ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ರಾಜೀವ್‌ಗೌಡ ವಿರುದ್ಧ 2 ಕೇಸ್‌, ಬೆನ್ನಲ್ಲೇ ನಾಪತ್ತೆ; 3 ತಂಡ ರಚಿಸಿ ಪೊಲೀಸರ ಶೋಧ ಕಾರ್ಯ!

Published : Jan 16, 2026, 08:22 AM IST
Shidlaghatta Rajeev Gowda and Amrutha Gowda

ಸಾರಾಂಶ

ಶಿಡ್ಲಘಟ್ಟ ಪೌರಾಯುಕ್ತರಿಗೆ ಅಶ್ಲೀಲವಾಗಿ ನಿಂದಿಸಿ ಧಮ್ಕಿ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ನಂತರ ತಲೆಮರೆಸಿಕೊಂಡಿರುವ ಅವರಿಗೆ, ಪಕ್ಷಕ್ಕೆ ಮುಜುಗರ ತಂದ ನಡವಳಿಕೆಗಾಗಿ ಕೆಪಿಸಿಸಿ ಶಿಸ್ತು ಸಮಿತಿಯು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. 

ಬೆಂಗಳೂರು (ಜ.16): ಶಿಡ್ಲಘಟ್ಟ ನಗರಸಭೆ ಪೌರಾಯುಕ್ತರಿಗೆ ನಿಂದಿಸಿದ್ದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ 2023ರ ಕಾಂಗ್ರೆಸ್‌ ಅಭ್ಯರ್ಥಿ ರಾಜೀವ್‌ಗೌಡ ಅವರಿಗೆ ಕೆಪಿಸಿಸಿ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದೆ. ‘ನಿಮಗೆ ನೋಟಿಸ್‌ ತಲುಪಿದ ಒಂದು ವಾರದ ಒಳಗಾಗಿ ಸಮಜಾಯಿಷಿ ನೀಡಬೇಕು. ಇಲ್ಲದಿದ್ದರೆ ಕೆಪಿಸಿಸಿ ಶಿಸ್ತು ಸಮಿತಿ ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಿದೆ’ ಎಂದು ರಾಜೀವ್‌ಗೌಡ ಅವರಿಗೆ ನೀಡಲಾಗಿರುವ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

ಅಶ್ಲೀಲ ಪದಗಳಿಂದ ನಿಂದಿಸಿ ಬೆಂಕಿ ಹಾಕುವುದಾಗಿ ಧಮ್ಕಿ ಹಾಕಿದ್ದ ಕಾಂಗ್ರೆಸ್‌ ಮುಖಂಡ ರಾಜೀವ್ ಗೌಡ ವಿರುದ್ಧ 2 ಎಫ್ಐಆರ್‌ ದಾಖಲಾಗಿವೆ. ಪೌರಾಯುಕ್ತೆ ಅಮೃತಾ ಗೌಡ ಹಾಗೂ ಜೆಡಿಎಸ್ ವತಿಯಿಂದ ನೀಡಲಾದ 2 ದೂರು ಆಧರಿಸಿ ಕೇಸ್‌ ದಾಖಲಾದ ಬೆನ್ನಲ್ಲೇ ರಾಜೀವ್‌ ತಲೆಮರೆಸಿಕೊಂಡಿದ್ದು, ಪತ್ತೆಗಾಗಿ 3 ಪೊಲೀಸ್ ತಂಡ ರಚಿಸಿ ಶೋಧಕಾರ್ಯ ನಡೆಸಲಾಗಿದೆ.

ವಸತಿ ಸಚಿವ ಜಮೀರ್ ಅಹ್ಮದ್ ಅವರ ಪುತ್ರ ಜೈದ್‌ಖಾನ್‌ ಅಭಿನಯದ ‘ಕಲ್ಟ್’ ಚಿತ್ರಕ್ಕೆ ಶುಭಕೋರಿ ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ರಾಜೀವ್‌ ಗೌಡ ಬ್ಯಾನರ್‌ ಅಳವಡಿಸಿದ್ದರು. ಪುರಸಭೆ ಸಿಬ್ಬಂದಿ ಬ್ಯಾನರ್‌ ತೆರವು ಮಾಡಿದ್ದರು. ಇದರಿಂದ ಆಕ್ರೋಶಗೊಂಡ ರಾಜೀವ್, ಪೌರಾಯುಕ್ತೆ ಅಮೃತಾಗೆ ಫೋನ್‌ ಕರೆ ಮಾಡಿ ಅವಾಚ್ಯ ಮತ್ತು ಅಶ್ಲೀಲವಾಗಿ ನಿಂದಿಸಿದ್ದರು. ಅಲ್ಲದೇ ಸ್ಥಳೀಯ ಜೆಡಿಎಸ್ ಶಾಸಕ ಬಿ.ಎಂ.ರವಿಕುಮಾರ್ ವಿರುದ್ಧವೂ ರಾಜೀವ್ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಜೆಡಿಎಸ್ ದೂರು ನೀಡಿದೆ. ಕಾಂಗ್ರೆಸ್‌ ಮುಖಂಡನ ನಡವಳಿಕೆಗೆ ಸಾರ್ವಜನಿಕರು ಕಿಡಿಕಾರಿದ್ದು, ವಿಪಕ್ಷ ಹಾಗೂ ಸ್ವಪಕ್ಷದ ನಾಯಕರೇ ಖಂಡಿಸಿದ್ದಾರೆ. ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ರಾಜೀವ್ ಗೌಡ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದು, ಫೋನ್ ಸಹ ಸ್ವಿಚ್ಆಫ್ ಮಾಡಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಲು ಶಿಡ್ಲಘಟ್ಟ ಸಿಪಿಐ ಆನಂದ್, ಚಿಂತಾಮಣಿ ಗ್ರಾಮಾಂತರ ಸಿಪಿಐ ಶಿವರಾಜ್, ಸಿಇಎನ್ ಪಿ.ಐ.ಸೂರ್ಯಪ್ರಕಾಶ್ ನೇತೃತ್ವದಲ್ಲಿ 3 ತಂಡ ರಚಿಸಲಾಗಿದ್ದು, ರಾಜೀವ್ ಗೌಡರ ಸ್ನೇಹಿತರು, ನೆಂಟರ ಮನೆಗಳಲ್ಲಿ ಶೋಧ ನಡೆಸಿದರೂ ಆರೋಪಿ ಪತ್ತೆಯಾಗಿಲ್ಲ.

