ರಾಜ್ಯ ರಾಜಕಾರಣದಲ್ಲಿ ಹೊಸ ಬೆಳವಣಿಗೆ: ನಾಯಕತ್ವ ಬದಲಾವಣೆ ಬಗ್ಗೆ ಸಚಿವ ತಿಮ್ಮಾಪುರ ಹೇಳಿದ್ದೇನು?

Published : May 24, 2026, 05:21 PM IST
RB Timmapur

ಸಾರಾಂಶ

ಸದ್ಯಕ್ಕೆ ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಈ ಸುದ್ದಿಗಳು ಕೇವಲ ಮಾಧ್ಯಮಗಳಲ್ಲಿ ಸುಖಾಸುಮ್ಮನೆ ಓಡಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು. 

ಬಾಗಲಕೋಟೆ (ಮೇ.24): ರಾಜ್ಯ ರಾಜಕಾರಣದ ಬೆಳವಣಿಗೆಗಳ ಮೇಲೆ ಕಾಂಗ್ರೆಸ್ ಹೈಕಮಾಂಡ್ ತೀವ್ರ ನಿಗಾ ಇಟ್ಟಿದೆ. ಆದರೆ, ನನ್ನ ಜ್ಞಾನಕ್ಕೆ ಬಂದ ಮಟ್ಟಿಗೆ ಸದ್ಯಕ್ಕೆ ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಈ ಸುದ್ದಿಗಳು ಕೇವಲ ಮಾಧ್ಯಮಗಳಲ್ಲಿ ಸುಖಾಸುಮ್ಮನೆ ಓಡಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಯಾವ ನಿರ್ದೇಶನ ನೀಡುತ್ತಾರೋ ಅಲ್ಲಿಯವರೆಗೆ ಸದ್ಯದ ಪರಿಸ್ಥಿತಿ ಹೀಗೆಯೇ ಮುಂದುವರಿಯಲಿದೆ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ಬದ್ಧ ಎಂದು ನಮ್ಮ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ನಾಯಕತ್ವದ ಗೊಂದಲದಿಂದಾಗಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ತೊಂದರೆಯಾಗಿಲ್ಲ. ಮುಖ್ಯಮಂತ್ರಿಗಳು ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದಷ್ಟು ಬೇಗ ಹೈಕಮಾಂಡ್ ಮಧ್ಯ ಪ್ರವೇಶಿಸಿ ವದಂತಿಗಳಿಗೆ ಇತಿಶ್ರೀ ಹಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂತ್ರಿ ಸ್ಥಾನ ಸಿಗದಿದ್ದರೆ ದೆಹಲಿಗೆ ಹೋಗಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂಬ ಕೆಲವು ಕಾಂಗ್ರೆಸ್ ಶಾಸಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ತಿಮ್ಮಾಪೂರ ಅವರು, ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ. ಹೀಗಾಗಿ ಶಾಸಕರು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಶಾಸಕರಾದವರು ಸಚಿವರಾಗಲು ಬಯಸುವುದು ಮತ್ತು ಅದಕ್ಕಾಗಿ ಬೇಡಿಕೆ ಇಡುವುದು ಸಹಜ. ಅದರಲ್ಲಿ ಯಾವುದೇ ತಪ್ಪಿಲ್ಲ. ಅಂತಿಮವಾಗಿ ಯಾರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಬೇಕು ಎಂಬುದನ್ನು ಹೈಕಮಾಂಡ್ ಎಲ್ಲವನ್ನೂ ಅಳೆದು ತೂಗಿ, ಸೂಕ್ತ ಲೆಕ್ಕಾಚಾರದೊಂದಿಗೆ ನಿರ್ಧಾರ ಮಾಡಲಿದೆ ಎಂದು ತಿಳಿಸಿದರು.

