ತುಮಕೂರು: ಸತ್ಯಮಂಗಲದಲ್ಲಿ ಬಯಲಾದ 700 ವರ್ಷಗಳ ಹಿಂದಿನ ರಹಸ್ಯ! ಅಪರೂಪದ ವಿಶೇಷ ವೀರಗಲ್ಲು ಶಾಸನ ಪತ್ತೆ

Published : Apr 07, 2026, 06:53 PM IST
Tumakuru  Hero Stone Inscription

ಸಾರಾಂಶ

ತುಮಕೂರಿನ ಸತ್ಯಮಂಗಲದಲ್ಲಿ 14ನೇ ಶತಮಾನದ, ವಿಜಯನಗರ ಪೂರ್ವದ ಅಪರೂಪದ ವೀರಗಲ್ಲು ಶಾಸನ ಪತ್ತೆಯಾಗಿದೆ. ಇದು ಅಂದಿನ 'ಮುರುಗಲು ರಾಜ್ಯ'ದ ಬಗ್ಗೆ ತಿಳಿಸುತ್ತದೆ. ದೇವಸ್ಥಾನದ ಜಾತ್ರೆಗೆ ತೆರಳುತ್ತಿದ್ದ ಜನರನ್ನು ರಕ್ಷಿಸಲು ಹೋರಾಡಿ ಮಡಿದ ವೀರನ ಸ್ಮರಣಾರ್ಥ ಇದನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ಅಂದಿನ ಸಾಂಸ್ಕೃತಿಕ ಆಚರಣೆಗಳ ಚಿತ್ರಣ ಮತ್ತು ಸತ್ಯಮಂಗಲ ಗ್ರಾಮದ ಉಲ್ಲೇಖವಿದೆ.

ತುಮಕೂರು: ಇತಿಹಾಸದ ಪುಟಗಳಲ್ಲಿ ಅಡಗಿ ಹೋಗಿದ್ದ 14ನೇ ಶತಮಾನದ ಮಹತ್ವದ ಸಾಂಸ್ಕೃತಿಕ ಮಾಹಿತಿಯನ್ನೊಳಗೊಂಡ ಅಪರೂಪದ ವೀರಗಲ್ಲು ಶಾಸನವೊಂದು ನಗರದ ಸತ್ಯಮಂಗಲದಲ್ಲಿ ಪತ್ತೆಯಾಗಿದೆ. ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಎಂ. ಕೊಟ್ರೇಶ್ ಹಾಗೂ ಡಾ. ಸುಧಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ತಂಡ ಈ ಅಪ್ರಕಟಿತ ಶಾಸನವನ್ನು ಗುರುತಿಸಿ ಸಂಶೋಧಿಸಿದೆ.

ವಿಜಯನಗರ ಸಾಮ್ರಾಜ್ಯದ ಉದಯಕ್ಕೂ ಪೂರ್ವದ್ದಾಗಿದೆ

ತುಮಕೂರು ನಗರವು ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಸತ್ಯಮಂಗಲದ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಇಲ್ಲಿನ ಖಾಸಗಿ ಶಾಲೆಯ ಕಾಂಪೌಂಡ್ ಪಕ್ಕದಲ್ಲಿ ಪತ್ತೆಯಾಗಿರುವ ಈ ವೀರಗಲ್ಲು ಒಟ್ಟು ಏಳು ಸಾಲುಗಳ ಬರಹವನ್ನು ಹೊಂದಿದೆ. ಶಾಸನದ ಮಾಹಿತಿಯಂತೆ ಇದು ವಿಜಯನಗರ ಸಾಮ್ರಾಜ್ಯದ ಉದಯಕ್ಕೂ ಪೂರ್ವದ ಕಾಲಘಟ್ಟದ್ದಾಗಿದ್ದು, ಅಂದರೆ ವಿಕ್ರಮ ಸಂವತ್ಸರದಲ್ಲಿ ವೀರನರಸಿಂಗದೇವನ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಅಂದು ಈ ಭಾಗವನ್ನು ಮುರುಗಲು ರಾಜ್ಯ ಎಂದು ಕರೆಯಲಾಗುತ್ತಿತ್ತು ಹಾಗೂ ಸಿಂಗೆಯ ದಂಡನಾಯಕರು ಇಲ್ಲಿನ ಪ್ರಧಾನಿಯಾಗಿದ್ದರು ಎಂಬ ಮಹತ್ವದ ಅಂಶಗಳು ಇಲ್ಲಿ ಉಲ್ಲೇಖವಾಗಿವೆ. ವಿಶೇಷವೆಂದರೆ ಶಾಸನದ ಐದನೇ ಸಾಲಿನಲ್ಲಿ ಸತ್ಯಮಂಗಲ ಎಂಬ ಗ್ರಾಮದ ಹೆಸರೇ ಇರುವುದು ಕುತೂಹಲಕಾರಿಯಾಗಿದೆ.

