ರಾಮನಗರ: ಕಣ್ವದಲ್ಲಿ ಚಿಲ್ಡ್ರನ್‌ ಪಾರ್ಕ್ ಯೋಜನೆ ಕೈಬಿಟ್ಟ ಸರ್ಕಾರ

By Kannadaprabha News  |  First Published Jun 13, 2024, 12:12 PM IST

ದಟ್ಟ ಹಸಿರಿನಿಂದ ಕಂಗೊಳಿಸುತ್ತಾ ನಿಸರ್ಗದ ಸೆರಗಿನಲ್ಲಿರುವ ಪ್ರಸಿದ್ಧ ಕಣ್ವ ಜಲಾಶಯ ಪ್ರದೇಶದಲ್ಲಿ ಮಕ್ಕಳ ಚಿಲ್ಡ್ರನ್ ಪಾರ್ಕ್ ನಿರ್ಮಾಣ ಯೋಜನೆಯನ್ನು ಕೈಬಿಟ್ಟಿರುವ ರಾಜ್ಯ ಸರ್ಕಾರ ಆ ಪ್ರದೇಶದಲ್ಲಿ ಪ್ರವಾಸಿ ಸೌಲಭ್ಯ ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಮುಂದಾಗಿದೆ.


-ಎಂ.ಅಫ್ರೋಜ್ ಖಾನ್

 ರಾಮನಗರ :  ದಟ್ಟ ಹಸಿರಿನಿಂದ ಕಂಗೊಳಿಸುತ್ತಾ ನಿಸರ್ಗದ ಸೆರಗಿನಲ್ಲಿರುವ ಪ್ರಸಿದ್ಧ ಕಣ್ವ ಜಲಾಶಯ ಪ್ರದೇಶದಲ್ಲಿ ಮಕ್ಕಳ ಚಿಲ್ಡ್ರನ್ ಪಾರ್ಕ್ ನಿರ್ಮಾಣ ಯೋಜನೆಯನ್ನು ಕೈಬಿಟ್ಟಿರುವ ರಾಜ್ಯ ಸರ್ಕಾರ ಆ ಪ್ರದೇಶದಲ್ಲಿ ಪ್ರವಾಸಿ ಸೌಲಭ್ಯ ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಮುಂದಾಗಿದೆ.

Tap to resize

Latest Videos

ಚನ್ನಪಟ್ಟಣ ತಾಲೂಕಿನ ಪ್ರದೇಶದಲ್ಲಿ ಚಿಲ್ಡ್ರನ್ ಪಾರ್ಕ್ ನಿರ್ಮಿಸುವ ಮೂಲಕ ಜಲಾಶಯ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಿ ಪ್ರವಾಸಿಗರನ್ನು ಸೆಳೆದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ರಾಜ್ಯಸರ್ಕಾರ ಉದ್ದೇಶಿಸಿತ್ತು. ಆದರೀಗ ಜಲಾಶಯದ ವ್ಯಾಪ್ತಿಯಲ್ಲಿ ವಿವಿಧ ಪ್ರವಾಸಿ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು ತೀರ್ಮಾನಿಸಿದೆ.

ಈ ಮೊದಲು ಪ್ರವಾಸೋದ್ಯಮ ಇಲಾಖೆಯಿಂದ ಕಣ್ವ ಜಲಾಶಯ ಬಳಿ 10 ಕೋಟಿ ರು. ವೆಚ್ಚದಲ್ಲಿ ವಿಶ್ವ ದರ್ಜೆಯ ಮಕ್ಕಳ ಉದ್ಯಾನವನ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಇದಕ್ಕಾಗಿ ಜಲಾಶಯ ಬಳಿ 5 ಎಕರೆ ಪ್ರದೇಶವನ್ನು ಪ್ತವಾಸೋದ್ಯಮಕ್ಕೆ ಮೀಸಲಿಟ್ಟು, 2016-17ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ 2 ಕೋಟಿ ರು. ಬಿಡುಗಡೆ ಮಾಡಲಾಗಿತ್ತು.

ಆ ಅನುದಾನದಲ್ಲಿ ಉದ್ಯಾನವನ ಪಾತ್ ವೇ, ಮಕ್ಕಳ ಆಟಿಕೆ ವ್ಯವಸ್ಥೆ, ಶೌಚಾಲಯ, ಕ್ಯಾಫಿಟೇರಿಯಾ, ಪ್ಯಾರಾಗೋಲಾ ಹಾಗೂ ಇತರೆ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲು ಮಂಜೂರಾತಿ ನೀಡಲಾಗಿತ್ತು. 2 ಕೋಟಿ ರುಪಾಯಿ ಅಂದಾಜು ವೆಚ್ಚವನ್ನು ಮಾರ್ಪಡಿಸಿ 164.46 ಲಕ್ಷ ರು. ವೆಚ್ಚದಲ್ಲಿ ಕೆಟಿಐಎಲ್ (ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ನಿಗಮ) ಮೂಲಕ ಕೈಗೊಳ್ಳಲು ಸರ್ಕಾರ ಪರಿಷ್ಕೃತ ಆನುಮೋದನೆ ನೀಡಿತು.

