ಗದಗ: ಅಂತೂ ತಗ್ಗಿದ ಪ್ರವಾಹ, ಶಾಂತಳಾದ ಮಲಪ್ರಭೆ

Kannadaprabha News   | Asianet News
Published : Jul 28, 2021, 10:33 AM IST
ಗದಗ: ಅಂತೂ ತಗ್ಗಿದ ಪ್ರವಾಹ, ಶಾಂತಳಾದ ಮಲಪ್ರಭೆ

ಸಾರಾಂಶ

* ಕಡಿಮೆಯಾಗುತ್ತಿರುವ ನದಿ ನೀರು, ಪ್ರವಾಹದಲ್ಲಿ ಅಲ್ಪ ಪ್ರಮಾಣದ ಇಳಿಕೆ * ಸಂಪೂರ್ಣವಾಗಿ ಕುಗ್ಗಿದ ಬೆಣ್ಣಿಹಳ್ಳ, ಮಲಪ್ರಭಾ ನದಿಗೆ 10 ಸಾವಿರ ಕ್ಯುಸೆಕ್‌ ನೀರು * ಕೊಣ್ಣೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರವೂ ಸಂಚಾರ ಬಂದ್‌  

ಗದಗ(ಜು.28):  ಜಿಲ್ಲೆಯಾದ್ಯಂತ ಮಳೆ ಕಡಿಮೆಯಾಗಿ 3 ದಿನಗಳೇ ಕಳೆದಿದ್ದರೂ ಪ್ರವಾಹದ ಸಂಕಷ್ಟ ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಸಾಗಿದ್ದು, ನರಗುಂದ ತಾಲೂಕಿನ ಲಖಮಾಪುರ, ಕೊಣ್ಣೂರು ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ಮುಂದುವರಿದ್ದು, ಕೊಣ್ಣೂರು ಸಮೀಪದಲ್ಲಿ ಹೆದ್ದಾರಿ ಮೇಲೆ ಸೋಮವಾರದಿಂದ ಹರಿಯುತ್ತಿರುವ ಮಲಪ್ರಭಾ ನದಿ ಮಂಗಳವಾರವೂ ಯಥಾಸ್ಥಿತಿ ಮುಂದುವರಿದ್ದು, ಹೆದ್ದಾರಿ ಸಂಚಾರ ಕೂಡಾ ಬಂದ್‌ ಆಗಿದೆ.

ಮಲಪ್ರಭಾ ನದಿ ಪಾತ್ರದಲ್ಲಿ ಮಳೆ ಪ್ರಮಾಣದಲ್ಲಿ ತೀವ್ರ ಕುಸಿತವಾದ ಹಿನ್ನೆಲೆಯಲ್ಲಿ ಒಳಹರಿವು ಕೂಡಾ ಇಳಿಕೆಯಾಗಿದ್ದು ಡ್ಯಾಂಗೆ 10 ಸಾವಿರ ಕ್ಯುಸೆಕ್‌ ನೀರು ಒಳಹರಿವಿದ್ದು ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಆದರೆ, ಸೋಮವಾರ ಸಂಜೆಯ ವರೆಗೂ 18 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರು ಹರಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲೆಯ ಕೊಣ್ಣೂರು ಗ್ರಾಮದ ಖಾಜಿ ಓಣಿ ಭಾಗದಲ್ಲಿ ನದಿ ನೀರು ನುಗ್ಗಿದೆ.

ಕಳೆದ 5 ದಿನಗಳಿಂದ ಮಲಪ್ರಭಾ ನದಿ ನೀರಿನಿಂದ ನಡುಗಡ್ಡೆಯಾಗಿರುವ ಲಖಮಾಪುರ ಗ್ರಾಮದ ಪರಿಸ್ಥಿತಿ ಮಾತ್ರ ಹಾಗೆಯೇ ಮುಂದುವರಿದ್ದು, ಗ್ರಾಮದ ಹಲವಾರು ಜನರು ಬೆಳ್ಳೇರಿ ಗ್ರಾಮದಲ್ಲಿನ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ, 20ಕ್ಕೂ ಹೆಚ್ಚು ಜನರು ಪ್ರವಾಹ ದಾಟಿ ಗ್ರಾಮಕ್ಕೆ ತೆರಳಿ ಅಲ್ಲಿನ ಪರಿಸ್ಥಿತಿ ಗಮನಿಸಿ ಮತ್ತೆ ಮರಳಿ ಕಾಳಜಿ ಕೇಂದ್ರಕ್ಕೆ ಬಂದಿದ್ದಾರೆ.