ತಹಸೀಲ್ದಾರ್‌ಗೂ ನಿಂದಿಸಿದ್ದ ರಾಜೀವ್‌ಗೌಡ

ತಲೆಮರೆಸಿಕೊಂಡಿರುವ ರಾಜೀವ್‌ಗೌಡ ವಿರುದ್ಧ ಒಂದೊಂದಾಗಿ ಆರೋಪಗಳು ಕೇಳಿಬರುತ್ತಿದ್ದು, ಶಿಡ್ಲಘಟ್ಟ ತಹಸೀಲ್ದಾರ್ ಗಗನಸಿಂಧು ಅವರಿಗೂ ಏಕವಚನದಲ್ಲಿ ನಿಂದಿಸಿದ್ದ ಬಗ್ಗೆ ವರದಿಯಾಗಿದೆ. ಆ ಬೆನ್ನಲ್ಲೇ ಶಿಡ್ಲಘಟ್ಟ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಪಿಡಿಒ ಒಬ್ಬರು ಕೂಡ ‘ಕೈ’ ಮುಖಂಡನ ವಿರುದ್ಧ ಸ್ಫೋಟಕ ಆರೋಪ ಮಾಡಿದ್ದು, ಶಿಡ್ಲಘಟ್ಟದಲ್ಲಿ ಶಾಸಕರ ಬದಲು ತಮ್ಮ ಮಾತು ನಡೆಯಬೇಕು ಎಂದು ರಾಜೀವ್ ಕಿರುಕುಳ ನೀಡುತ್ತಿದ್ದರು. ಹೇಳಿದಂತೆ ಕೇಳದಿದ್ದರೆ ವರ್ಗಾವಣೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ಅಳಲು ತೊಡಿಕೊಂಡಿದ್ದಾರೆ.

ರಾಜೀವ್‌ಗೆ ಕೆಪಿಸಿಸಿ ನೋಟಿಸ್​​

ಕಾಂಗ್ರೆಸ್​​ ಡ್ಯಾಮೇಜ್​​ ಕಂಟ್ರೋಲ್‌​​ಗೆ ಮುಂದಾಗಿದ್ದು, ಪೌರಾಯುಕ್ತರೊಂದಿಗೆ ತಾವು ಆಡಿದ ಮಾತುಗಳಿಂದ ಪಕ್ಷಕ್ಕೆ ಮುಜುಗರ ಆಗಿದೆ. ಹಾಗಾಗಿ ಒಂದು ವಾರದೊಳಗೆ ಸೂಕ್ತ ಸಮಾಜಾಯಿಷಿ ನೀಡಿ. ಇಲ್ಲವಾದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಅವರು ರಾಜೀವ್‌ಗೌಡಗೆ ನೋಟಿಸ್​​ ಜಾರಿ ಮಾಡಿದ್ದಾರೆ.

 

PREV
Read more Articles on
click me!

Recommended Stories

Bhatkal: ಮರ ಏರಿ ಹರಕೆ ತೀರಿಸುವ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಶೇಡಬರಿ ಜಾತ್ರೆ
'ನಾಯಿ-ನರಿಗಳು ಕರವೇ ಬಗ್ಗೆ ಮಾತಾಡಿದ್ರೆ ಏನ್‌ ಹೇಳೋಕೆ ಆಗುತ್ತೆ..' ಸುದೀಪ್‌ ಭೇಟಿ ಕುರಿತ ವಿವಾದದ ಬಗ್ಗೆ ನಾರಾಯಣ ಗೌಡ ತಿರುಗೇಟು