ರೆಡ್ಡಿ ಸಮುದಾಯ ಹಿಂದಿನಿಂದಲೂ ಕೊಡುಗೈ ದಾನಿಗಳು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಪ್ರಶಂಸಿಸಿದರು.
ತುಮಕೂರು : ರೆಡ್ಡಿ ಸಮುದಾಯ ಹಿಂದಿನಿಂದಲೂ ಕೊಡುಗೈ ದಾನಿಗಳು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಪ್ರಶಂಸಿಸಿದರು.
ಜಿಲ್ಲಾ ರೆಡ್ಡಿ ಜನಸಂಘದ ವತಿಯಿಂದ ಬೆಳಗುಂಬ ರಸ್ತೆಯ ಸಮೀಪದ ಬಡಾವಣೆಯಲ್ಲಿ 5 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಮುದಾಯದ ಶೈಕ್ಷಣಿಕ ಕೇಂದ್ರ, ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ರೆಡ್ಡಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೆಡ್ಡಿ ಸಮುದಾಯದವರು ಹಿಂದೆ ಕೃಷಿಕರಾಗಿದ್ದು, ವಿದ್ಯಾಭ್ಯಾಸಕ್ಕೆ ಅಷ್ಟಾಗಿ ಒತ್ತುಕೊಡುತ್ತಿರಲಿಲ್ಲ. ಈಗ ಕಾಲಬದಲಾಗಿದೆ. ಕೃಷಿಯು ಅಷ್ಟುಲಾಭದಾಯಕವಾಗಿಲ್ಲ. ವಿದ್ಯಾವಂತರಿಗೆ ಉದ್ಯೋಗವಕಾಶಗಳೂ ಹೆಚ್ಚಿದ್ದು ಯಾರೊಬ್ಬರ ಸ್ವತ್ತಲ್ಲ, ಎಲ್ಲರೂ ಪಡೆಯಬೇಕು. ಮಕ್ಕಳಿಗೆ ಆಸ್ತಿ ಮಾಡದೆ ಅವರನ್ನೇ ಆಸ್ತಿವಂತರನ್ನಾಗಿಸಿ ಎಂದರು.
ಜಿಲ್ಲಾ ರೆಡ್ಡಿ ಜನಸಂಘದವರು ಹೆಣ್ಣುಮಕ್ಕಳ ಹಾಸ್ಟೆಲ್ ತೆರೆಯಲು ಮುಂದಾಗಿರುವುದು ಪುಣ್ಯದ ಕೆಲಸ.ಹಾಸ್ಟೆಲ್ ಕೊಠಡಿಗಳಿಗೆ ದಾನಿಗಳ ಹೆಸರಿಟ್ಟು ದೇಣಿಗೆ ಸಂಗ್ರಹಿಸುವಂತೆ ಸಲಹೆ ನೀಡಿದರು.
ನÜಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಹಾಸ್ಟೆಲ್ ನಿರ್ಮಾಣಕ್ಕೆ 2 ಕೋಟಿಯನ್ನು ಸಿಎಂ ಅವರಿಗೆ ನಾನು ಸೇರಿದಂತೆ ಯಲಹಂಕ, ಬಿಟಿಎಂ ಕ್ಷೇತ್ರದ ಶಾಸಕರು ಜೊತೆಗೂಡಿ ಹೋಗಿ ಮಂಜೂರು ಮಾಡಿಸಿದ್ದು, ತ್ವರಿತ ಬಿಡುಗಡೆಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ರೆಡ್ಡಿ ಸಮುದಾಯ ಶಿಕ್ಷಣಕ್ಕೆ ಒತ್ತು ಕೊಡುತ್ತಿರುವುದು ಪ್ರಗತಿಗೆ ಪೂರಕವಾಗಿದೆ. ಹಾಸ್ಟೆಲ್ ನಿರ್ಮಾಣಕ್ಕೆ ಅಗತ್ಯವಾದ ಅನುದಾನ, ಸಹಕಾರವನ್ನು ಸರ್ಕಾರದ ಮಟ್ಟದಲ್ಲಿ ಹೋರಾಡಿ ತರಲು ಶ್ರಮಿಸುವುದಾಗಿ ತಿಳಿಸಿದರು.
ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ, ರೆಡ್ಡಿ ಸಮುದಾಯ ಕೃಷಿ ಮಾತ್ರವಲ್ಲದೆ ಗುತ್ತಿಗೆದಾರರಾಗಿ ಮೂಲಸೌಕರ್ಯ ನಿರ್ಮಾಣ ಕ್ಷೇತ್ರದಲ್ಲೂ ತೊಡಗಿಸಿಕೊಂಡು ಉದ್ಯಮ, ರಾಜಕೀಯ, ವ್ಯವಹಾರ, ಧಾರ್ಮಿಕತೆ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಆದರೆ ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯ ಎಂದಿಗಿಂತ ಹೆಚ್ಚಿದೆ ಎಂದು ಪ್ರತಿಪಾದಿಸಿ ಜಿಲ್ಲಾ ಸಂಘದ ಕಾರ್ಯವನ್ನು ಶ್ಲಾಘಿಸಿದರು.
ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷ ಕೆ.ಶ್ರೀನಿವಾಸರೆಡ್ಡಿ ಮಾತನಾಡಿ, ಹಿಂದೆ ನೂರಾರು ಎಕರೆ ಕೃಷಿ ಭೂಮಿಹೊಂದಿದ್ದ ರೆಡ್ಡಿ ಸಮುದಾಯದವರು ಈಗ ಕೃಷಿ ಭೂಮಿ ಕಳೆದುಕೊಂಡು ಆರ್ಥಿಕವಾಗಿ ಸಬಲರಾಗಿಲ್ಲ. ಈ ಹಿನ್ನೆಲೆಯಲ್ಲಿ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಒತ್ತುಕೊಡಿಸುವ ಸಲುವಾಗಿ ಜಿಲ್ಲಾ ಸಂಘದಿಂದ ಸುಸಜ್ಜಿತ ಹೆಣ್ಣು ಹಾಗೂ ಗಂಡು ಮಕ್ಕಳನ್ನು ಹಾಸ್ಟೆಲ್ ಅನ್ನು ಪ್ರತ್ಯೇಕವಾಗಿ ನಿರ್ಮಿಸಿ ಶೈಕ್ಷಣಿಕವಾಗಿ ಅನುಕೂಲ ಮಾಡಿಕೊಡುತ್ತಿದ್ದು, ಸಮುದಾಯದ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ನಮಗೆ ನೆರವು ನೀಡುತ್ತಾ ಬಂದಿದ್ದಾರೆಂದರು.
ಹರಿಹರ ಯರೇಹೊಸಹಳ್ಳಿ ವೇಮನಪೀಠದ ವೇಮನಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿಧಾನ ಪರಿಷತ್ ಸದಸ್ಯ ಎಚ್.ಎಸ್.ಗೋಪಿನಾಥರೆಡ್ಡಿ, ತುಮಕೂರು ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್.ಮಧುಕರ್, ಜಿಪಂ ಮಾಜಿ ಸದಸ್ಯರಾದ ಕೆ.ಎಚ್. ಕೃಷ್ಣಾರೆಡ್ಡಿ, ಆದಿನಾರಾಯಣರೆಡ್ಡಿ, ರೆಡ್ಡಿ ಜನಸಂಘ ಅಧ್ಯಕ್ಷ ಎಸ್.ಜಯರಾಮರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಆರ್.ಶ್ರೀನಿವಾಸರೆಡ್ಡಿ, ಕಾರ್ಯದರ್ಶಿ ಬಿ.ಆರ್.ಮಧು, ಕೆ.ಜೆ.ರಾಜಗೋಪಾಲರೆಡ್ಡಿ, ಎಂ.ಎ.ಶಿವಾರೆಡ್ಡಿ ಹಾಗೂ ಸಂಘ, ಕ್ರೆಡಿಟ್ ಕೋ ಆಪರೇಟಿವ್ ನ ಪದಾಧಿಕಾರಿಗಳು, ನಿರ್ದೇಶಕರು ಹಾಜರಿದ್ದರು.