ಆನಂತರ ಮತ್ತೊಮ್ಮೆ ಸರ್ಕಾರ 2022ರ ಸೆಪ್ಟೆಂಬರ್ 17ರಂದು ಕೆಟಿಐಎಲ್ ನಿಂದ ಕರ್ನಾಟಕ ರೂರಲ್ ಇನ್ ಫ್ರಾಸ್ಟ್ರಕ್ಟರ್ ಡೆವಲಪ್ ಮೆಂಟ್ ಲಿಮಿಟೆಡ್ (ಕೆಆರ್ ಐಡಿಎಲ್ ) ಮೂಲಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಪರಿಷ್ಕೃತ ಮಂಜೂರಾತಿ ನೀಡಿತ್ತು.

ಕೆಆರ್ ಐಡಿಎಲ್ ಜಲಾಶಯ ವ್ಯಾಪ್ತಿಯಲ್ಲಿ ತಲಾ 150 ಲಕ್ಷ ರುಪಾಯಿ ವೆಚ್ಚದಲ್ಲಿ ಸೌರ ದೀಪ , ನೆಲಹಾಸು ಹಾಗೂ ತಲಾ 100 ಲಕ್ಷ ರು. ವೆಚ್ಚದಲ್ಲಿ ಚೈನ್ಲಿಂಕ್ ಫೆನ್ಸಿಂಗ್ ಅಳವಡಿಕೆ, ಉದ್ಯಾನವನ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಪ್ರವಾಸೋದ್ಯಮ ಇಲಾಖೆ 2023ರ ಮಾರ್ಚ್ 3ರಂದು ಒಪ್ಪಿಗೆ ಸೂಚಿಸಿತ್ತು.

ಇದಾದ ಬಳಿಕ 2023ರ ನವೆಂಬರ್ 3ರಂದು ಪ್ರವಾಸೋದ್ಯಮ ಇಲಾಖೆ ಅಧೀನ ಕಾರ್ಯದರ್ಶಿಗಳು ಪತ್ರ ಬರೆದು ಪ್ರವಾಸೋದ್ಯಮ ಇಲಾಖೆಯಡಿ ಪ್ರವಾಸಿ ತಾಣಗಳಲ್ಲಿ ಪ್ರಧಾನ ಮೂಲಭೂತ ಸೌಕರ್ಯ ಕಾಮಗಾರಿಗಳ ಅಡಿ 2022-23ನೇ ಸಾಲಿನವರೆಗೂ ರಾಜ್ಯದಲ್ಲಿ ಮಂಜೂರಾಗಿರುವ ಕಾಮಗಾರಿಗಳ ಪೈಕಿ ಕಾರಣಾಂತರಗಳಿಂದ ಪ್ರಾರಂಭವಾಗದಿರುವ ಕಾಮಗಾರಿಗಳನ್ನು ರದ್ದು ಪಡಿಸಿ ಆದೇಶ ಹೊರಡಿಸಿದರು.

ಅಲ್ಲದೆ, ಕಾಮಗಾರಿಗಳನ್ನು ಅನುಷ್ಠಾನ ಸಂಬಂಧ ಅನುಷ್ಠಾನ ಸಂಸ್ಥೆಗಳಿಗೆ 2023ರ ಮಾರ್ಚ್ ವರೆಗೆ ಬಿಡುಗಡೆ ಮಾಡಿರುವ ಅನುದಾನವನ್ನು ಹಿಂಪಡೆದು ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ನಿಗಮ (ಕೆಟಿಐಎಲ್ )ನಲ್ಲಿ ಇರಿಸಲು ಆದೇಶಿಸಿದರು. ಅದರಂತೆ ರಾಜ್ಯದಲ್ಲಿ ಮಂಜೂರಾತಿ ದೊರಕಿದರು ಪ್ರಾರಂಭವಾಗದ 19 ಕಾಮಗಾರಿಗಳಲ್ಲಿ ಕಣ್ವ ಜಲಾಶಯ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಚಿಲ್ಡ್ರನ್ ಪಾರ್ಕ್ ಕೂಡ ಸೇರಿತ್ತು.

