
ಬೆಂಗಳೂರು: ದೇಶದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ದರಗಳು ಗಗನಕ್ಕೇರಿರುವುದು ಹೊಸದೇನಲ್ಲ. ಆದರೆ, ದುಬಾರಿ ಬಾಡಿಗೆ ನೀಡಿದರೂ ಬಾಡಿಗೆದಾರರಿಗೆ ಮಾನಸಿಕ ಕಿರುಕುಳ ಮತ್ತು ಕಳಪೆ ಜೀವನ ಪರಿಸ್ಥಿತಿಗೆ ಸಾಕ್ಷಿಯಾದ ಘಟನೆಯೊಂದು ಸಾಮಾಜಿಕ ಜಾಲತಾಣ ‘ರೆಡ್ಡಿಟ್’ (Reddit) ವೇದಿಕೆಯಲ್ಲಿ ಭಾರಿ ವೈರಲ್ ಆಗಿದೆ. ನಗರದ ಹೃದಯಭಾಗವಾದ ಕೋರಮಂಗಲದಲ್ಲಿ ಸಣ್ಣದೊಂದು ಅಪಾರ್ಟ್‌ಮೆಂಟ್‌ಗೆ ಬರೋಬ್ಬರಿ ₹35,000 ಬಾಡಿಗೆ ಪಾವತಿಸುತ್ತಿದ್ದ ಯುವಕನೊಬ್ಬ, ಹವಾನಿಯಂತ್ರಣ (AC) ಸಾಧನವನ್ನು ಹೆಚ್ಚು ಬಳಸಿದ್ದಾನೆ ಎಂಬ ಕಾರಣಕ್ಕೆ ಮನೆಮಾಲೀಕನಿಂದ ನಿಂದನೆಗೊಳಗಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿಗೆ ಇತ್ತೀಚೆಗಷ್ಟೇ ಹೊಸದಾಗಿ ಉದ್ಯೋಗ ನಿಮಿತ್ತ ಬಂದಿದ್ದ ಈ ಯುವಕನಿಗೆ ನಗರದ ಮನೆಗಳ ಬಾಡಿಗೆ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಈ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡ ಮನೆಮಾಲೀಕ, ಕೋರಮಂಗಲದ ಸಣ್ಣದೊಂದು 1BHK ಅಪಾರ್ಟ್‌ಮೆಂಟ್‌ಗೆ ₹35,000 ಬಾಡಿಗೆ ನಿಗದಿಪಡಿಸಿದ್ದ. ಒಪ್ಪಂದದ ಪ್ರಕಾರ, ಈ ದುಬಾರಿ ಬಾಡಿಗೆಯಲ್ಲೇ ವಿದ್ಯುತ್ ಮತ್ತು ನೀರಿನ ಬಿಲ್ ಕೂಡ ಒಳಗೊಂಡಿರುತ್ತದೆ (Included) ಎಂದು ಹೇಳಲಾಗಿತ್ತು. ಆದರೆ ಇತ್ತೀಚೆಗೆ ಎಸಿ ಬಳಸಿದ್ದಕ್ಕೆ ಮಾಲೀಕ ಆತನನ್ನು tIvfr ತರಾಟೆಗೆ ತಗೆದುಕೊಂಡಿದ್ದಾನೆ.
