Assembly election: ಜೆಡಿಎಸ್ ಗೆದ್ದರೆ ರೈತ ಚೈತನ್ಯ, ಕೃಷಿ ಬಂಧು ಜಾರಿ: ಕುಮಾರಸ್ವಾಮಿ

By Kannadaprabha News  |  First Published Jan 17, 2023, 11:16 AM IST

ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯ ರೈತರು ಆರ್ಥಿಕವಾಗಿ ಪ್ರಗತಿ ಸಾಧಿಸಲು ರೈತ ಚೈತನ್ಯ ಕಾರ್ಯಕ್ರಮಗಳ ಜಾರಿ ಜೊತೆಗೆ ತೆಲಂಗಾಣ ಮಾದರಿಯಲ್ಲಿ ರೈತ ಬಂಧು ಯೋಜನೆಯನ್ನೂ ಅನುಷ್ಠಾನಕ್ಕೆ ತರಲಾಗುವುದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಿದರು.


ರಾಮನಗರ (ಜ.17) : ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯ ರೈತರು ಆರ್ಥಿಕವಾಗಿ ಪ್ರಗತಿ ಸಾಧಿಸಲು ರೈತ ಚೈತನ್ಯ ಕಾರ್ಯಕ್ರಮಗಳ ಜಾರಿ ಜೊತೆಗೆ ತೆಲಂಗಾಣ ಮಾದರಿಯಲ್ಲಿ ರೈತ ಬಂಧು ಯೋಜನೆಯನ್ನೂ ಅನುಷ್ಠಾನಕ್ಕೆ ತರಲಾಗುವುದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಿದರು.

ಬಿಡದಿಯ ತಮ್ಮ ತೋಟದಲ್ಲಿ ಹಮ್ಮಿಕೊಂಡಿದ್ದ ರೈತ ಸಂಕ್ರಾಂತಿ ಕಾರ‍್ಯಕ್ರಮದಲ್ಲಿ ರಾಜ್ಯದ ಸುಮಾರು 78 ವಿಧಾನಸಭೆ ಕ್ಷೇತ್ರಗಳ ರೈತರೊಂದಿಗೆ ಅನ್‌ಲೈನ್‌ ಸಂವಾದ ನಡೆಸಿದ ಅವರು, ರೈತರನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಮಹತ್ವದ ಘೋಷಣೆ ಮಾಡಿದರು.

Tap to resize

Latest Videos

ರವಿ ಬಂಧನ ವೇಳೆ ಆರಗ ಗುಜರಾತಿಗೆ ಹೋಗಿದ್ದೇಕೆ?: ಕುಮಾರಸ್ವಾಮಿ ಪ್ರಶ್ನೆ

ರೈತರಿಗೆ ತಾಂತ್ರಿಕ ಶಕ್ತಿ ನೀಡುವುದು, ಯಾವ ಭಾಗದಲ್ಲಿ ಯಾವ ಬೆಳೆ ಬೆಳೆಯುತ್ತಾರೋ ಆ ಬೆಳೆಗೆ ಜಾಗತಿಕ ಮಾರುಕಟ್ಟೆಯನ್ನು ಸೃಷ್ಟಿಮಾಡಿ ರಾಜ್ಯದ ಪ್ರತೀ ಕೃಷಿ ಉತ್ಪನ್ನಕ್ಕೆ ಅತ್ಯುತ್ತಮ ಮಾರುಕಟ್ಟೆವ್ಯವಸ್ಥೆ ಕಲ್ಪಿಸಲಾಗುವುದು. ರೈತರು ಶಾಶ್ವತವಾಗಿ ಸಾಲಗಾರರು ಆಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೃಷಿ ವಿಶ್ವ ವಿದ್ಯಾಲಯಗಳಿಗೆ ಕಾಯಕಲ್ಪ ನೀಡುವ ಜತೆಗೆ ಕೃಷಿ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚು ಒಟ್ಟು ಕೊಡಲಾಗುವುದು. ಸಂಶೋಧನೆಗೆ ಹೆಚ್ಚು ಆದ್ಯತೆ ಕೊಡಲಾಗುವುದು ಎಂದು ತಿಳಿಸಿದರು.

