ಸರ್ಕಾರ ಮತ್ತು ರೈತರ ನಡುವೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುವುದಕ್ಕಾಗಿ ಪ್ರತೀ ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯಲ್ಲಿ ಬರೋಬ್ಬರಿ 50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ರೈತ ಸಂಪರ್ಕ ಕೇಂದ್ರ ಕಳೆದ ಎರಡು ವರ್ಷಗಳಿಂದ ಬಳಕೆ ಬಾರದೆ ಪಾಳುಬಿದ್ದಿದೆ.
ವರದಿ : ರವಿ. ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಡಿ.16): ಎಲ್ಲಾ ಜನಪ್ರತಿನಿಧಿಗಳು ರೈತರೇ ನಮ್ಮ ದೇಶದ ಬೆನ್ನೆಲುಬು ಅಂತ ಉದ್ದುದ್ದ ಭಾಷಣ ಬಿಗಿಯುತ್ತಾರೆ. ಆದರೆ ರೈತರಿಗೆ ಅಗತ್ಯವಾಗಿ ಬೇಕಾಗಿರುವ ಸೌಲಭ್ಯಗಳನ್ನು ಒದಗಿಸುವುದರಿಂದ ದೂರ ಉಳಿಯುತ್ತಿದ್ದಾರೆ. ಅದಕ್ಕೊಂದು ಸ್ಪಷ್ಟ ಉದಾಹರಣೆ ಬಳಕೆಗೆ ಬಾರದೆ ಉಳಿದಿರುವ ಈ ರೈತ ಸಂಪರ್ಕ ಕೇಂದ್ರ. ಈ ಕುರಿತು ಸ್ಟೋರಿ ಇದೆ.
undefined
ಸರ್ಕಾರ ಮತ್ತು ರೈತರ ನಡುವೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುವುದಕ್ಕಾಗಿ ಪ್ರತೀ ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯಲ್ಲಿ ಬರೋಬ್ಬರಿ 50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ರೈತ ಸಂಪರ್ಕ ಕೇಂದ್ರ ಕಳೆದ ಎರಡು ವರ್ಷಗಳಿಂದ ಬಳಕೆ ಬಾರದೆ ಪಾಳುಬಿದ್ದಿದೆ. ಹಾಗಂತ ಇದು ಕಾಮಗಾರಿ ಅಪೂರ್ಣಗೊಂಡ ಕಟ್ಟಡವೇನೂ ಅಲ್ಲ. ಕಟ್ಟಡದ ಕಾಮಗಾರಿ ಪೂರ್ಣಗೊಂಡಿದೆ. ಆದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯ, ರೈತರ ಬಗೆಗಿನ ಅಸಡ್ಡೆಯಿಂದಾಗಿ ರೈತ ಸಂಪರ್ಕ ಕೇಂದ್ರ ಪಾಳುಬಿದ್ದಿದೆ. ಪರಿಣಾಮ ಈಗಾಗಲೇ ಒಂದಷ್ಟು ಕಳಪೆಯಿಂದ ಆಗಿರುವ ಕಟ್ಟಡ ಶಿಥಿಲಗೊಳ್ಳಲಾರಂಭಿಸಿದೆ. ಕಿಟಕಿ, ಬಾಗಿಲುಗಳು ತುಕ್ಕು ಹಿಡಿದು ಹಾಳಾಗಲಾರಂಭಿಸಿವೆ.
