ರಾಣೆಬೆನ್ನೂರು ಉಪಚುನಾವಣೆ: ಹಳೆ ಹುಲಿ ಕೋಳಿವಾಡಗೆ ಯುವಕನ ಸವಾಲ್‌

By Kannadaprabha News  |  First Published Nov 27, 2019, 4:04 PM IST

ರಾಣೆ ಬೆನ್ನೂರಿನಲ್ಲಿ 11 ನೇ ಚುನಾವಣೆಯಲ್ಲಿ ಮಾಜಿ ಸ್ಪೀಕರ್‌ಗೆ ಬಿಜೆಪಿಯ ಅರುಣ ಪೈಪೋಟಿ | ಸ್ಪರ್ಧಿಸದೇ ಲೆಕ್ಕಾಚಾರ ಉಲ್ಟಾಮಾಡಿದ ಶಂಕರ್‌ | ಸಿದ್ದು ಟೀಕಿಸಿದ್ದ ಕೋಳಿವಾಡಗೆ ಕುರುಬರು ಕೈಕೊಡುವ ಭೀತಿ | ‘ಕೊನೆ ಚುನಾವಣೆ’ ಅನುಕಂಪ ಕೆಲಸ ಮಾಡಿದರೆ ಬಿಜೆಪಿಗೆ ಕಷ್ಟ


 ಹಾವೇರಿ (ನ. 27):  ಅನರ್ಹ ಶಾಸಕ ಆರ್‌. ಶಂಕರ್‌ ಅವರ ರಾಜಕೀಯ ನಡೆಯಿಂದಾಗಿ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಹಜವಾಗಿಯೇ ಕುತೂಹಲ ಕೆರಳಿಸಿದೆ.

ಸೋಲಿನ ಭೀತಿಯಿಂದ ಶಂಕರ್‌ ಅವರು ಸ್ಪರ್ಧಿಸಲು ನಿರಾಕರಿಸಿದ ನಂತರ ಚುನಾವಣಾ ಕಣದ ಚಿತ್ರಣ ಬದಲಾಗಿದೆ. ಶಂಕರ್‌ ಬದಲು ಬಿಜೆಪಿ ಅಭ್ಯರ್ಥಿಯಾಗಿ ಅರುಣ ಕುಮಾರ್‌ ಪೂಜಾರ ಅವರು ಕಣಕ್ಕಿಳಿದಿದ್ದು, ಕಾಂಗ್ರೆಸ್‌ನಿಂದ ಹಿರಿಯ ನಾಯಕ ಕೆ.ಬಿ. ಕೋಳಿವಾಡ ಅವರು ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿಯಿದೆ.

Tap to resize

Latest Videos

undefined

ಕೊನೆ ಕ್ಷಣದಲ್ಲಿ ಅಚ್ಚರಿಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿಜೆಪಿಯ ಯುವ ಅಭ್ಯರ್ಥಿ ಅರುಣ ಕುಮಾರ್‌ ತೀವ್ರ ಪ್ರತಿಸ್ಪರ್ಧೆ ಒಡ್ಡಿರುವುದರಿಂದ ಆತಂಕಕ್ಕೀಡಾಗಿರುವ ಕಾಂಗ್ರೆಸ್ಸಿನ ಕೋಳಿವಾಡ ಅವರು ಇದೇ ತಮ್ಮ ಕೊನೆಯ ಚುನಾವಣೆ ಎಂಬ ದಾಳ ಉರುಳಿಸಿದ್ದಾರೆ. ಈ ದಾಳ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು.

ಕರದಂಟು ಮೆಲ್ಲಲು ಸಹೋದರರ ಪೈಪೋಟಿ; ಜಾರಕಿಹೊಳಿದ್ವಯರ ಪೈಕಿ ಗೆಲ್ಲೋರು ಯಾರು?

