ಇಲ್ಲಿಗೆ ಸಮೀಪದ ಅಜ್ಜಾವರ ಎಂಬಲ್ಲಿ ಎರಡು ಮರಿಯಾನೆಗಳ ಸಹಿತ ನಾಲ್ಕು ಕಾಡಾನೆಗಳು ಕೆರೆಗೆ ಬಿದ್ದು ಹೊರಬರಲಾಗದೆ ಪರದಾಟ ನಡೆಸಿದವು. ಅರಣ್ಯ ಇಲಾಖೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯ ಬಳಿಕ ಕಾಡಾನೆಗಳನ್ನು ಕೆರೆಯಿಂದ ಮೇಲೆತ್ತಿ ಕಾಡಿಗೆ ಬಿಡಲಾಯಿತು.
ಸುಳ್ಯ (ಏ.14) : ಇಲ್ಲಿಗೆ ಸಮೀಪದ ಅಜ್ಜಾವರ ಎಂಬಲ್ಲಿ ಎರಡು ಮರಿಯಾನೆಗಳ ಸಹಿತ ನಾಲ್ಕು ಕಾಡಾನೆಗಳು ಕೆರೆಗೆ ಬಿದ್ದು ಹೊರಬರಲಾಗದೆ ಪರದಾಟ ನಡೆಸಿದವು. ಅರಣ್ಯ ಇಲಾಖೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯ ಬಳಿಕ ಕಾಡಾನೆಗಳನ್ನು ಕೆರೆಯಿಂದ ಮೇಲೆತ್ತಿ ಕಾಡಿಗೆ ಬಿಡಲಾಯಿತು.
ಅಜ್ಜಾವರ ಗ್ರಾಮದ ತುದಿಯಡ್ಕ ದ ಸಂತೋಷ್ ಅವರ ತೋಟದ ಕೆರೆಯಲ್ಲಿ ಗುರುವಾರ ಬೆಳಗ್ಗೆ ಎರಡು ದೊಡ್ಡ ಗಾತ್ರದ ಆನೆ ಹಾಗೂ ಎರಡು ಮರಿಯಾನೆಗಳು ಕಂಡು ಬಂತು. ಬುಧವಾರ ರಾತ್ರಿ ಏಳೆಂಟು ಆನೆಗಳು ತುದಿಯಡ್ಕ ಪ್ರದೇಶದಲ್ಲಿ ಬಂದಿದ್ದು ರಾತ್ರಿ ಪೂರ್ತಿ ತೋಟವನ್ನು ಪುಡಿಗಟ್ಟಿತ್ತು. ವಾಪಸ್ ಹಿಂತಿರುಗುವಾಗ ಗುಂಪಿನಲ್ಲಿದ್ದ ಆನೆಗಳ ಪೈಕಿ ಮರಿಯಾನೆಯೊಂದು ಕೆರೆಗೆ ಬಿದ್ದಿರಬಹುದೆಂದೂ ಅದನ್ನು ಹತ್ತಿಸಲು ದೊಡ್ಡಾನೆಗಳು ಇಳಿದು ಮೇಲೆ ಬರಲಾಗದೆ ನೀರಲ್ಲಿ ಸಿಲುಕಿರಬಹುದೆಂದು ಶಂಕಿಸಲಾಗಿತ್ತು.
Wildlife: ಬಾಲಕಿಯನ್ನ ಬಲಿಪಡೆದ ಪುಂಡಾನೆ: ಕಾರ್ಯಾಚರಣೆ ವೇಳೆ ವೈದ್ಯನ ಮೇಲೂ ದಾಳಿ!
ಸ್ಥಳದಲ್ಲಿ ಜನರು ಜಮಾಯಿಸಿದ್ದರು. ಕೆರೆಯಲ್ಲಿದ್ದ ಆನೆಗಳು ಮೇಲೆ ಬರಲಾಗದೆ ಘೀಳಿಡುತ್ತಿದ್ದರೆ ಇನ್ನೊಂದು ಭಾಗದಿಂದ ಕಾಡಾಂಚಿನಿಂದಲೂ ಕಾಡಾನೆಗಳು ಘೀಳಿಡುತ್ತಿರುವ ಶಬ್ದ ಕೇಳಿ ಬರುತಿತ್ತು. ಆನೆಗಳ ಪರದಾಟದಿಂದ ಕೆರೆ ಪೂರ್ತಿ ಕೆಸರುಮಯವಾಗಿತ್ತು.
ರಕ್ಷಣಾ ಕಾರ್ಯಾಚರಣೆ: ಅರಣ್ಯ ಇಲಾಖೆಯವರು ಆಗಮಿಸಿದ ಬಳಿಕ ಊರವರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಯಿತು. ಕೆರೆಯ ಒಂದು ಭಾಗದಲ್ಲಿ ಅಗೆದ ಕಾರಣ ದೊಡ್ಡ ಗಾತ್ರದ ಎರಡು ಆನೆಗಳು ಮೇಲಕ್ಕೆ ಬಂದು ಕಾಡು ಸೇರಿದವು. ಒಂದು ಮರಿಯಾನೆ ಕಷ್ಟದಲ್ಲೇ ಅದೇ ದಾರಿಯಲ್ಲಿ ಮೇಲೆ ಬಂತು. ಬಳಿಕ ಒಂದು ಮರಿಯಾನೆ ಕೆರೆಯಲ್ಲೇ ಬಾಕಿಯಾಯಿತು. ಅದು ಸುಲಭದಲ್ಲಿ ಮೇಲಕ್ಕೆ ಬರಲಿಲ್ಲ. ಅದರ ಕುತ್ತಿಗೆಗೆ ಹಗ್ಗ ಹಾಕಿ ಮೇಲೆತ್ತುವ ಪ್ರಯತ್ನ ನಡೆಯಿತು. ಕೆಲ ಹೊತ್ತು ಕಾರ್ಯಾಚರಣೆ ಬಳಿಕ ಅರಣ್ಯ ಇಲಾಖಾ ಸಿಬ್ಬಂದಿ ಮತ್ತು ಊರಿನ ಕೆಲ ಯುವಕರು ಕೆರೆಗೆ ಇಳಿದು ಆನೆ ಮರಿಯನ್ನು ದೂಡಿ ಮೇಲೆ ಹತ್ತಿಸಿದರು. ಆದರೆ ಆನೆ ಸುಸ್ತಾಗಿದ್ದು ಸರಿಯಾಗಿ ನಡೆದಾಡಲೂ ಸಾಧ್ಯವಾಗದಿದ್ದರಿಂದ ಅದನ್ನು ದೂಡಿಕೊಂಡು ಕಾಡಂಚಿಗೆ ಸಾಗಿಸಲಾಯಿತು.
Wildlife: ಚನ್ನಗಿರಿಯಲ್ಲಿ ಕಾಡಾನೆ ಆತಂಕ: ಗ್ರಾಮಸ್ಥರು ಎಚ್ಚರಿಕೆ ಇರುವಂತೆ ಅರಣ್ಯ ಇಲಾಖೆ ಸೂಚನೆ