'ರೇಣುಕಾಸ್ವಾಮಿ ಸತ್ತಿದ್ದಾನೆ ಅಂದಾಗ ನಾನು ಕೂಡ ಶೂಟ್ ಮಾಡಿಕೊಳ್ಳುತ್ತೇನೆ ಅಂದಿದ್ರು ದರ್ಶನ್': ಕೋರ್ಟ್‌ಗೆ ಮಾಫಿ ಸಾಕ್ಷಿ ಪ್ರದೋಷ್‌ ಹೇಳಿದ ಸ್ಫೋಟಕ ಸತ್ಯಗಳು

Published : Sep 29, 2026, 09:18 PM IST
renukaswamy murder case

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿ ಪ್ರದೋಷ್ ನ್ಯಾಯಾಲಯದ ಮುಂದೆ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ. ರೇಣುಕಾಸ್ವಾಮಿ ಸಾವಿನ ಸುದ್ದಿ ಕೇಳಿ ಆಘಾತಗೊಂಡ ನಟ ದರ್ಶನ್, ತಾನು ಕೂಡ ಶೂಟ್ ಮಾಡಿಕೊಳ್ಳುವುದಾಗಿ ಹೇಳಿದ್ದರು ಎಂದು ತಿಳಿಸಿದ್ದಾನೆ.

ಬೆಂಗಳೂರು (ಸೆ.29): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಮಹತ್ತರ ತಿರುವು ಲಭಿಸಿದ್ದು, ಪ್ರಕರಣದ ಮಾಫಿ ಸಾಕ್ಷಿ ಪ್ರದೋಷ್ ನ್ಯಾಯಾಲಯದ ಮುಂದೆ ಬೆಚ್ಚಿಬೀಳಿಸುವ ಸಾಲು ಸಾಲು ವಿಷಯಗಳನ್ನು ಬಾಯ್ಬಿಟ್ಟಿದ್ದಾನೆ. "ರೇಣುಕಾಸ್ವಾಮಿ ಸಾವನ್ನಪ್ಪಿದ ಸುದ್ದಿಯನ್ನು ನಾನೇ ಸ್ವತಃ ನಟ ದರ್ಶನ್‌ಗೆ ತಿಳಿಸಿದೆ. ಅದನ್ನು ಕೇಳಿ ತೀವ್ರ ಆಘಾತಕ್ಕೊಳಗಾದ ದರ್ಶನ್, 'ನಾನು ಕೂಡ ಶೂಟ್ ಮಾಡಿಕೊಳ್ಳುತ್ತೇನೆ' ಎಂದು ಹೇಳಿದ್ದರು," ಎಂದು ಪ್ರದೋಷ್ ನ್ಯಾಯಾಧೀಶರ ಮುಂದೆ ಸಾಕ್ಷ್ಯ ನೀಡಿದ್ದಾನೆ.

ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ನ್ಯಾಯಾಧೀಶರಾದ ಸುಜಾತಾ ಸಾಂಬ್ರಾಣಿ ಅವರ ಸಮ್ಮುಖದಲ್ಲಿ ಸೋಮವಾರದಿಂದ ಮಾಫಿ ಸಾಕ್ಷಿಯ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು, ಮಂಗಳವಾರವೂ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿಯಿತು. ಮೊದಲ ದಿನ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಗೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಹಲ್ಲೆ ನಡೆಸಿದ್ದನ್ನು ವಿವರಿಸಿದ್ದ ಪ್ರದೋಷ್, ಮಂಗಳವಾರದ ವಿಚಾರಣೆಯಲ್ಲಿ ಕೊಲೆಯ ನಂತರ ಸಾಕ್ಷ್ಯ ನಾಶ ಮಾಡಲು ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ನಡೆಸಿದ ಸಂಚಿನ ಸುದೀರ್ಘ ವಿವರಗಳನ್ನು ಬಹಿರಂಗಪಡಿಸಿದ್ದಾನೆ.