ಕಳೆದ ಎರಡು ಚುನಾವಣೆಗಳಲ್ಲಿ ಕೋಳಿವಾಡರಿಗೆ ಎದುರಾಳಿಯಾಗಿದ್ದ ಶಂಕರ್‌ ಈ ಸಲ ಕಣದಿಂದ ಹಿಂದಕ್ಕೆ ಸರಿದಿರುವುದು ಒಂದು ರೀತಿಯಲ್ಲಿ ಕೋಳಿವಾಡರಿಗೆ ತಲೆ ಬಿಸಿಯನ್ನೇ ಉಂಟು ಮಾಡಿದಂತಿದೆ. ಶಂಕರ್‌ ಸ್ಪರ್ಧಿಸಿದ್ದರೆ ತಮ್ಮ ಗೆಲುವು ಸುಲಭ ಎಂದುಕೊಂಡಿದ್ದ ಕೋಳಿವಾಡರ ಲೆಕ್ಕಾಚಾರವನ್ನು ಬಿಜೆಪಿ ನಾಯಕರು ತಲೆಕೆಳಗಾಗಿಸಿದ್ದಾರೆ. ಸ್ಪೀಕರ್‌ ಆಗಿ ಅಪಾರ ರಾಜಕೀಯ ಅನುಭವ ಹೊಂದಿರುವ ಕೋಳಿವಾಡ ಅವರಿಗಿದು 11ನೇ ಚುನಾವಣೆ. ಹಳೆ ಹುಲಿ ಕೋಳಿವಾಡ ಮತ್ತು ಹೊಸ ಕಲಿ ಅರುಣ ಕುಮಾರ್‌ ನಡುವಿನ ಜಿದ್ದಾಜಿದ್ದಿಗೆ ಕ್ಷೇತ್ರ ಸಾಕ್ಷಿಯಾಗಿದೆ.

ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಹಲಗೇರಿ ಅವರದ್ದು ಸ್ಪರ್ಧೆಗಷ್ಟೇ ಸೀಮಿತ ಎಂಬಂತಾಗಿದೆ. ಜಿಲ್ಲೆಯಲ್ಲೇ ಅತಿಹೆಚ್ಚು ಮತದಾರರನ್ನು ಹೊಂದಿರುವ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶಂಕರ್‌ ಅವರು ಕಳೆದ ಬಾರಿ ಕೆಪಿಜೆಪಿಯಿಂದ ಸ್ಪರ್ಧಿಸಿ ಕೋಳಿವಾಡರ ವಿರುದ್ಧ ಗೆದ್ದಿದ್ದರು.

ಮೈತ್ರಿ ಸರ್ಕಾರದಲ್ಲಿ ಮಂತ್ರಿಯೂ ಆಗಿದ್ದರು. ಆದರೆ, ಸ್ವಯಂಕೃತ ಅಪರಾಧ ಎಂಬಂತೆ ಕಾಂಗ್ರೆಸ್‌ನೊಂದಿಗೆ ಪಕ್ಷ ವಿಲೀನ ಮಾಡಿಕೊಂಡ ಅವರು ಆ ತಪ್ಪಿನಿಂದ ಈಗ ಅನರ್ಹರಾಗಿದ್ದಾರೆ. ಚುನಾವಣೆ ಎದುರಿಸುವುದು ಕಷ್ಟಎಂಬ ಕಾರಣಕ್ಕಾಗಿ ಸ್ಪರ್ಧೆಯಿಂದ ಹಿಂದೆ ಸರಿದು ಈಗ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಕಾಂಗ್ರೆಸ್‌, ಬಿಜೆಪಿ ನಡುವೆ ಪೈಪೋಟಿ

ಕಳೆದ ಚುನಾವಣೆಯಲ್ಲಿ ಕೋಳಿವಾಡರನ್ನು ಪರಾಭವಗೊಳಿಸಿದ್ದ ಶಂಕರ್‌ ಈ ಸಲ ಕಣದಲ್ಲಿ ಇಲ್ಲದಿರುವುದೇ ಉಪಚುನಾವಣೆ ವಿಶೇಷ. ಇದೇ ಕಾಂಗ್ರೆಸ್‌ಗೆ ತಲೆನೋವಿನ ಸಂಗತಿ ಕೂಡ. ಒಂದು ವೇಳೆ ಶಂಕರ್‌ ಅವರೇ ಸ್ಪರ್ಧಿಸಿದ್ದರೆ ಹಲವು ಋುಣಾತ್ಮಕ ಅಂಶಗಳನ್ನು ಮುಂದಿಟ್ಟುಕೊಂಡು ಮತದಾರರ ಮೇಲೆ ಪ್ರಭಾವ ಬೀರಲು ಕಾಂಗ್ರೆಸ್‌ಗೆ ಅನುಕೂಲವಾಗುತ್ತಿತ್ತು.