ನಾನು ಕೋರಮಂಗಲದಲ್ಲಿ ಸ್ಟುಡಿಯೋ ಅಪಾರ್ಟ್‌ಮೆಂಟ್‌ಗೆ ₹35 ಸಾವಿರ ರೂಪಾಯಿ ಪಾವತಿಸುತ್ತಿದ್ದೇನೆ. ಅದು ತುಂಬಾ ಚಿಕ್ಕದಾಗಿದೆ, ಅದರಲ್ಲಿ ಯಾವುದೇ ಬಾಲ್ಕನಿ ಇಲ್ಲ ಮತ್ತು ಕನಿಷ್ಠ ಗಾಳಿಯಾಡುವ ವ್ಯವಸ್ಥೆಯೂ (Ventilation) ಇಲ್ಲ. ಆ ಫ್ಲಾಟ್ ಸಂಪೂರ್ಣವಾಗಿ ಸುಸಜ್ಜಿತವಾಗಿದ್ದು (Fully Furnished) ಎಸಿ ಸೌಲಭ್ಯ ಹೊಂದಿತ್ತು. ಬಾಡಿಗೆಯಲ್ಲೇ ವಿದ್ಯುತ್ ಮತ್ತು ನೀರು ಸೇರಿದೆ ಎಂದಿದ್ದರಿಂದ, ಹೊಸ ನಗರದಲ್ಲಿ ನೆಮ್ಮದಿಯಾಗಿರಬಹುದು ಎಂದು ನಾನು ಈ ಹೆಚ್ಚಿನ ಬಾಡಿಗೆಗೆ ಒಪ್ಪಿಕೊಂಡಿದ್ದೆ.
ಆದರೆ, ಕನಿಷ್ಠ ಗಾಳಿಯಾಡದ ಆ ಸಣ್ಣ ರೂಮಿನಲ್ಲಿ ಬದುಕಲು ನನಗೆ ಎಸಿ ಆನ್ ಮಾಡುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಇದನ್ನು ನೋಡಿದ ಮನೆಮಾಲೀಕ, ನನಗೆ ವಿದ್ಯುತ್ ಉಚಿತ ಸಿಗುತ್ತಿದೆ ಎಂಬ ಕಾರಣಕ್ಕೆ ನಾನು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೇನೆ ಎಂದು ಆರೋಪಿಸಿದ್ದಾನೆ. ಅಷ್ಟೇ ಅಲ್ಲದೆ, ಈ ರೀತಿ ವರ್ತಿಸಿದ್ದಕ್ಕಾಗಿ ನನ್ನನ್ನು ಮೂರ್ಖ ಎಂದು ಕರೆದು ಅವಮಾನಿಸಿದ್ದಾನೆ. ವಾಸ್ತವವಾಗಿ ಅಂತಹ ಕಳಪೆ ಫ್ಲಾಟ್‌ಗೆ ನಾನು ಈಗಾಗಲೇ ಮಾರುಕಟ್ಟೆ ದರಕ್ಕಿಂತ ಅತಿ ಹೆಚ್ಚು ಹಣ ಪಾವತಿಸುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾನೆ.
ಮನೆಮಾಲೀಕನ ಈ ಉದ್ಧಟತನ ಮತ್ತು ನಿಂದನೆಯಿಂದ ಬೇಸತ್ತಿರುವ ಬಾಡಿಗೆದಾರ, ಈ ತಿಂಗಳ ಅಂತ್ಯದೊಳಗೆ ಸದರಿ ಫ್ಲಾಟ್ ಖಾಲಿ ಮಾಡಲು ನಿರ್ಧರಿಸಿದ್ದಾನೆ. ಯಾವುದೇ ದಲ್ಲಾಳಿಗಳ (Brokers) ಮಧ್ಯಸ್ಥಿಕೆ ಇಲ್ಲದೆ, ಕೋರಮಂಗಲದ ಆಸುಪಾಸಿನಲ್ಲೇ ಮಾಲೀಕರ ಹಸ್ತಕ್ಷೇಪವಿಲ್ಲದ (Non-interfering landlord) ಉತ್ತಮ ಪ್ರೀಮಿಯಂ 1BHK ಫ್ಲಾಟ್‌ಗಾಗಿ ರೆಡ್ಡಿಟ್ ಮೂಲಕ ನೆಟಿಜನ್‌ಗಳ ಸಹಾಯ ಕೋರಿದ್ದಾನೆ.