ಮಂಗಳವಾರ ಕೋರ್ಟ್ ಮುಂದೆ ಪ್ರದೋಷ್ ನೀಡಿದ ಪ್ರಮುಖ ಹೇಳಿಕೆಗಳು

ಸಾವು ಕೇಳಿ ದರ್ಶನ್‌ ಆಘಾತ, 'ಶೂಟ್ ಮಾಡಿಕೊಳ್ತೀನಿ' ಎಂದ ನಟ

"ರೇಣುಕಾಸ್ವಾಮಿ ತೀರಿಹೋದ ಮಾಹಿತಿಯನ್ನು ನಾನೇ ನೇರವಾಗಿ ದರ್ಶನ್ ಅವರಿಗೆ ತಲುಪಿಸಿದೆ. ಇದನ್ನು ಕೇಳಿ ಆಘಾತಗೊಂಡ ದರ್ಶನ್, 'ಯಾರು ಯಾರು?' ಎಂದು ಮತ್ತೆ ಮತ್ತೆ ಕೇಳಿದರು. ನಂತರ ನನ್ನ ಕೈಹಿಡಿದುಕೊಂಡು, 'ಪ್ರದೋಷ್ ಏನಾಯ್ತು ನೋಡಿ, ಏನಾಯ್ತು ನೋಡಿ.. ನಾನು ಕೂಡ ಶೂಟ್ ಮಾಡಿಕೊಳ್ಳುತ್ತೇನೆ' ಎಂದರು. 'ನಾವು ಅಲ್ಲಿಂದ ಹೊರಟಾಗ ಆತ ಬದುಕಿದ್ದ, ಈಗ ಅಲ್ಲಿಗೆ ಹೋಗಿ ಏನಾಯ್ತು ನೋಡಿ' ಎಂದು ಹೇಳಿದರು. ನಾನು ಅವರಿಗೆ 'ಟೆನ್ಷನ್ ಮಾಡಿಕೊಳ್ಳಬೇಡಿ, ನಾನು ನೋಡಿಕೊಳ್ಳುತ್ತೇನೆ' ಎಂದು ಸಮಾಧಾನಪಡಿಸಿ, ಅಲ್ಲಿಂದ ಹೊರಬಂದು ದರ್ಶನ್ ಮ್ಯಾನೇಜರ್ ನಾಗರಾಜ್‌ಗೆ ಫೋನ್ ಮಾಡಿ ಪಟ್ಟಣಗೆರೆ ಶೆಡ್‌ಗೆ ತೆರಳಿದೆ ಎಂದಿದ್ದಾರೆ.

'ರೂಮ್‌ಗೆ ಹೋದ 5 ನಿಮಿಷದಲ್ಲೇ ತೀರಿಹೋಗಿದ್ದ ಎಂದ ಜಗದೀಶ್'

"ನಾನು ಪಟ್ಟಣಗೆರೆ ಶೆಡ್ ಗೇಟ್ ಬಳಿ ಹೋದಾಗ ನಾಗರಾಜ್, ವಿನಯ್, ಲಕ್ಷ್ಮಣ್, ಅನುಕುಮಾರ್, ಜಗದೀಶ್, ರವಿ ಮತ್ತು ಪವನ್ ನಿಂತಿದ್ದರು. 'ಏನಾಯ್ತು?' ಎಂದು ಕೇಳಿದಾಗ, ಚಿತ್ರದುರ್ಗದಿಂದ ಬಂದಿದ್ದ ಜಗದೀಶ್, 'ನೀವು ಹೋದ ಬಳಿಕ ಆತನನ್ನು ರೂಮಿಗೆ ಕರೆದುಕೊಂಡು ಹೋಗಿದ್ದೆವು. ಆ ನಂತರ 5 ನಿಮಿಷದಲ್ಲೇ ರೇಣುಕಾಸ್ವಾಮಿ ತೀರಿಹೋದ' ಎಂದು ಹೇಳಿದ. ಯಾರು ಕರೆದುಕೊಂಡು ಹೋಗಿದ್ದು ಎಂದು ವಿಚಾರಿಸಿದಾಗ, ನಂದೀಶ್ ಮತ್ತು ರಾಘವೇಂದ್ರ ಎಂದು ತಿಳಿಸಿದ ಎಂದಿದ್ದಾರೆ.

ಪೊಲೀಸರಿಗೆ ಶರಣಾಗಲು ನಿರಾಕರಿಸಿದ್ದ ಅನುಕುಮಾರ್

"ನಾನು ಮತ್ತು ವಿನಯ್ ಅವರು ಚಿತ್ರದುರ್ಗದಿಂದ ಬಂದಿದ್ದ ಅನುಕುಮಾರ್, ಜಗದೀಶ್, ರವಿ ಹಾಗೂ ರಾಘವೇಂದ್ರಗೆ ಪೊಲೀಸರಿಗೆ ಶರಣಾಗುವಂತೆ ತಿಳಿಸಿದೆವು. ಆದರೆ ಅವರು ಒಪ್ಪಲಿಲ್ಲ. 'ನಿಮಗೆ ಜಾಮೀನು ಮಾಡಿಸುತ್ತೇವೆ, ನಿಮ್ಮ ಮನೆಗೆ ನೆರವು ನೀಡುತ್ತೇವೆ' ಎಂದು ಭರವಸೆ ನೀಡಿದರೂ, ಅನುಕುಮಾರ್ 'ನಾವು ಏನೂ ಮಾಡಿಲ್ಲ, ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ, ನಾವೇಕೆ ಶರಣಾಗಬೇಕು?' ಎಂದು ಹಠ ಹಿಡಿದ. ಆಗ ನಾನು ಆತನಿಗೆ ಹೆದರಿಸಲು 'ಆರ್.ಆರ್. ನಗರ ಪೊಲೀಸರಿಗೆ ಫೋನ್ ಮಾಡುತ್ತೇನೆ' ಎಂದು ಮೊಬೈಲ್ ತೆಗೆದುಕೊಂಡೆ." ಎಂದಿದ್ದಾರೆ.

