ಹಿಂದಿನ ರದ್ದಾದ ಕಾಮಗಾರಿಗಳಿಗೆ ಮರುಚಾಲನೆ: ಡಿಸಿಎಂ ಡಿ.ಕೆ. ಶಿವಕುಮಾರ್‌

Published : Jul 27, 2023, 05:18 AM IST
ಹಿಂದಿನ ರದ್ದಾದ ಕಾಮಗಾರಿಗಳಿಗೆ ಮರುಚಾಲನೆ: ಡಿಸಿಎಂ ಡಿ.ಕೆ. ಶಿವಕುಮಾರ್‌

ಸಾರಾಂಶ

ಮಳೆ ನಡುವೆ ಡಿಸಿಎಂ ಸಿಟಿ ರೌಂಡ್ಸ್‌, ಸರ್ವಜ್ಞನಗರ ಕ್ಷೇತ್ರದ ಉದ್ಯಾನಗಳು, ಮೇಲ್ಸೇತುವೆ ನಿರ್ಮಾಣ ಕಾರ‍್ಯ ಪರಿಶೀಲನೆ, ಬಾಣಸವಾಡಿ ಕೆರೆಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭೇಟಿ

ಬೆಂಗಳೂರು(ಜು.27):  ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೇಲ್ಸೇತುವೆ ನಿರ್ಮಾಣ, ಉದ್ಯಾನಗಳ ಅಭಿವೃದ್ಧಿ ಕಾಮಗಾರಿ ಸ್ಥಳಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮಳೆಯ ನಡುವೆಯೇ ಸ್ಥಳ ಪರಿಶೀಲನೆ ನಡೆಸಿದ ಡಿ.ಕೆ. ಶಿವಕುಮಾರ್‌, ಮೊದಲಿಗೆ ಒಎಂಬಿಆರ್‌ ಪಂಪ್‌ಹೌಸ್‌ಗೆ ಭೇಟಿ ನೀಡಿ ಕಾಮಗಾರಿಯ ನೀಲಿನಕ್ಷೆ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಬಾಣಸವಾಡಿ ಕೆರೆಗೆ ಭೇಟಿ ನೀಡಿ, ಅಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳು, 47 ಎಕರೆ ವಿಸ್ತೀರ್ಣದ ಕೆರೆಯು ಈಗ 17 ಎಕರೆ ಮಾತ್ರ ಉಳಿದಿದೆ. ಉಳಿದ ಜಾಗದಲ್ಲಿ ಬಡಾವಣೆಗಳು ನಿರ್ಮಾಣವಾಗಿದೆ. ಕೆರೆ ಪಕ್ಕದಲ್ಲಿನ ಜಾಗದಲ್ಲಿ ಉದ್ಯಾನ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸರ್ಕಾರ ಉರುಳಿಸಲು ಎಚ್‌ಡಿಕೆ ಪಿತೂರಿ: ಯಾವ ಶಾಸಕರಿಗೆ ಗಾಳ ಅಂತ ಗೊತ್ತಿದೆ -ಡಿಕೆಶಿ

ಕಾಚರಕನಹಳ್ಳಿ ಕೆರೆಗೆ ಭೇಟಿ ನೀಡಿ, ಕೆರೆ ಸುತ್ತಲಿನ ಕೊಳಗೇರಿ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಿ ಕೆರೆ ಜಾಗ ವಾಪಾಸ್‌ ಪಡೆಯಲು ನ್ಯಾಯಾಲಯದಿಂದ ಅನುಮತಿ ದೊರೆತಿದೆ. ಕೊಳಗೇರಿ ಪ್ರದೇಶದಲ್ಲಿ ಉದ್ಯಾನ ಮತ್ತು ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ಡಿಪಿಆರ್‌ಗೆ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ದೊರೆಯಬೇಕಿದೆ. ಅಲ್ಲದೆ, ಕಾಮಗಾರಿಗಾಗಿ ಹೆಚ್ಚಿನ ಅನುದಾನದ ಅವಶ್ಯಕತೆ ಯಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪರಿವೀಕ್ಷಣೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಸರ್ವಜ್ಞನಗರ ಕ್ಷೇತ್ರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗಾಗಿ ಮಾರುತಿ ಸೇವಾ ನಗರ ಮೇಲ್ಸೇತುವೆ ವಿಸ್ತರಣೆಗೆ ಪ್ರಸ್ತಾವನೆಯಿದ್ದು, ಹಾಲಿ ಇರುವ ಮೇಲ್ಸೇತುವೆಯನ್ನು ಪರಿಶೀಲಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕೆರೆಗಳ ಪಕ್ಕದಲ್ಲಿ ಉದ್ಯಾನ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿಂದೆ ಮಂಜೂರಾಗಿದ್ದ ಕಾಮಗಾರಿಗಳನ್ನು ಹಿಂದಿನ ಸರ್ಕಾರ ರದ್ದು ಮಾಡಿದೆ. ಈಗ ಅವೆಲ್ಲಕ್ಕೂ ಮರುಚಾಲನೆ ನೀಡಲಾಗುವುದು. ಅದಕ್ಕೂ ಮುನ್ನ ಸ್ಥಳ ಪರಿಶೀಲನೆಗಾಗಿ ಬಂದಿದ್ದು, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದರು.

ಕೊಳಗೇರಿ ನಿವಾಸಿಗಳ ಸ್ಥಳಾಂತರಕ್ಕೆ ಯೋಜನೆ: ಸಚಿವ ಜಾರ್ಜ್‌ ಮಾಹಿತಿ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕೊಳಗೇರಿ ನಿವಾಸಿಗಳ ಸ್ಥಳಾಂತರಕ್ಕೆ ಜಾಗ ನೋಡಿದ್ದಾರಾ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿ, ಅವರಿಗೆ ಸೂಕ್ತ ಜಾಗ ನೀಡಿ ವ್ಯವಸ್ಥೆ ಮಾಡಬೇಕು ಎಂದರು.

ಸಚಿವ ಕೆ.ಜೆ.ಜಾರ್ಜ್‌ ಪ್ರತಿಕ್ರಿಯಿಸಿ, ಕೆ.ಆರ್‌.ಪುರ ಬಳಿ ನಾಲ್ಕು ಎಕರೆ ಜಾಗ ನಿಗದಿ ಮಾಡಲಾಗಿತ್ತು. ಆದರೆ, ಈಗ ಅಲ್ಲಿ ಒಂದು ಎಕರೆ ಮಾತ್ರ ಜಾಗ ಉಳಿದಿದ್ದು, ಉಳಿದ ಮೂರು ಎಕರೆಯನ್ನು ಬೇರೆ ಉದ್ದೇಶಕ್ಕೆ ಬಳಸಿ ಕೊಳ್ಳಲಾಗಿದೆ. ಸದ್ಯ ಒಂದು ಎಕರೆ ಜಾಗವನ್ನು ಮಾತ್ರ ಪಡೆದು, ಬೇರೆಡೆ ಮೂರು ಎಕರೆ ಜಾಗ ಪಡೆದು ಸ್ಥಳಾಂತರಿಸಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

PREV
Read more Articles on
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