ದೇಗುಲಕ್ಕೆ ನೀರು ನುಗ್ಗಿದ್ದಕ್ಕೆ ಹುಳಿಮಾವು ಕೆರೆ ಒಡೆದರಾ?

By Kannadaprabha NewsFirst Published Nov 27, 2019, 9:35 AM IST
Highlights

ಬೆಂಗಳೂರಿನ 140 ಎಕರೆ ಪ್ರದೇಶಕ್ಕೆ ವ್ಯಾಪಿಸಿದ್ದ ಹುಳಿಮಾವಿನ ಕೆರೆ ಒಡೆಯಲು ಕಾರಣವು ಇದಾಗಿದೆಯಾ ಎನ್ನುವ ಶಂಕೆ ಇದೀಗ ಕಾಡಿದೆ.

ವಿಶ್ವನಾಥ ಮಲೇಬೆನ್ನೂರು / ಮೋಹನ ಹಂಡ್ರಂಗಿ

ಬೆಂಗಳೂರು [ನ.26]:  ಹುಳಿಮಾವು ಕೆರೆ ಒಡೆದು 2 ಕಿ.ಮೀ. ವ್ಯಾಪ್ತಿಯ ನೂರಾರು ಮನೆಗಳು ಜಲಾವೃತಗೊಂಡ ದುರ್ಘಟನೆ ನಡೆದು ಬರೋಬ್ಬರಿ ಮೂರು ದಿನ ಕಳೆದರೂ ಕೆರೆ ಒಡೆದವರು ಯಾರೆಂಬುದು ಖಚಿತವಾಗಿಲ್ಲ. ಆದರೆ, ಕೆರೆ ಏರಿ ಪಕ್ಕದಲ್ಲಿರುವ ‘ಕೆರೆ ಕಟ್ಟೆಗಂಗಮ್ಮ ದೇವಸ್ಥಾನ’ಕ್ಕೆ ನೀರು ನುಗ್ಗುವುದನ್ನು ತಡೆಯುವ ಸಲುವಾಗಿ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳು ಕೆರೆಯಿಂದ ನೀರು ಹೊರ ಹಾಕುವ ಪ್ರಯತ್ನಕ್ಕೆ ಮುಂದಾಗಿದ್ದೆ ಈ ಎಲ್ಲಾ ಅನಾಹುತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಈ ಘಟನೆಗೆ ಕಾರಣವೇನು ಎಂಬ ಬಗ್ಗೆ ಬಿಬಿಎಂಪಿ ಹಾಗೂ ಬೆಂಗಳೂರು ಜಲಮಂಡಳಿಯ ಉನ್ನತ ಅಧಿಕಾರಿಗಳು ನಡೆಸಿದ ಆಂತರಿಕ ವಿಚಾರಣೆ ಹಾಗೂ ಪೊಲೀಸರ ತನಿಖೆಯಿಂದ ಈ ಅಂಶ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಕೆರೆಯ ನೀರಿನ ಮಟ್ಟಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಕೆರೆ ಕಟ್ಟೆಗಂಗಮ್ಮ ದೇವಸ್ಥಾನಕ್ಕೆ ನೀರು ನುಗ್ಗಲು ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕರು ನೀರಿನ ಪ್ರಮಾಣ ಕಡಿಮೆ ಮಾಡುವಂತೆæ ಕೆರೆಯ ತ್ಯಾಜ್ಯ ನೀರು ಶುದ್ಧೀಕರಣ ಘಟಕದ ನಿರ್ಮಾಣ ಉಸ್ತುವಾರಿ ಹೊತ್ತಿದ್ದ ಜಲಮಂಡಳಿ ಸಹಾಯಕ ಎಂಜಿನಿಯರ್‌ ಕಾರ್ತಿಕ್‌ ಎಂಬುವವರ ಬಳಿ ಮನವಿ ಮಾಡಿದ್ದರು ಎನ್ನಲಾಗಿದೆ. ಕಾರ್ತಿಕ್‌ ಅವರು ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಬಿಬಿಎಂಪಿ ಹುಳಿಮಾವು ಕೆರೆ ಉಸ್ತುವಾರಿ ಎಂಜಿನಿಯರ್‌ ಶಿಲ್ಪಾ ಅವರ ಸೂಚನೆ ಮೇರೆಗೆ ಸಿಬ್ಬಂದಿ ಎರಡು ಜೆಸಿಬಿಯಿಂದ ಅಲ್ಪ ಪ್ರಮಾಣದ ನೀರು ಹೊರ ಹಾಕುವ ಪ್ರಯತ್ನ ನಡೆಸಲಾಗಿದೆ. ಈ ವೇಳೆ ಆದ ಯಡವಟ್ಟಿನಿಂದಾಗಿ ಕೆರೆ ಏರಿ ಸಂಪೂರ್ಣ ಒಡೆದಿದೆ ಎಂದು ಹೇಳಲಾಗುತ್ತಿದೆ.