ತುಷ್ಟೀಕರಣ ಮಾಡುತ್ತಿರುವವರು ಬಿಜೆಪಿಯವರು

ಕಲಬುರ್ಗಿಯ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಪ್ರಕರಣದ ಕೇಸ್ ಹಿಂತೆಗೆದುಕೊಂಡ ವಿಚಾರದ ಕುರಿತು ಮುಸ್ಲಿಂ ತುಷ್ಟೀಕರಣ ಎಂಬ ಬಿಜೆಪಿ ಆರೋಪಕ್ಕೆ ತಿಮ್ಮಾಪೂರ ತಿರುಗೇಟು ನೀಡಿ, ನಾವು ರೈತರ ಕೇಸ್‌ಗಳನ್ನು ವಾಪಸ್ ಪಡೆದಿದ್ದೇವಲ್ಲ. ಅದು ಕೋಮುವಾದವಾ? ಎಂಟರಿಂದ ಒಂಬತ್ತು ರೈತರ ಕೇಸ್‌ ಹಿಂಪಡೆದಿದ್ದೇವೆ, ಅಲ್ಲಿ ಜಾತಿ ಧರ್ಮ ಬಂದಿತ್ತಾ? ಇದಕ್ಕೆ ಕೋಮು ಬಣ್ಣ ಹಚ್ಚೋದು ಬಿಜೆಪಿಯವರು. ತುಷ್ಟೀಕರಣ ರಾಜಕಾರಣ ಮಾಡುತ್ತಿರುವವರು ಬಿಜೆಪಿಯವರು. ಈ ದೇಶದ ಜನರನ್ನು ಒಗ್ಗೂಡಿಸಲು ಎಲ್ಲ ಜಾತಿ ಧರ್ಮದವರನ್ನು ಅಪ್ಪಿಕೊಂಡು ಹೋಗುತ್ತಿರುವ ಪಕ್ಷ ನಮ್ಮದು ಎಂದರು. ಬಿಜೆಪಿಗರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ. ದೇಶವನ್ನು ಅಧೋಗತಿಗೆ ತಂದಂತವರು ಬಿಜೆಪಿಯವರು. ಅವರಿಗೆ ಬೇರೆ ದಂದೆಯೇ ಇಲ್ಲ. ಮುಂಜಾನೆ ಎದ್ದು ಕೂಡಲೇ ಧರ್ಮದ ಹೆಸರಲ್ಲಿ ಬದುಕುವಂತವರು. ಅವರಿಗೆ ಧರ್ಮಾಭಿಮಾನವಿಲ್ಲ, ದೇಶಾಭಿಮಾನವೂ ಇಲ್ಲ ಎಂದು ಆರೋಪಿಸಿದರು

ದೇಶದ ಮಾನ ಮರ್ಯಾದೆ ನಾರ್ವೆಯಲ್ಲಿ ಹರಾಜು

ನಾರ್ವೆಯಲ್ಲಿ ಪ್ರಧಾನಿಗೆ ಇಡೀ ವಿಶ್ವವೇ ಛೀಮಾರಿ ಹಾಕಿದೆ. ಮಾಧ್ಯಮವನ್ನೇ ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವ ಹತ್ತಿಕ್ಕುವ ಕೆಲಸವನ್ನು ಇವರು ಮಾಡುತ್ತಿದ್ದಾರೆ. ಇದಕ್ಕಿಂತ ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತಿನ್ನೇನು ಬೇಕು. ಡಾಲರ್ ಎದುರು ರೂಪಾಯಿ ಮೌಲ್ಯ 96ಕ್ಕೆ ಬಂದಿದೆ. ಪೆಟ್ರೋಲ್, ಡೀಸೆಲ್, ಸಿಲಿಂಡರ್ ದರ ಏರುತ್ತಿದೆ. ದೇಶಗಳ ಜೊತೆ ಒಳ್ಳೆ ಸಂಬಂಧ ಇಟ್ಕೊಂಡು ಇಂತವುಗಳ ಬೆಲೆ ಕಡಿಮೆ ಮಾಡುವುದನ್ನು ಬಿಟ್ಟು. ಸಿಲಿಂಡರ್ ಬೆಲೆ ಜಾಸ್ತಿ ಆದರೆ ಊಟ ಬಿಡಿ. ಪೆಟ್ರೋಲ್, ಡೀಸೆಲ್ ರೇಟ್ ಹೆಚ್ಚಿಗೆ ಆದರೆ ಮನೆಯಲ್ಲಿ ಕೂತುಕೊಳ್ಳಿ ಎಂದು ಈ ರೀತಿ ಮಾತುಗಳನ್ನು ದೇಶದ ಪ್ರಧಾನಿ ಹೇಳಿದ್ರೆ ಜನ ಏನಂತಾರೆ. ಯಾವ ದೇಶದ ಜೊತೆ ಇವರು ಸಂಬಂಧ ಚೆನ್ನಾಗಿ ಇಟ್ಟುಕೊಂಡಿದ್ದಾರೆ. ನಮ್ಮ ದೇಶದ ಮಾನ ಮರ್ಯಾದೆ ಎಲ್ಲವನ್ನು ನಾರ್ವೆಯಲ್ಲಿ ಹರಾಜು ಹಾಕಿದ್ದಾರೆ ಪ್ರಧಾನಿಗಳು ಎಂದು ಸಚಿವ ತಿಮ್ಮಾಪೂರ ಹೇಳಿದರು.

PREV
Read more Articles on
click me!

Recommended Stories

ಬೆಂಗಳೂರು ಬಾಡಿಗೆ ಮನೆಯ ಕರಾಳತೆ: ಗಾಳಿ-ಬೆಳಕಿಲ್ಲದ ಫ್ಲಾಟ್‌ಗೆ 35ಸಾವಿರ ರೆಂಟ್, ಎಸಿ ಹಾಕಿದ್ದಕ್ಕೆ ಮಾಲೀಕನಿಂದ ಕಿರುಕುಳ!
ತುಮಕೂರು ಜಿಲ್ಲೆಯ ಗುಬ್ಬಿ ಬಳಿ HALಗೆ 300 ಎಕರೆ ಜಾಗ: ಸಚಿವ ಡಾ. ಜಿ. ಪರಮೇಶ್ವರ್