ಅಥಣಿ ಉಪಚುನಾವಣೆ: ಕುಮಟಳ್ಳಿಯನ್ನು ಗೆಲ್ಲಿಸುವ ಹೊಣೆ ಸವದಿಗೆ

ಹೊರಗಿನಿಂದ ಬಂದ ವ್ಯಕ್ತಿ, ಅನರ್ಹ, ಮತದಾರರಿಗೆ ದ್ರೋಹ ಎಂದೆಲ್ಲ ಬಿಂಬಿಸಬಹುದಿತ್ತು. ಆದರೆ, ಬಿಜೆಪಿ ಯುವಕ ಅರುಣ ಕುಮಾರ್‌ ಅವರನ್ನು ಕಣಕ್ಕಿಳಿಸಿರುವುದು ನೇರ ಸ್ಪರ್ಧೆ ನಿರ್ಮಾಣ ಮಾಡಿದೆ. ಟಿಕೆಟ್‌ ನೀಡದ್ದಕ್ಕೆ ಮುನಿಸಿಕೊಂಡಿದ್ದ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ. ಬಸವರಾಜ ಕೇಲಗಾರ ಅವರನ್ನು ಸಮಾಧಾನಪಡಿಸುವ ಕೆಲಸವಾಗಿದೆ. ಆದ್ದರಿಂದ ಕಾಂಗ್ರೆಸ್‌ ಮತ್ತು ಬಿಜೆಪಿ ಸಮಬಲದ ಪೈಪೋಟಿ ಕಂಡುಬರುತ್ತಿದೆ.

ಕೋಳಿವಾಡಗೆ ಅನುಭವ, ಅರುಣಗೆ ಬಿಎಸ್‌ವೈ ಬಲ

ಕಾಂಗ್ರೆಸ್‌ ಅಭ್ಯರ್ಥಿ ಕೋಳಿವಾಡರಿಗೆ ಕ್ಷೇತ್ರದ ಬಗ್ಗೆ ಇರುವ ಮಾಹಿತಿ, ಕಾರ್ಯಕರ್ತರ ಮೇಲಿನ ಹಿಡಿತ, ಈ ಹಿಂದೆ 10 ಬಾರಿ ಚುನಾವಣೆ ಎದುರಿಸಿದ ಅನುಭವವೇ ಪ್ಲಸ್‌ ಪಾಯಿಂಟ್‌. ಅಲ್ಲದೇ ಮಂತ್ರಿಯಾದರೂ ಕ್ಷೇತ್ರದ ಅಭಿವೃದ್ಧಿಗೆ ಆರ್‌. ಶಂಕರ್‌ ಕೊಡುಗೆ ನಗಣ್ಯ, ಇದೇ ತನ್ನ ಕೊನೆಯ ಚುನಾವಣೆ ಎಂದು ಹೇಳಿ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ಅರುಣ ಕುಮಾರ್‌ ಪೂಜಾರ ಅವರಿಗೆ ಯುವ ಮತದಾರರು ಕೈಹಿಡಿಯುವ ಸಾಧ್ಯತೆಯಿರುವುದು ಪ್ಲಸ್‌ ಪಾಯಿಂಟ್‌. ಅಭ್ಯರ್ಥಿಗಿಂತ ಮೋದಿ ಅಲೆ ಮತ್ತು ಯಡಿಯೂರಪ್ಪ ಅವರ ಸರ್ಕಾರ ಮುಂದುವರಿಯಬೇಕು ಎಂಬ ಮತದಾರರ ಅಪೇಕ್ಷೆಯೇ ಇವರಿಗೆ ಶ್ರೀರಕ್ಷೆಯಾಗಿದೆ. ಹೊಸಬರಿಗೆ ಅವಕಾಶ ಕೊಡಬೇಕು ಎಂಬ ಅಲೆಯೆದ್ದರೆ ಬಿಜೆಪಿಗೆ ಅನುಕೂಲವಾಗಲಿದೆ. ಆದರೆ, ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ಕೆಲ ಆಕಾಂಕ್ಷಿಗಳು ಅಸಮಾಧಾನಗೊಂಡಿದ್ದು ಬಿಜೆಪಿಗೆ ಮೈನಸ್‌ ಅಂಶವಾಗಿದೆ.

ಕೋಳಿವಾಡ ಮೇಲೆ ಕುರುಬರ ಸಿಟ್ಟು

ಕ್ಷೇತ್ರದಲ್ಲಿ ಕುರುಬ ಸಮುದಾಯದ 27 ಸಾವಿರ ಮತಗಳಿವೆ. ಆ ಸಮುದಾಯದ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದ್ದ ಕೋಳಿವಾಡರ ಬಗ್ಗೆ ಕುರುಬ ಸಮುದಾಯದವರಿಗೆ ಸಿಟ್ಟಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕವಾಗಿದ್ದು, ಆ ಸಮುದಾಯದ ಸುಮಾರು 40 ಸಾವಿರ ಮತದಾರರಿದ್ದಾರೆ.

