ಸೋರುತ್ತಿರುವ ಮೆಟ್ರೋ ಚಾವಣಿ

By Suvarna NewsFirst Published Jun 7, 2019, 7:51 AM IST
Highlights

ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಟಿಕೆಟ್‌ ಕೌಂಟರ್‌ ಸಮೀಪವೇ ಮಳೆ ನೀರು ಸೋರಿಕೆಯಾಗಿದೆ. ಇದರಿಂದ ಸಿಬ್ಬಂದಿಯಲ್ಲಿ ಆತಂಕ ಎದುರಾಗಿರುವ ಘಟನೆ ನಡೆದಿದೆ. 

ಬೆಂಗಳೂರು :  ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದ ಚಾವಣಿಯಿಂದ ಮಳೆ ನೀರು ಸೋರಿಕೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೆಟ್ರೋ ನಿಲ್ದಾಣದ ಟಿಕೆಟ್‌ ಕೌಂಟರ್‌ ಸಮೀಪವೇ ಮಳೆ ನೀರು ಸೋರಿಕೆಯಾಗಿದ್ದರಿಂದ ಮೆಟ್ರೊ ಸಿಬ್ಬಂದಿ ಆತಂಕಗೊಂಡ ಘಟನೆ ನಡೆದಿದೆ.

ನಗರದ ಹೃದಯಭಾಗ ಮೆಜೆಸ್ಟಿಕ್‌ನಲ್ಲಿರುವ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಬುಧವಾರ ಸಂಜೆ ಸುರಿದ ಮಳೆಗೆ ಟಿಕೆಟ್‌ ಕೌಂಟರ್‌ ಕೊಠಡಿಯ ಚಾವಣಿಯಲ್ಲಿ ಮಳೆ ನೀರು ಸೋರಲು ಆರಂಭಿಸಿತ್ತು. ಮಳೆ ನೀರು ಸೋರುವ ಜಾಗದಲ್ಲೆಲ್ಲಾ ಮೆಟ್ರೋ ಸಿಬ್ಬಂದಿ ಬಕೆಟ್‌ಗಳನ್ನು ಇಡುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಮೆಟ್ರೋ ಸುರಂಗ ಮಾರ್ಗದ ಕೆಲವು ಕಡೆಗಳಲ್ಲೂ ಸಹ ಮಳೆಗೆ ನೀರು ಸೋರುತ್ತಿದ್ದ ದೃಶ್ಯ ಕಂಡು ಬಂದಿದೆ ಎಂದು ಮೆಟ್ರೋ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ.

ಇದರಿಂದ ಮೆಟ್ರೋ ಮೊದಲ ಹಂತದಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂಬುದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ. ಕಳೆದ ಡಿಸೆಂಬರ್‌ನಲ್ಲಿ ಎಂ.ಜಿ.ರಸ್ತೆಯ ಟ್ರಿನಿಟಿ ಮೆಟ್ರೋ ನಿಲ್ದಾಣದ ಸಮೀಪದ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡು ಸಾಕಷ್ಟುಆತಂಕ ಸೃಷ್ಟಿಸಿತ್ತು. ಕಳೆದ ತಿಂಗಳು ಜಯನಗರ ನ್ಯಾಷನಲ್‌ ಕಾಲೇಜು ಸಮೀಪದ ಪಿಲ್ಲರ್‌ಗಳಲ್ಲೂ ಬಿರುಕು ಕಂಡು ಬಂದಿತ್ತಾದರೂ ರಾತ್ರೋರಾತ್ರಿ ಸರಿಪಡಿಸುವ ಕೆಲಸವನ್ನು ಬಿಎಂಆರ್‌ಸಿಎಲ್‌ ಮಾಡಿತ್ತು.

ಸಾವಿರಾರು ಕೋಟಿ ರುಪಾಯಿಗಳನ್ನು ವೆಚ್ಚ ಮಾಡಿ ನಿರ್ಮಿಸಲಾಗಿರುವ ಸಿಲಿಕಾನ್‌ ಸಿಟಿಯ ಹೆಮ್ಮೆಯ ಮೆಟ್ರೋ ಯೋಜನೆಯಲ್ಲಿ ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿ ನಡೆದಿದ್ದು, ಕೂಡಲೇ ತನಿಖೆಗೆ ವಹಿಸಬೇಕು ಎಂದು ಹಲವು ಮಂದಿ ಮೆಟ್ರೋ ಪ್ರಯಾಣಿಕರು ಆಗ್ರಹಿಸಿದ್ದಾರೆ. ಇಂತಹ ಬೃಹತ್‌ ಯೋಜನೆಯಲ್ಲಿ ಲೋಪಗಳಾಗದಂತೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸೋರಿಕೆ ಜಾಗಕ್ಕೆ ತೇಪೆ

ಕೆಂಪೇಗೌಡ ಮೆಟ್ರೋ ನಿಲ್ದಾಣ ಚಾವಣಿಯಲ್ಲಿ ಬುಧವಾರ ದುರಸ್ತಿ ಕೆಲಸ ನಡೆಯುತ್ತಿತ್ತು. ಈ ವೇಳೆ ಏಕಾಏಕಿ ಮಳೆ ಸುರಿದಿದ್ದರಿಂದ ಸಿಬ್ಬಂದಿ ಅರ್ಧಕ್ಕೆ ಕೆಲಸ ನಿಲ್ಲಿಸಿದರು. ಗುರುವಾರ ದುರಸ್ತಿ ಕೆಲಸ ಪೂರ್ಣಗೊಳಿಸಿದ್ದು, ಸೋರಿಕೆಯಾದ ಜಾಗದಲ್ಲಿ ಸಿಮೆಂಟ್‌ನಿಂದ ಮುಚ್ಚಲಾಗಿದೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

click me!