ಕಾಡಾನೆ ಹಾವಳಿ ತಡೆಯಿರಿ:

ಹಾಸನ ಜಿಲ್ಲೆ ಸಕಲೇಶಪುರ ಕ್ಷೇತ್ರದ ರೈತರು ಮೆಣಸು ಬೆಲೆ ಕುಸಿತ, ಕಾಡಾನೆ ಹಾವಳಿಯನ್ನು ಬಗೆಹರಿಸಬೇಕು ಎಂದು ಅಳಲು ತೋಡಿಕೊಂಡರು. ಇದಕ್ಕೆ ಕುಮಾರಸ್ವಾಮಿ ಅವರು, ಬೆಲೆ ಕುಸಿತ ತಡೆಗೆ ರಾಜ್ಯದ ಎಲ್ಲಾ ಕಡೆ ಆಯಾ ಬೆಳೆಗೆ ತಕ್ಕಂತೆ ಸುಧಾರಿತ ನೀತಿ ರೂಪಿಸಲಾಗುವುದು. ಅದೇ ರೀತಿ ವನ್ಯ ಜೀವಿಗಳ ಉಪಟಳ ತಡೆಯಲು ಏಕರೂಪ ನೀತಿ ಜಾರಿಗೊಳಿಸಲಾಗುವುದು. ನಮ್ಮ ಸರ್ಕಾರ ಬಂದ ಬಳಿಕ ರಾಜ್ಯದ ಎಲ್ಲಾ ರೈತ ಮುಖಂಡರ ಜೊತೆ ಚರ್ಚಿಸುತ್ತೇನೆ. ವಿಧಾನಸೌಧದ ಮೂರನೇ ಮಹಡಿಗೆ ಅನ್ನದಾತರನ್ನು ಕರೆದು ಚರ್ಚೆ ನಡೆಸುತ್ತೇನೆ ಎಂದು ಕೆಆರ್‌ಪೇಟೆ ರೈತರಿಗೆ ಭರವಸೆ ನೀಡಿದರು.

ಎಣ್ಣೆ ಗಿರಣಿ, ಕಾರ್ಖಾನೆ ಸ್ಥಾಪನೆ

ತುಮಕೂರು ಜಿಲ್ಲೆಯಲ್ಲಿ ಕೊಬ್ಬರಿ ಹೆಚ್ಚು ಉತ್ಪಾದನೆಯಾಗುತ್ತದೆ. ಆದರೆ, ಬೃಹತ್‌ ಎಣ್ಣೆ ಗಿರಣಿಗಳು ಇಲ್ಲ ಎಂದು ಚಿಕ್ಕನಾಯಕನಹಳ್ಳಿ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಎಚ್ಡಿಕೆ ಸರ್ಕಾರದ ವತಿಯಿಂದ ಎಣ್ಣೆ ಗಿರಣಿ ಅಥವಾ ಬೃಹತ್‌ ಕಾರ್ಖಾನೆ ಸ್ಥಾಪನೆ ಮಾಡಲು ನಿರ್ಧರಿಸಲಾಗುವುದು ಎಂದು ಹೇಳಿದರು.

