BBMPಯ 405 ಕೋಟಿ ಹಂಚಿಕೆ ತಡೆಗೆ ಶಾಸಕ ರಾಮಲಿಂಗಾರೆಡ್ಡಿ ಪಟ್ಟು

By Kannadaprabha NewsFirst Published Mar 19, 2020, 10:55 AM IST
Highlights

405.76 ಕೋಟಿ ಅನುದಾನ ಹಂಚಿಕೆ ಮಾಡಿದ ಬಿಬಿಎಂಪಿ| ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ ಸದಸ್ಯರಾದ ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ದಿನೇಶ್‌ ಗುಂಡೂರಾವ್‌| ಲಿಖಿತ ಉತ್ತರ ನೀಡಿದ ಸರ್ಕಾರ|

ಬೆಂಗಳೂರು(ಮಾ.19): ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್‌ ಸಭೆಯಲ್ಲಿ ಅನುಮೋದನೆ ಪಡೆಯದೇ 405.76 ಕೋಟಿ ಅನುದಾನವನ್ನು ಬಿಬಿಎಂಪಿ ಹಂಚಿಕೆ ಮಾಡಿರುವ ವಿಚಾರ ವಿಧಾನಸಭೆಯಲ್ಲಿ ಗಹನ ಚರ್ಚೆಗೆ ಕಾರಣವಾಗಿದೆ.

ಕಾಂಗ್ರೆಸ್‌ ಸದಸ್ಯರಾದ ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ದಿನೇಶ್‌ ಗುಂಡೂರಾವ್‌ ಅವರು ನಿಯಮ 69ರಡಿ ಪ್ರಸ್ತಾಪಿಸಿದ ವಿಷಯಕ್ಕೆ ಲಿಖಿತ ಉತ್ತರ ನೀಡಿದ ಸರ್ಕಾರ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಂಡಿಲ್ಲ. ಐದು ಉದ್ದೇಶಗಳಿಗೆ ಭಾಗಶಃ ಅನುದಾನವನ್ನು ಹಂಚಿಕೆ ಮಾಡಿ ಕಾಮಗಾರಿಗೆ ಜಾಬ್‌ ಕೋಡ್‌ ನೀಡಿರುವುದಾಗಿ ಬಿಬಿಎಂಪಿ ವರದಿ ಮಾಡಿದೆ ಎಂದು ತಿಳಿಸಿತು.

ಹೈಕೋರ್ಟ್‌ ಸೂಚಿಸಿದ್ದರೂ ಸರ್ವೆ ಕಾರ್ಯ ಮಾಡದ್ದಕ್ಕೆ ಜಡ್ಜ್‌ ಗರಂ

ಜತೆಗೆ ಜಾಬ್‌ ಕೋಡ್‌ ನೀಡಲಾಗಿರುವ ಹಾಗೂ ಜಾಬ್‌ ಕೋಡ್‌ ನೀಡಲು ಬಾಕಿ ಇರುವ ಕ್ರಿಯಾ ಯೋಜನೆಗೆ ಕೌನ್ಸಿಲ್‌ ಸಭೆಯ ಹಾಗೂ ಸರ್ಕಾರದ ಘಟನೋತ್ತರ ಅನುಮೋದನೆಯನ್ನು ಪಡೆಯುವ ಪ್ರಸ್ತಾವನೆ ಸಲ್ಲಿಸುವುದಾಗಿ ಬಿಬಿಎಂಪಿ ತಿಳಿಸಿದೆ ಎಂಬ ಸರ್ಕಾರದ ಉತ್ತರಕ್ಕೆ ರಾಮಲಿಂಗಾ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. ಕೂಡಲೇ .405.76 ಕೋಟಿ ಬಿಡುಗಡೆ ಮಾಡದಂತೆ ತಡೆ ಹಿಡಿಯಬೇಕು ಎಂದು ಪಟ್ಟು ಹಿಡಿದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಅನುಪಸ್ಥಿತಿಯ ಕಾರಣಕ್ಕೆ, ಸರ್ಕಾರ ಗುರುವಾರ ಉತ್ತರಿಸುವುದಾಗಿ ಹೇಳಿತು.
 

click me!