ರೆಡ್ಡಿಟ್‌ನಲ್ಲಿ ವೈರಲ್ ಆಗಿರುವ ಈ ಪೋಸ್ಟ್‌ಗೆ ಬೆಂಗಳೂರಿನ ಸಾವಿರಾರು ಬಾಡಿಗೆದಾರರು ಧ್ವನಿಗೂಡಿಸಿದ್ದಾರೆ. ಕಟ್ಟುನಿಟ್ಟಾದ ಮನೆಮಾಲೀಕರು, ಅಸ್ಪಷ್ಟ ಒಪ್ಪಂದಗಳು ಮತ್ತು ದುಬಾರಿ ಬೆಲೆಗೆ ಕಳಪೆ ಮನೆಗಳನ್ನು ನೀಡಿ ಶೋಷಿಸುವ ಬೆಂಗಳೂರಿನ 'ಮನೆಮಾಲೀಕರ ಸಂಸ್ಕೃತಿ'ಯ ವಿರುದ್ಧ ನೆಟಿಜನ್‌ಗಳು ಆಕ್ರೋಶ ಹೊರಹಾಕಿದ್ದಾರೆ.
ಆಫ್‌ಲೈನ್ ಹುಡುಕಾಟವೇ ಬೆಸ್ಟ್: ಆನ್‌ಲೈನ್ ಅಪ್ಲಿಕೇಶನ್‌ಗಳಾದ ನೋಬ್ರೋಕರ್ ಅಥವಾ ಫೇಸ್‌ಬುಕ್ ನಂಬಿ ಕೂರುವ ಬದಲು, ನೇರವಾಗಿ ಏರಿಯಾಗಳಿಗೆ ಹೋಗಿ 'ಟು-ಲೆಟ್' (To-Let) ಬೋರ್ಡ್‌ಗಳನ್ನು ಹಸ್ತಚಾಲಿತವಾಗಿ ಪರಿಶೀಲಿಸುವುದು ಸೂಕ್ತ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಅಪಾರ್ಟ್‌ಮೆಂಟ್‌ಗಳ ಸೆಕ್ಯೂರಿಟಿ ಗಾರ್ಡ್‌ಗಳು ಸಹ ಸ್ಥಳೀಯ ದಲ್ಲಾಳಿಗಳೊಂದಿಗೆ ಕೈಜೋಡಿಸಿ ಮಾಹಿತಿ ಮುಚ್ಚಿಡುತ್ತಾರೆ ಎಂದು ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ.
ಮನೆಗೆ ಸೇರುವ ಮುನ್ನವೇ ವಿದ್ಯುತ್, ನೀರು ಮತ್ತು ಎಸಿ ಬಳಕೆಯ ಮಿತಿಗಳ ಬಗ್ಗೆ ಮಾಲೀಕರೊಂದಿಗೆ ಮುಕ್ತವಾಗಿ ಮಾತನಾಡಿ, ಎಲ್ಲಾ ನಿಯಮಗಳನ್ನು ಲಿಖಿತ ರೂಪದಲ್ಲಿ ಬಾಡಿಗೆ ಒಪ್ಪಂದದಲ್ಲಿ (Rental Agreement) ದಾಖಲಿಸಿಕೊಳ್ಳುವುದು ಕಡ್ಡಾಯ," ಎಂದು ಮತ್ತೊಬ್ಬರು ಎಚ್ಚರಿಸಿದ್ದಾರೆ. ಒಟ್ಟಾರೆಯಾಗಿ, ಈ ಘಟನೆಯು ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳು ಮತ್ತು ಹೊರರಾಜ್ಯದ ಜನರನ್ನು ಬಾಡಿಗೆ ಹೆಸರಿನಲ್ಲಿ ಹೇಗೆ ಸುಲಿಗೆ ಮಾಡಲಾಗುತ್ತಿದೆ ಎಂಬುದಕ್ಕೆ ಮತ್ತೊಂದು ಜೀವಂತ ಉದಾಹರಣೆಯಾಗಿದೆ.