತಾವು ಹಾಗೂ ತಮ್ಮ ಮಕ್ಕಳ ಸಾವಿಗೆ ಯಾರೂ ಕಾರಣರಲ್ಲ. ತಮ್ಮ ಕುಟುಂಬದ ಸಾವಿಗೆ ತಾವೇ ಜವಾಬ್ದಾರರು ಎಂದು ಗೋಪಾಲ ಡೆತ್‌ನೋಟ್‌ ಬರೆದಿಟ್ಟಿದ್ದಾರೆ. ಅಲ್ಲದೇ ಡೆತ್‌ನೋಟ್‌ ಪಕ್ಕದಲ್ಲಿಯೇ ತಮ್ಮ ಅಂತ್ಯಸಂಸ್ಕಾರಕ್ಕೆ ಸುಮಾರು 20 ಸಾವಿರ ರುಪಾಯಿಗಳನ್ನು ಇಟ್ಟಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ನಿಡಸೋಸಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸಂಕೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋವಿಡ್‌ ಖಿನ್ನತೆಗೆ ರಾಜ್ಯದಲ್ಲಿ 41 ಸಾವು

ಕೊರೋನಾ ಸೋಂಕಿನ ಸಂಕಷ್ಟಕ್ಕೆ ರಾಜ್ಯದಲ್ಲಿ ಈವರೆಗೆ 36 ಮಂದಿಯ ಜೀವನಷ್ಟವಾಗಿತ್ತು. ಬೋರಗಲ್‌ ಗ್ರಾಮದ ದುರಂತದೊಂದಿಗೆ ಈ ಸಂಖ್ಯೆ 41ಕ್ಕೇರಿದೆ. ಸೋಂಕಿನ ಭೀತಿ, ತಮ್ಮವರನ್ನು ಕಳೆದುಕೊಂಡ ನೋವು, ಕೃಷಿ- ಉದ್ಯಮದಲ್ಲಾದ ನಷ್ಟ, ಕೆಲಸ ಕಳೆದುಕೊಂಡು ಬದುಕು ನಡೆಸುವುದು ಹೇಗೆಂಬ ಚಿಂತೆ, ಖಿನ್ನತೆಗಳು ಆತ್ಮಹತ್ಯೆಗೆ ಕಾರಣವಾಗಿದ್ದವು. ಉಡುಪಿಯಲ್ಲಿ ಅತಿ ಹೆಚ್ಚು 11 ಮಂದಿ ಈ ಕಾರಣಗಳಿಗೆ ಸಾವಿಗೀಡಾಗಿದ್ದರೆ, ರಾಜಧಾನಿ ಬೆಂಗಳೂರಿನಲ್ಲಿ 9 ಮಂದಿ ಆತ್ಮಹತ್ಯೆಗೆ ಶರಣಾಗಿದ್ದರು.

click me!