ಮೃತದೇಹ ತೆಗೆದುಕೊಂಡು ಹೋಗಲು ರವಿ ನಕಾರ

'ಈ ನಡುವೆ ಶೆಡ್ ಮಾಲೀಕ ವಿನಯ್ ಬಂದು 'ನಮ್ಮ ಶೆಡ್‌ಗೆ ಕೆಟ್ಟ ಹೆಸರು ಬರುತ್ತದೆ' ಎಂದು ಜಗಳವಾಡಿದ. ಆಗ ನಾನು ರಾಘವೇಂದ್ರ, ಅನುಕುಮಾರ್, ಜಗದೀಶ್ ಮತ್ತು ರವಿಗೆ ಮೃತದೇಹವನ್ನು ಚಿತ್ರದುರ್ಗಕ್ಕೆ ತೆಗೆದುಕೊಂಡು ಹೋಗುವಂತೆ ಹೇಳಿದೆ. ಆದರೆ ರವಿ ಎಂಬಾತ, 'ನಾನು ಬಾಡಿಗೆಗೆ ಬಂದಿದ್ದೀನಿ, ನಾನೇಕೆ ಶವ ತೆಗೆದುಕೊಂಡು ಹೋಗಲಿ?' ಎಂದು ನಕಾರ ವ್ಯಕ್ತಪಡಿಸಿದ' ಎಂದು ತಿಳಿಸಿದ್ದಾರೆ.

ಪರಿಚಿತ ಪಿಎಸ್‌ಐಗೆ ಕರೆ ಮಾಡಿ ಉಪಾಯ ಕೇಳಿದ್ದ ಪ್ರದೋಷ್

"ಏನೂ ತೋಚದೆ ನಾನು ಪರಿಚಿತ ಸಬ್‌ಇನ್‌ಸ್ಪೆಕ್ಟರ್ ವಿನಯ್‌ಗೆ ಕರೆ ಮಾಡಿ, 'ನಮಗೆ ಗೊತ್ತಿರುವ ಹುಡುಗರ ಮಧ್ಯೆ ಹಣದ ವ್ಯವಹಾರಕ್ಕೆ ಗಲಾಟೆಯಾಗಿ ಒಬ್ಬ ಸತ್ತಿದ್ದಾನೆ, ಏನು ಮಾಡುವುದು?' ಎಂದು ಕೇಳಿದೆ. ಅದಕ್ಕೆ ಪಿಎಸ್‌ಐ, 'ಗೊತ್ತಿಲ್ಲದೆ ಏನೂ ಹೇಳಲಾಗದು, ಇದೊಂದು ಗಂಭೀರ ಅಪರಾಧವಾದ್ದರಿಂದ ತಕ್ಷಣ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹೋಗಿ ಶರಣಾಗಲು ಹೇಳಿ' ಎಂದು ಸಲಹೆ ನೀಡಿದರು' ಎಂದಿದ್ದಾರೆ.

ರಾಘವೇಂದ್ರನ ಮನವೊಲಿಕೆ ಮತ್ತು ದುಡ್ಡಿನ ಜಗಳವೆಂದು ಸುಳ್ಳು ಕಥೆ

"ಬಳಿಕ ನಾನು ಮತ್ತು ನಾಗರಾಜ್ ಸೇರಿ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರನ ಮನವೊಲಿಸಿದೆವು. 'ನಿನ್ನ ಮನೆ ನೋಡಿಕೊಳ್ಳುತ್ತೇವೆ, ಜಾಮೀನು ಕೊಡಿಸುತ್ತೇವೆ' ಎಂದಾಗ ಆತ ಶರಣಾಗಲು ಒಪ್ಪಿದ. ನಂತರ ಮತ್ತೆ ಪಿಎಸ್‌ಐಗೆ ಕರೆ ಮಾಡಿ, 'ಹಣಕಾಸಿನ ವಿಚಾರಕ್ಕೆ ಗಲಾಟೆ ಮಾಡಿ ಒಬ್ಬನನ್ನು ಹೊಡೆದು ಸಾಯಿಸಲಾಗಿದೆ' ಎಂದು ಸುಳ್ಳು ಕಥೆ ಹೆಣೆದು ತಿಳಿಸಿದೆ. ಮೂರ್ನಾಲ್ಕು ಜನ ಶರಣಾದರೆ 3 ತಿಂಗಳಲ್ಲಿ ಜಾಮೀನು ಸಿಗುತ್ತದೆ ಎಂದು ಹೇಳಿ ಶರಣಾಗತಿಗೆ ಸಿದ್ಧತೆ ಮಾಡಿದೆವು' ಎಂದು ಪ್ರದೂಷ್‌ ಹೇಳಿದ್ದಾರೆ.

