ಮಹಾರಾಷ್ಟ್ರ ರಾಜ್ಯದ ರೈತರ ಬಂಧಿಸಿರುವ ಹಸುಕರುಗಳನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ತಹಸೀಲ್ದಾರ್ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶಿರಾ : ಮಹಾರಾಷ್ಟ್ರ ರಾಜ್ಯದ ರೈತರ ಬಂಧಿಸಿರುವ ಹಸುಕರುಗಳನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ತಹಸೀಲ್ದಾರ್ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಧನಂಜಯರಾದ್ಯ ಅವರು ಮಹಾರಾಷ್ಟ್ರದ ರೈತರು ಚಿಂತಾಮಣಿ ಸಂತೆಯಲ್ಲಿ ಕೊಂಡು 110 ಹೈಬ್ರಿಡ್ ಎಚ್.ಎಫ್ ತಳಿ ಹಸುಗಳನ್ನು ಸಾಗಾಣೆ ಮಾಡುತ್ತಿದ್ದಾಗ ಮಾಚ್‌ರ್ 3ರಂದು ತುಮಕೂರು ನಗರ ಪೊಲೀಸರು ಗೋಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ ಮೊಕದ್ದಮೆ ದಾಖಲಿಸಿ ಬಂಧಿಸಿ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಸರ್ಕಾರಿ ಗೋಶಾಲೆಗೆ ಕಳುಹಿಸಿದ್ದಾರೆ. ಬಂಧಿಸಿರುವ ಹಸುಗಳು ಹಾಲು ಕರೆಯುವ ಮತ್ತು ತುಂಬು ಗರ್ಭ ಧರಿಸಿರುವ ಹಸುಗಳಾಗಿದ್ದು, ಗೋಶಾಲೆಗೆ ಬಂದ ಮೇಲೆ 40 ಹಸುಗಳು ಕರು ಹಾಕಿವೆ. ಮತ್ತು ಕೆಲವು ಕರು ಹಾಕುವ ಹಂತದಲ್ಲಿವೆ. ಎಲ್ಲಾ ಹಸುಗಳು ಸುಮಾರು 75 ಸಾವಿರದಿಂದ 1 ಲಕ್ಷ ರು. ಮೌಲ್ಯದ ಹಸುಗಳಾಗಿವೆ. ಬಂಧಿಸಿರುವ ಹಸುಗಳ ಒಟ್ಟು ಮೌಲ್ಯ 1.50 ಕೋಟಿಗಳಾಗಿದ್ದು, ಎಲ್ಲಾ ಹಸುಗಳು ಸಾಕಾಣಿಕೆ ಮಾಡಲು ಖರೀದಿಸಿ ಮಹಾರಾಷ್ಟ್ರಕ್ಕೆ ಸಾಗಾಣೆ ಮಾಡುತ್ತಿದ್ದ ಸಂದರ್ಭದಲ್ಲಿ ದಾಖಲಾತಿಗಳನ್ನು ಪರಿಶೀಲಿಸದೆ ದುರುದ್ದೇಶದಿಂದ ಮೊಕದ್ದಮೆ ದಾಖಲಿಸಿರುವುದರಿಂದ ರೈತರಿಗೆ ಅಪಾರ ನಷ್ಟಉಂಟಾಗಿದೆ. ಆದ್ದರಿಂದ ಕೂಡಲೇ ಎಲ್ಲಾ ಹಸುಕರುಗಳನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಗೋಶಾಲೆಯಲ್ಲಿ ಮೂಲ ಸೌಕರ್ಯ ವ್ಯವಸ್ಥೆ ಇಲ್ಲ. ನೀರು ಮತ್ತು ನೆರಳಿನ ಸೌಕರ್ಯ ಪೂರ್ಣ ಪ್ರಮಾಣದಲ್ಲಿ ಇಲ್ಲ. ಬಿಸಿಲು, ಗಾಳಿ, ಮಳೆಗೆ ರಕ್ಷಣೆ ಇಲ್ಲದೆ ಇರುವುದರಿಂದ ಕರುಗಳು ಬಡವಾಗುತ್ತಿದ್ದು, ಕರುಗಳ ಆರೋಗ್ಯ ಹದಗೆಡುತ್ತಿದೆ. ಆಹಾರದ ಕೊರತೆಯೂ ಸೇರಿ ದಿನೇ ದಿನೇ ಹಸು ಕರುಗಳು ಬಡವಾಗುತ್ತಿವೆ. ಅವುಗಳ ಮೌಲ್ಯವು ಕಡಿಮೆಯಾಗುತ್ತಿದೆ. ಗೋಶಾಲೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ದನಕರುಗಳ ಸಗಣಿ ಕಸಗಳ ವಿಲೇವಾರಿಯಾಗುತ್ತಿಲ್ಲ. ಒಂದೇ ರೀತಿಯ ಮುಸುಕಿನ ಜೋಳದ ಮೇವನ್ನು ಒದಗಿಸಲಾಗುತ್ತಿದೆ. ಮೇವನ್ನು ಸಣ್ಣ ಚೂರುಗಳನ್ನಾಗಿ ಮಾಡದೇ ಇರುವುದರಿಂದ ಹಸುಗಳ ಪೂರ್ಣ ಮೇವನ್ನು ತಿನ್ನಲು ಸಾಧ್ಯವಾಗದೆ ಮೇವು ಸಹ ನಷ್ಟವಾಗುತ್ತಿದೆ. ಸುಮಾರು 35 ರೈತರಿದ್ದು ಅವರಿಗೆ ಸರ್ಕಾರದಿಂದ ಊಟದ ವ್ಯವಸ್ಥೆ ಮಾಡಿÃಲ್ಲ. ಇದರಿಂದ ರೈತರಿಗೆ ಮಾನಸಿಕ ಹಿಂಸೆಯಾಗುತ್ತಿದೆ. ಹಸುಗಳನ್ನು ಬಿಟ್ಟು ಊರಿಗೂ ಹೋಗಲಾರದೆ ಇಲ್ಲಿಯೂ ಇರಲಾಗದೆ ಕಷ್ಟದಲ್ಲಿದ್ದಾರೆ. ಇದನ್ನು ಮನಗಂಡು ಕೂಡಲೇ ಹಸುಕರುಗಳನ್ನು ಬಿಡುಗಡೆ ಮಾಡಬೇಕೆಂದರು.
ಪ್ರತಿಭಟನೆಯಲ್ಲಿ ಶಿರಾ ತಾಲೂಕು ರೈತ ಸಂಘದ ಅಧ್ಯಕ್ಷ ಸಣ್ಣದ್ಯಾಮೇಗೌಡ, ಕಾರ್ಯದರ್ಶಿ ಬಸವರಾಜು, ಉಪಾಧ್ಯಕ್ಷ ಲಕ್ಕಣ್ಣ ಕುದುರೆಕುಂಟೆ, ಮುಖಂಡರಾದ ಜುಂಜಣ್ಣ, ಜಗದೀಶ್, ನಾರಾಯಣಪ್ಪ, ಪ್ರಕಾಶ್ ಸೇರಿದಂತೆ ಹಲವರು ಹಾಜರಿದ್ದರು.