ಬಿಬಿಎಂಪಿ ಹಾಗೂ ಜಲಮಂಡಳಿ ಹಿರಿಯ ಅಧಿಕಾರಿಗಳೇ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಅಲ್ಪ ಪ್ರಮಾಣದ ನೀರು ಹೊರ ಹಾಕಲು ಬಿಬಿಎಂಪಿ ಎಂಜಿನಿಯರ್‌ ಶಿಲ್ಪಾ ಜೆಸಿಬಿ ಸಿಬ್ಬಂದಿಗೆ ಸೂಚನೆ ನೀಡಿದ್ದರು. ಆದರೆ ಜೆಸಿಬಿ ಚಾಲಕನ ಅಜಾಗರೂಕತೆಯಿಂದ ಭಾರಿ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಆರೋಪಿ ಸ್ಥಾನದಲ್ಲಿರುವ ಕಾರ್ತಿಕ್‌ ಹಾಗೂ ಶಿಲ್ಪಾ ಅವರನ್ನು ಪೊಲೀಸ್‌ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಬೇರೆ ಆಯಾಮಗಳಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದು, ಅಧಿಕೃತ ಕಾರಣ ಬಯಲಾಗಬೇಕಿದೆ.

ದೂರವಾಣಿಯಲ್ಲೇ ಅನುಮತಿ?

ದೇವಸ್ಥಾನಕ್ಕೆ ನೀರು ನುಗ್ಗುತ್ತದೆ ಎಂಬ ಕಾರಣಕ್ಕೆ ನೀರು ಹೊರ ಬಿಡಲು ಅರ್ಚಕರು ಹಾಗೂ ಸ್ಥಳೀಯರು ಬಿಬಿಎಂಪಿ ಎಂಜಿನಿಯರ್‌ ಶಿಲ್ಪಾ ಅವರಿಗೆ ಕರೆ ಮಾಡಿದ್ದರು. ಈ ವೇಳೆ ಶಿಲ್ಪಾ ಅವರು ದೂರವಾಣಿಯಲ್ಲೇ ತಮ್ಮ ಸಿಬ್ಬಂದಿಗೆ ಸ್ವಲ್ಪ ನೀರು ಹೊರ ಬಿಡಲು ಸೂಚನೆ ನೀಡಿದ್ದರು. ಈ ವೇಳೆ ಜೆಸಿಬಿ ಚಾಲಕ ಹಾಗೂ ಸಹಾಯಕರು ಕಾಮಗಾರಿ ನಡೆಸಿದ್ದಾರೆ ಎಂಬ ಆರೋಪ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿಯಾದ ನಾಗರಾಜ ಮತ್ತು ಸಾಯಿನಾಥ್‌ ರೆಡ್ಡಿ ಹಾಗೂ ಬಿಬಿಎಂಪಿ ಎಂಜಿನಿಯರ್‌ ಶಿಲ್ಪಾ ಅವರನ್ನು ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಹಿಂದೆಯೂ ನೀರು ಹೊರ ಬಿಡಲಾಗಿತ್ತು!

ಹುಳಿಮಾವು ಕೆರೆ ಏರಿ ಒಡೆದು ನೀರನ್ನು ಹೊರ ಬಿಟ್ಟಿರುವುದು ಇದು ಮೊದಲಲ್ಲ. ಈ ಹಿಂದೆ ಕೆರೆಗೆ ಒಳ ಹರಿವಿನ ಪ್ರಮಾಣ ಹೆಚ್ಚಾದ ಸಂದರ್ಭದಲ್ಲಿ ಏರಿ ಒಡೆದು ಹೊರ ನೀರು ಬಿಡಲಾಗುತ್ತಿತ್ತು. ಕಳೆದ ಕೆಲವು ದಿನಗಳ ಹಿಂದೆಯೂ ಕೆರೆ ಉಸ್ತುವಾರಿ ಎಂಜಿನಿಯರ್‌ ಶಿಲ್ಪಾ ಕೆರೆ ನೀರು ಹೊರ ಬಿಡಿಸಿದ್ದರು. ಅದೇ ಸ್ಥಳಕ್ಕೆ ಭಾನುವಾರ ಕಾಲುವೆ ಮಾಡಿ ನೀರು ಹೊರ ಬಿಡುವ ವೇಳೆ ಈ ಘಟನೆ ನಡೆದಿದೆ ಎಂದು ಅನುಮಾನ ವ್ಯಕ್ತವಾಗಿದೆ.