ಜಲಾಶಯ ಪ್ರದೇಶದಲ್ಲಿ ಉದ್ಯಾನವನ, ಪಾತ್ ವೇ, ಮಕ್ಕಳ ಆಟಿಕೆ ವ್ಯವಸ್ಥೆ, ಶೌಚಾಲಯ, ಕ್ಯಾಪಿಟೇರಿಯಾ, ಪ್ಯಾರಾಗೋಲಾ ಹಾಗೂ ಇತರೆ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ ಕಾಮಗಾರಿ ಅನುಷ್ಠಾನಕ್ಕಾಗಿ ಕೆಆರ್ ಐಡಿಎಲ್ ಗೆ 164.46 ಲಕ್ಷ ರುಪಾಯಿ ಬಿಡುಗಡೆ ಮಾಡಲಾಗಿತ್ತು. ಪ್ರವಾಸೋದ್ಯಮ ಇಲಾಖೆ ಅಧೀನ ಕಾರ್ಯದರ್ಶಿಗಳ ಆದೇಶದಂತೆ ಕೆಆರ್ ಐಡಿಎಲ್ ನಿಂದ ಚಿಲ್ಡ್ರನ್ ಪಾರ್ಕ್ ನಿರ್ಮಾಣಕ್ಕಾಗಿ ಬಿಡುಗಡೆಯಾಗಿದ್ದ ಆ ಹಣವನ್ನು ಹಿಂಪಡೆಯಲಾಗಿದೆ.

ಕಣ್ವ ಜಲಾಶಯದ ಬಳಿ ಮಕ್ಕಳ ಪಾರ್ಕ್ ನಿರ್ಮಾಣ ಮಾಡಿ ಪ್ರವಾಸಿಗರನ್ನು ಸೆಳೆಯಲು ಸರ್ಕಾರ ಯೋಜನೆ ಸಿದ್ಧಗೊಳಿಸಿತ್ತು. ವಿಶೇಷವಾಗಿ ಶನಿವಾರ ಮತ್ತು ಭಾನುವಾರ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಅದರಲ್ಲೂ ಮಕ್ಕಳಿಗಾಗಿ ಪಾರ್ಕ್ ನಿರ್ಮಾಣ ಮಾಡುವ ಯೋಜನೆ ಇದಾಗಿತ್ತು. ಮಕ್ಕಳ ಒಂದು ದಿನದ ಮನರಂಜನೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಪಾರ್ಕ್ ಅನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಇದಕ್ಕಾಗಿಯೇ ಸರ್ಕಾರಿ ಜಾಗವನ್ನು ಗುರುತಿಸಿ ನಿಗದಿಗೊಳಿಸಲಾಗಿತ್ತು. ಆದರೀಗ ಮಕ್ಕಳ ಪಾರ್ಕ್ ಯೋಜನೆ ಕೈಬಿಡಲಾಗಿದೆ.

ಚನ್ನಪಟ್ಟಣ ತಾಲೂಕಿನ ಕಣ್ವ ಜಲಾಶಯ ಪ್ರದೇಶದಲ್ಲಿ ಕರ್ನಾಟಕ ರೂರಲ್ ಇನ್ ಫ್ರಾಸ್ಟ್ರಕ್ಚರ್ ಡೆವಲಪ್ ಮೆಂಟ್ ಲಿಮಿಟೆಡ್ (ಕೆಆರ್ ಐಡಿಎಲ್ )ನಿಂದ 5 ಕೋಟಿ ರುಪಾಯಿ ವೆಚ್ಚದಲ್ಲಿ 4 ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿದೆ. ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಗೊಳ್ಳಲಿದೆ.

- ರವಿಕುಮಾರ್, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ರಾಮನಗರ

ಕಣ್ವ ಜಲಾಶಯ ಪ್ರದೇಶದಲ್ಲಿ ಕೈಗೊಳ್ಳುವ ಕಾಮಗಾರಿಗಳು?

-ಸೌರ ದೀಪ ಅಳವಡಿಕೆ - 150 ಲಕ್ಷ

-ನೆಲ ಹಾಸು ಅಳವಡಿಕೆ - 150 ಲಕ್ಷ

-ಚೈನ್ಲಿಂಕ್ ಫೆನ್ಸಿಂಗ್ ಅಳವಡಿಕೆ ಕಾಮಗಾರಿ - 100 ಲಕ್ಷ

-ಉದ್ಯಾನವನ ಅಭಿವೃದ್ಧಿ ಕಾಮಗಾರಿ - 100 ಲಕ್ಷ 

click me!