ಗೋಡೆಗಳು ಬಿರುಕು ಬಿಡುತ್ತಿವೆ. ಕಟ್ಟಡದ ಒಂದು ಭಾಗದಲ್ಲಿ ಇದ್ದ ಮಣ್ಣನ್ನು ತೆಗೆಯದೇ ಅದರ ಮೇಲೆಯೇ ಕಟ್ಟಡದ ಗೋಡೆಯ ಪ್ಲಾಸ್ಟಿಂಗ್ ಕುಸಿದು ಬೀಳುತ್ತಿದೆ. ಕಳೆದ ನಾಲ್ಕು ತಿಂಗಳಿನಿಂದ ಕಟ್ಟಡ ಉದ್ಘಾಟಿಸಿ ರೈತರ ಬಳಕೆಗೆ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ, ಸಾಕಷ್ಟು ಒತ್ತಾಯಿಸುತ್ತಿದ್ದೇವೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಾನ್ಸಿಸ್ ಡಿಸೋಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಂಡ್ಲಿ, ದುಂಡಳ್ಳಿ, ಶನಿವಾರಸಂತೆ ಸೇರಿದಂತೆ ಐದು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಸಾವಿರಾರು ರೈತರಿಗೆ ಅನುಕೂಲವಾಗಲಿ ಎಂದು ಶನಿವಾರಸಂತೆಯಲ್ಲಿ ರೈತ ಸಂಪರ್ಕ ಕೇಂದ್ರ ಮಾಡಲಾಗಿದೆ. ಆದರೆ ಕಟ್ಟಡ ಇಲ್ಲದೆ ಇರುವುದರಿಂದ ಒಂದು ಕಿಲೋಮೀಟರ್ ದೂರದಲ್ಲಿ ಇರುವ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಧಿಕಾರಿಗಳ ವಸತಿ ಗೃಹಗಳಲ್ಲಿ ರೈತ ಸಂಪರ್ಕ ಕೇಂದ್ರ ನಡೆಯುತ್ತಿದೆ. ಸದ್ಯಕ್ಕೆ ರೈತರು ಬೀಜಗೊಬ್ಬರಗಳನ್ನು ತೆಗೆದುಕೊಳ್ಳಲೋ ಇಲ್ಲ, ಯಾವುದೇ ಅರ್ಜಿಗಳನ್ನು ಸಲ್ಲಿಸಬೇಕೆಂದರೂ ಎಲ್ಲರೂ ಅಲ್ಲಿಗೆ ಆಟೋಗಳನ್ನೋ ಇಲ್ಲ, ಬಸ್ಸುಗಳನ್ನು ಹಿಡಿದು ತೆರಳಬೇಕು. ಇನ್ನು ಅಲ್ಲಿಂದ ಬೀಜ ಗೊಬ್ಬರಗಳನ್ನು ಕೊಂಡರೂ ಮತ್ತೆ ಅಲ್ಲಿಂದ ಬಾಡಿಗೆಗೆ ಆಟೋಗಳನ್ನು ಮಾಡಿಕೊಂಡು ಸಾಗಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ರೈತರ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿದ್ದಾರೆ, ರೈತರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ರೈತ ಮುಖಂಡ, ಶನಿವಾರಸಂತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆದಿಲ್ ಪಾಷಾ, ದುಂಡಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬೋಜಪ್ಪ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ಮಾಜಿ ಅಧ್ಯಕ್ಷರುಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ರೈತರಿಗೆ ಅನುಕೂಲವಾಗಲೆಂದು ಮಾಡಿದ್ದ ರೈತ ಸಂಪರ್ಕ ಕೇಂದ್ರ ರೈತರ ಬಳಕೆಗೂ ಬಾರದೆ ಸರ್ಕಾರ ವ್ಯಯಿಸಿದ್ದ ಲಕ್ಷಾಂತರ ರೂಪಾಯಿ ಅನುದಾನ ವ್ಯರ್ಥವಾಗುತ್ತಿದೆ. ಅಷ್ಟೇ ಅಲ್ಲ ರಾತ್ರಿ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಆದಷ್ಟು ಬೇಗ ರೈತ ಸಂಪರ್ಕ ಕೇಂದ್ರವನ್ನು ಬಳಕೆಗೆ ಕೊಟ್ಟು ರೈತರಿಗೆ ಅನುಕೂಲ ಮಾಡಬೇಕಾಗಿದೆ.