ದೇವಸ್ಥಾನದ ಜಾತ್ರೆಯ ಬಗ್ಗೆ ಮಾಹಿತಿ

ಈ ವೀರಗಲ್ಲಿನ ಅತ್ಯಂತ ಆಕರ್ಷಕ ಅಂಶವೆಂದರೆ ಅದರಲ್ಲಿ ಕೆತ್ತಲಾಗಿರುವ ಸಾಂಸ್ಕೃತಿಕ ಚಿತ್ರಣ. 14ನೇ ಶತಮಾನದಲ್ಲಿ ಸಾಮಾನ್ಯ ಜನರು ಹೇಗೆ ಜಾತ್ರೆ ಮತ್ತು ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎಂಬುದಕ್ಕೆ ಇದು ಜೀವಂತ ಸಾಕ್ಷಿಯಂತಿದೆ. ಹೆಣ್ಣು ಮಕ್ಕಳು ಸಾಲಾಗಿ ತಲೆಯ ಮೇಲೆ ಕುಂಭಗಳನ್ನು ಹೊತ್ತುಕೊಂಡು ಸಂಭ್ರಮದಿಂದ ಜಾತ್ರೆಗೆ ಹೊರಟಿರುವ ಸುಂದರ ದೃಶ್ಯವನ್ನು ಈ ಶಿಲೆಯಲ್ಲಿ ಕಡೆಯಲಾಗಿದೆ. ಶಾಸನದ ಕೊನೆಯ ಸಾಲುಗಳು ಯಾವುದೋ ದೇವಸ್ಥಾನದ ಜಾತ್ರೆಯ ಬಗ್ಗೆ ಮಾಹಿತಿ ನೀಡುತ್ತವೆಯಾದರೂ, ಅದು ಯಾವ ದೇವರ ಜಾತ್ರೆ ಎಂಬುದು ಸ್ಪಷ್ಟವಾಗಿಲ್ಲ. ಇತಿಹಾಸಕಾರರ ವಿಶ್ಲೇಷಣೆಯ ಪ್ರಕಾರ, ಜನಸಾಮಾನ್ಯರು ಜಾತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಶತ್ರುಗಳು ಅಥವಾ ದರೋಡೆಕೋರರು ಅಡ್ಡಿಪಡಿಸಿರಬಹುದು. ಆ ಸಮಯದಲ್ಲಿ ಜನರ ರಕ್ಷಣೆಗಾಗಿ ಹೋರಾಡಿ ವೀರಮರಣವನ್ನಪ್ಪಿದ ವೀರನ ಸ್ಮರಣಾರ್ಥ ಈ ವೀರಗಲ್ಲನ್ನು ಸ್ಥಾಪಿಸಲಾಗಿದೆ.

ಶಾಸನದಲ್ಲಿ ಆತ ‘ಕಾದಿ ಸತ್ತ’ ಎಂದು ಉಲ್ಲೇಖಿಸಲಾಗಿದ್ದು, ಆತ ಕೈಲಾಸವಾಸಿಯಾದ ಚಿತ್ರವನ್ನೂ ಇಲ್ಲಿ ಕೆತ್ತಲಾಗಿದೆ. ನಗರೀಕರಣದ ನಡುವೆ ಪತ್ತೆಯಾಗಿರುವ ಈ ಶಾಸನವು ತುಮಕೂರು ಭಾಗದ ಅಂದಿನ ಸಾಮಾಜಿಕ ಭದ್ರತೆ ಮತ್ತು ಧಾರ್ಮಿಕ ಆಚರಣೆಗಳ ಮೇಲೆ ಹೊಸ ಬೆಳಕು ಚೆಲ್ಲಿದೆ ಎಂದು ಪ್ರೊ.ಎಂ. ಕೊಟ್ರೇಶ್ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಕಳಪೆ ಗೋವಿನ ಜೋಳದ ಬೀಜದಿಂದ ಬೆಳೆ ಹಾನಿ: ಧಾರವಾಡ ರೈತನಿಗೆ ₹5 ಲಕ್ಷ ಪರಿಹಾರ
ತುಮಕೂರು ಗ್ರಾಮ ಆಡಳಿತ ಅಧಿಕಾರಿ (VAO) ಕರ್ತವ್ಯ ಮುಗಿಸಿ ಮನೆಗೆ ಹೊರಟರು; ಆದ್ರೆ ದಾರಿಯಲ್ಲೇ ಮಸಣ ಸೇರಿದರು!