ಅವುಗಳಲ್ಲಿ ಪಂಚಮಸಾಲಿ ಮತಗಳು ಹೆಚ್ಚಿದ್ದು, ಬಿಜೆಪಿ ಅಭ್ಯರ್ಥಿ ಅದೇ ಸಮುದಾಯಕ್ಕೆ ಸೇರಿದವವರಾಗಿದ್ದಾರೆ. ಮೇಲ್ವರ್ಗ, ಕುರುಬ ಸಮಾಜದ ಮತಗಳನ್ನು ಬಿಜೆಪಿ ಅಭ್ಯರ್ಥಿ ಬುಟ್ಟಿಗೆ ಹಾಕಿಕೊಂಡರೆ ಕೋಳಿವಾಡರಿಗೆ ಕಷ್ಟವಾಗುವ ಸಾಧ್ಯತೆಯಿದೆ.

ಆದರೆ, ಸ್ವತಃ ಸಿದ್ದರಾಮಯ್ಯ ಅವರೇ ಕ್ಷೇತ್ರಕ್ಕೆ ಆಗಮಿಸಿ ಪ್ರಚಾರದಲ್ಲಿ ತೊಡಗಿದ್ದರಿಂದ ಕುರುಬ ಸಮುದಾಯ ಕೋಳಿವಾಡ ಅವರ ಮೇಲಿನ ಸಿಟ್ಟು ಮರೆತು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಎಂಬ ಕಾರಣಕ್ಕಾಗಿ ಬೆಂಬಲಿಸುವ ಸಾಧ್ಯತೆಯೂ ಇದೆ. ಎರಡೂ ಪಕ್ಷಗಳ ನಾಯಕರು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಸಮಬಲದ ಹೋರಾಟದಲ್ಲಿ ಯಾರೇ ಗೆದ್ದರೂ ಅಂತರ ಕಡಿಮೆ ಎಂಬ ವಾತಾವರಣವಿದೆ.

9 ಅಭ್ಯರ್ಥಿಗಳು ಕಣದಲ್ಲಿ

ಅರುಣ ಕುಮಾರ್‌ ಪೂಜಾರ (ಬಿಜೆಪಿ), ಕೆ.ಬಿ. ಕೋಳಿವಾಡ (ಕಾಂಗ್ರೆಸ್‌), ಮಲ್ಲಿಕಾರ್ಜುನಪ್ಪ ಹಲಗೇರಿ (ಜೆಡಿಎಸ್‌), ಗೌತಮ ಕಾಂಬಳೆ (ಯುವ ಕರ್ನಾಟಕ ಪಕ್ಷ), ನಾಗಪ್ಪ ಸಂಶಿ (ಕರ್ನಾಟಕ ಜನತಾ ಪಕ್ಷ), ಈಶ್ವರ ಪಾಟೀಲ (ಉತ್ತಮ ಪ್ರಜಾಕೀಯ ಪಾರ್ಟಿ), ಡಾ. ಜಿ.ಎಂ. ಕಲ್ಲೇಶ್ವರಪ್ಪ (ಪಕ್ಷೇತರ), ಪ್ರವೀಣ ಕುಮಾರ್‌ ಎಂ.ಎಸ್‌. ಮಂಜುನಾಥ (ಪಕ್ಷೇತರ), ಶಿವಯೋಗಿಸ್ವಾಮಿ ಮಹಾನುಭಾವಿಮಠ (ಪಕ್ಷೇತರ) ಕಣದಲ್ಲಿದ್ದಾರೆ.

ಕ್ಷೇತ್ರ ಚಿತ್ರಣ

ರಾಣೆಬೆನ್ನೂರು ನಗರ, ಗ್ರಾಮೀಣ ಭಾಗಗಳನ್ನು ಕ್ಷೇತ್ರ ಒಳಗೊಂಡಿದೆ. ಮೂರು ಹೋಬಳಿಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಈವರೆಗೆ 7 ಕಾಂಗ್ರೆಸ್‌ ಹಾಗೂ 7 ಕಾಂಗ್ರೆಸ್ಸೇತರ ರಾಜಕೀಯ ಪಕ್ಷಗಳು ಗೆಲುವು ಸಾಧಿಸಿವೆ. ಆದ್ದರಿಂದ ಇಲ್ಲಿ ಪಕ್ಷಕ್ಕಿಂತ ಜಾತಿ, ಆಯಾ ಸಂದರ್ಭಕ್ಕೆ ಇರುವ ರಾಜಕೀಯ ಪ್ರಾಮುಖ್ಯತೆಯೇ ಪ್ರಮುಖವಾಗಿದೆ. 5 ಬಾರಿ ಗೆದ್ದಿರುವ ಕೋಳಿವಾಡ 5 ಬಾರಿ ಸೋತಿದ್ದರು. ಈ ಬಾರಿ ಮತ್ತೊಮ್ಮೆ ಅದೃಷ್ಟಪರೀಕ್ಷೆಗಿಳಿದಿದ್ದಾರೆ.

- ನಾರಾಯಣ ಹೆಗಡೆ

click me!