ಮಾಹಿತಿ ನೀಡಿದ್ದು ತಪ್ಪಾ?

ದೇವಸ್ಥಾನಕ್ಕೆ ಚರಂಡಿ ನೀರು ಹರಿದು ಬರುತ್ತಿದ್ದರ ಬಗ್ಗೆ ಅರ್ಚಕರು ಜಲಮಂಡಳಿಯ ಸಹಾಯಕ ಎಂಜಿನಿಯರ್‌ ಕಾರ್ತಿಕ್‌ ಅವರಿಗೆ ತಿಳಿಸಿದ್ದಾರೆ. ಆಗ ಕಾರ್ತಿಕ್‌ ಕೆರೆ ಉಸ್ತುವಾರಿ ವಹಿಸಿದ್ದ ಬಿಬಿಎಂಪಿಯ ಎಂಜಿನಿಯರ್‌ ಶಿಲ್ಪಾ ಅವರಿಗೆ ದೂರವಾಣಿ ಮೂಲಕ ವಿಷಯವನ್ನು ಗಮನಕ್ಕೆ ತಂದಿದ್ದಾರೆ ಅಷ್ಟೇ. ಬಳಿಕ ನಡೆದಿರುದಕ್ಕೆ ಜಲಮಂಡಳಿಯನ್ನು ಹೊಣೆ ಮಾಡುವುದು ಸರಿಯಲ್ಲ. ಸಮಸ್ಯೆಯನ್ನು ಸಂಬಂಧಪಟ್ಟಅಧಿಕಾರಿ ಗಮನಕ್ಕೆ ತಂದಿದ್ದೇ ತಪ್ಪಾ?

-ತುಷಾರ್‌ ಗಿರಿನಾಥ್‌, ಬೆಂಗಳೂರು ಜಲಮಂಡಳಿ ಅಧ್ಯಕ್ಷ.

ಸ್ಥಳದಲ್ಲಿದ್ದವರು ಯಾರು ಪತ್ತೆ ಮಾಡಿ

ದೇವಸ್ಥಾನಕ್ಕೆ ಒಂದು ಅಡಿ ನೀರು ನುಗ್ಗಿತ್ತು ಎಂದು ಮಾಹಿತಿ ಬಂದಿದೆ. ಆದರೆ, ಕೆರೆ ಉಸ್ತುವಾರಿ ಹೊಂದಿದ್ದ ಬಿಬಿಎಂಪಿ ಎಂಜನಿಯರ್‌ ಶಿಲ್ಪಾ ಅವರು ಕೆರೆ ದಡದಲ್ಲಿ ಹಾಕಿದ್ದ ಕಟ್ಟಡ ತ್ಯಾಜ್ಯ ತೆರವುಗೊಳಿಸಲು ದೂರವಾಣಿ ಮೂಲಕ ಸಿಬ್ಬಂದಿಗೆ ಸೂಚಿಸಿದ್ದರು. ಸಂವಹನ ದೋಷದಿಂದ ಕೆರೆ ಏರಿ ಒಡೆಯಲಾಗಿದೆ. ಆದರೆ, ಈ ವೇಳೆ ಸ್ಥಳದಲ್ಲಿ ಹಾಜರಿದ್ದವರು ಯಾರು ಎಂಬುದನ್ನು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದೇವೆ.

-ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ.

ನಿಮ್ಮ ತಪ್ಪನ್ನು ದೇವರ ಮೇಲೆ ಹಾಕ್ಬೇಡಿ

ದೇವಸ್ಥಾನಕ್ಕೆ ನೀರು ನುಗ್ಗುತ್ತದೆ ಎಂಬ ಕಾರಣಕ್ಕೆ ಕೆರೆ ಏರಿ ಒಡೆಯಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಕೆರೆಯ ನೀರು ದೇವಸ್ಥಾನಕ್ಕೆ ನುಗ್ಗುವ ಪರಿಸ್ಥಿತಿ ಇಲ್ಲ. ಅಧಿಕಾರಿಗಳು ಮಾಡಿರುವ ಎಡವಟ್ಟನ್ನು ದೇವಸ್ಥಾನದ ಹೆಸರು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ.

-ಭಾಗ್ಯಲಕ್ಷ್ಮೀ ಮುರಳಿ, ಅರಕೆರೆ ವಾರ್ಡ್‌ನ ಪಾಲಿಕೆ ಸದಸ್ಯೆ.

click me!