ಮೈಸೂರಿಗೆ ಹೊರಟಿದ್ದ ದರ್ಶನ್, 30 ಲಕ್ಷ ರೂ.ಗಳ ಹಣದ ಪ್ಲಾನ್

"ಎಲ್ಲಾ ವ್ಯವಸ್ಥೆ ಮಾಡಿದ ನಂತರ ದರ್ಶನ್ ಮನೆಗೆ ಹೋದೆವು. ದರ್ಶನ್ ಹಾಲ್‌ನಲ್ಲಿ ಕುಳಿತಿದ್ದರು. 'ನಾನು ಮೈಸೂರಿಗೆ ಹೊರಟಿದ್ದೆ, ಈ ಸುದ್ದಿ ಕೇಳಿ ವಾಪಸ್ ಬಂದೆ' ಎಂದರು. ಅವರಿಗೆ ಪಿಎಸ್‌ಐ ಜೊತೆ ಮಾತನಾಡಿದ್ದನ್ನು ತಿಳಿಸಿ 'ತಲೆಕೆಡಿಸಿಕೊಳ್ಳಬೇಡಿ, ನಾವು ನೋಡಿಕೊಳ್ಳುತ್ತೇವೆ' ಎಂದು ಧೈರ್ಯ ತುಂಬಿದೆ. ಈ ವೇಳೆ ವಿನಯ್ ಕೂಡ ತನ್ನ ಕಡೆಯಿಂದ ಇಬ್ಬರನ್ನು ಶರಣಾಗಿಸುವುದಾಗಿ ಹೇಳಿದ. ಆರೋಪಿಗಳ ಮನೆ ಖರ್ಚು, ಜೈಲು ಖರ್ಚು ಹಾಗೂ ಜಾಮೀನು ಪ್ರಕ್ರಿಯೆಗೆ ಕನಿಷ್ಠ 30 ಲಕ್ಷ ರೂಪಾಯಿ ಬೇಕಾಗುತ್ತದೆ ಎಂದು ದರ್ಶನ್ ಬಳಿ ತಿಳಿಸಿದೆ' ಎಂದಿದ್ದಾರೆ.

ವಿಚಾರಣೆ ಬುಧವಾರಕ್ಕೆ ಮುಂದೂಡಿಕೆ

ಮಂಗಳವಾರ ಪ್ರದೋಷ್ ನೀಡಿದ ಈ ಎಲ್ಲಾ ಮಹತ್ವದ ಸಾಕ್ಷ್ಯ ಮತ್ತು ಹೇಳಿಕೆಗಳನ್ನು ನ್ಯಾಯಾಧೀಶರಾದ ಸುಜಾತಾ ಸಾಂಬ್ರಾಣಿ ಅವರು ನ್ಯಾಯಾಲಯದ ದಾಖಲೆಗೆ ಪಡೆದುಕೊಂಡರು. ತದನಂತರ ಮುಂದಿನ ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 12 ಗಂಟೆಗೆ ಮುಂದೂಡಿದ್ದಾರೆ.

PREV
Read more Articles on
click me!

Recommended Stories

ಆಟೋದಲ್ಲಿ ರಜನಿಕಾಂತ್ ಎಂಟ್ರಿ, ಕರ್ನಾಟಕದ ಪ್ರಸಿದ್ಧ ದೇಗುಲದಲ್ಲಿ ನಡೀತಿದ್ದ ಶೂಟಿಂಗ್‌ ಸೆಟ್‌ಗೆ ಭಾರತಿ ವಿಷ್ಣುವರ್ಧನ್‌ ಭೇಟಿ
Wipro ಬೆಂಗಳೂರು ಮ್ಯಾರಾಥಾನ್‌ನಲ್ಲಿ ಸಂಘಟಕರ ಎಡವಟ್ಟು: ನೀರಿಲ್ಲದೆ, ಶೌಚಾಲಯ ಸೌಲಭ್ಯ ಇಲ್ಲದೆ ಆಕ್ರೋಶ ಹೊರಹಾಕಿದ ಅಥ್ಲೀಟ್ಸ್‌