ರಾಜಕಾರಣ ಬಿಟ್ಟು ಪ್ರವಾಹದತ್ತ ಗಮನ ನೀಡಲಿ: ಎಚ್‌.ಕೆ. ಪಾಟೀಲ

ಕುಗ್ಗಿದ ಬೆಣ್ಣಿಹಳ್ಳ:

ಸೋಮವಾರ ತಡರಾತ್ರಿಯಿಂದ ಬೆಣ್ಣಿಹಳ್ಳ ಸಂಪೂರ್ಣವಾಗಿ ಕುಗ್ಗಿದ್ದು, ಪ್ರವಾಹ ಪ್ರಮಾಣ ಕಡಿಮೆಯಾಗಿ ಹಳ್ಳದ ಅಕ್ಕ ಪಕ್ಕದ ಜಮೀನುಗಳಲ್ಲಿ ನಿಂತಿದ್ದ ನೀರು ಕೂಡಾ ಬಸಿದು ಹೋಗುತ್ತಿದ್ದು ಬೆಳೆಗಳೆಲ್ಲಾ ಕೆಸರಿನಲ್ಲಿ ಮುಚ್ಚಿ ಹೋಗಿವೆ. ಪ್ರವಾಹ ಸ್ಥಿತಿ ಕಡಿಮೆಯಾದರೂ ರೈತರಿಗೆ ಆಗಿರುವ ಹಾನಿ ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಇದೆ. ಆದರೆ, ರೋಣ- ನರಗುಂದ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಸಮೀಪದಲ್ಲಿ ಪ್ರವಾಹ ಸ್ಥಿತಿ ಕಡಿಮೆಯಾದ ಹಿನ್ನೆಲೆಯಲ್ಲಿ ಸಣ್ಣ ಸಣ್ಣ ವಾಹನಗಳ ಸಂಚಾರ ಪ್ರಾರಂಭವಾಗಿದೆ.

ಮಂಗಳವಾರವೂ ಸಂಚಾರ ಬಂದ್‌:

ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಬಳಿ ಹೆದ್ದಾರಿ ಮೇಲೆ ಹರಿಯುತ್ತಿದ್ದ ಮಲಪ್ರಭಾ ನದಿ ಪ್ರವಾಹ ಮಂಗಳವಾರವೂ ಹಾಗೆಯೇ ಮುಂದುವರಿದಿದ್ದು, ತಾಲೂಕು ಆಡಳಿತ ಮುಂಜಾಗ್ರತಾ ಕ್ರಮವಾಗಿ ಸಂಚಾರ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ವಿಜಯಪುರ, ಬಾಗಲಕೋಟ ಸೇರಿದಂತೆ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದ್‌ ಆಗಿದ್ದು ಪ್ರಯಾಣಿಕರು ಸುತ್ತಿಬಳಸಿ ಪರ್ಯಾಯ ರಸ್ತೆಯ ಮೂಲಕ ಸಂಚರಿಸುವ ಅನಿವಾರ್ಯತೆ ಎದುರಾಗಿದ್ದರೆ, ಸರಕು ತುಂಬಿದ ಹಲವಾರು ವಾಹನಗಳ ಸವಾರರು ತೀವ್ರ ತೊಂದರೆ ಅನುಭವಿಸಿದರು.

ತಗ್ಗಿದ ಪ್ರವಾಹ:

ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹೊರ ಹರಿಸುವ ನೀರು ಕೂಡಾ ಕಡಿಮೆಯಾಗಿದ್ದು ಮಂಗಳವಾರ ಹೊಳೆಆಲೂರು ಸೇರಿದಂತೆ ಮಲಪ್ರಭಾ ನದಿ ಪಕ್ಕದ ಗಾಡಗೋಳಿ, ಹೊಳೆಮಣ್ಣೂರು ಮುಂತಾದ ಗ್ರಾಮಗಳ ಸಮೀಪದಲ್ಲಿ ಹರಿಯುತ್ತಿದ್ದ ನದಿಯಲ್ಲಿ 2 ಅಡಿಗೂ ಹೆಚ್ಚು ನೀರು ಹಿಂದಕ್ಕೆ ಸರಿದಿದ್ದು ಬುಧವಾರ ಬೆಳಗಿನ ಜಾವದವರೆಗೂ ನೀರಿನ ಪ್ರಮಾಣ ಸಂಪೂರ್ಣ ಕಡಿಮೆಯಾಗಲಿದೆ ಎನ್ನುವ ವಿಶ್ವಾಸವನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದು, ಮತ್ತೆ ಮಳೆಯಾದಲ್ಲಿ ಮುಂದೆ ಪ್ರವಾಹ ತೀವ್ರ ತೊಂದರೆ ಸೃಷ್ಟಿಸಲಿದೆ.
 

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!