ಮತ್ತೆ ಕಾರ್ಖಾನೆ ಪ್ರಾರಂಭ

ಬಿದರ್‌ ಜಿಲ್ಲೆಯ ಹುಮ್ನಾಬಾದ್‌ ಕ್ಷೇತ್ರದಲ್ಲಿ ಸ್ಥಳೀಯ ಯುವಜನರಿಗೆ ಕೆಲಸ ನೀಡಲು ಕಾರ್ಖಾನೆ ನಿರ್ಮಿಸಿದ್ದೆ. ಆದರೆ, ಬಿಜೆಪಿ ಸರ್ಕಾರ ಅದನ್ನು ನಿಲ್ಲಿಸಿದೆ. ಜೆಡಿಎಸ್‌ ಸರ್ಕಾರ ಬಂದ ಬಳಿಕ ಮತ್ತೆ ಕಾರ್ಖಾನೆ ಪ್ರಾರಂಭ. ಬೀದರ್‌ಗೆ ಕೆರೆಗಳನ್ನು ತುಂಬಿಸಲು 350 ಕೋಟಿ ರು. ಅನುದಾನ ನೀಡಿದ್ದೆ. ಅದಕ್ಕೂ ಬಿಜೆಪಿ ಸರಕಾರ ಕೊಕ್ಕೆ ಹಾಕಿತ್ತು. ನಮ್ಮ ಸರಕಾರ ಬಂದರೆ ಈ ಎಲ್ಲಾ ಯೋಜನೆಗಳಿಗೆ ಚಾಲನೆ ನೀಡಲಿದೆ ಎಂದರು.

ರೋಗದ ಬಗ್ಗೆ ರೈತರ ಅಳಲು

ಮೈಸೂರಿನ ಪಿರಿಯಾಪಟ್ಟಣದ ಹೊಗೆಸೊಪ್ಪು ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ರೈತರನ್ನು ಬಿಜೆಪಿ ತೀರಾ ಕೇವಲವಾಗಿ ತೆಗೆದುಕೊಂಡಿದ್ದಾರೆ ಎಂದು ಅಲವತ್ತುಕೊಂಡರು. ಶಿವಮೊಗ್ಗ ಗ್ರಾಮಾಂತರ ರೈತರು ಎಲೆಚುಕ್ಕೆ ರೋಗದ ಬಗ್ಗೆ ದುಃಖ ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ, ಮಲೆನಾಡಿನಲ್ಲಿ ಎಲೆಚುಕ್ಕೆ ರೋಗ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು ಎಂದರು.

ಕೊಳಚೆ ನೀರು ಪೂರೈಕೆಗೆ ರೈತರ ಆಕ್ರೋಶ

ಬೆಂಗಳೂರು ಕೊಳಚೆ ನೀರು ಪೂರೈಕೆ ಬಗ್ಗೆ ಶಿಡ್ಲಘಟ್ಟದ ರೈತರು ಆಕ್ರೋಶ ವ್ಯಕ್ತಪಡಿಸಿದರು. ರೈತರನ್ನು ಸಮಾಧಾನಪಡಿಸಿದ ಕುಮಾರಸ್ವಾಮಿ, ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಕೆರೆಗಳಿಗೆ ಶುದ್ಧ ನೀರು ಪೂರೈಕೆ ಮಾಡಲಾಗುವುದು. ಈ ಸರ್ಕಾರದಲ್ಲಿ ಅಧಿಕಾರಿಗಳು ಕಂಟ್ರೋಲ… ಇಲ್ಲ. ಎಲ್ಲದಕ್ಕೂ ಪರಿಹಾರ ಜನತಾದಳ ಅಧಿಕಾರಕ್ಕೆ ಬರಬೇಕು. ರೈತರ ಮಕ್ಕಳ ಸರ್ಕಾರಕ್ಕಾಗಿ ನಿಮ್ಮ ದುಡಿಮೆ ಮಾಡಿ ಎಂದು ಕುಮಾರಸ್ವಾಮಿ ಹೇಳಿದರು.

ದೇವೇಗೌಡರ ಚಿಕ್ಕಬಳ್ಳಾಪುರ ನಂಟು

ಚಿಕ್ಕಬಳ್ಳಾಪುರ ರೈತರ ಜತೆ ಮಾತನಾಡಬೇಕಾದರೆ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಮಾಜಿ ಮುಖ್ಯಮಂತ್ರಿಗಳು, ಬಹುಶಃ ದೇವೇಗೌಡರು ಮೂರನೇ ಸಲ ಶಾಸಕರಾಗಿ ಇದ್ದಾಗಲೂ ಚಿಕ್ಕಬಳ್ಳಾಪುರಕ್ಕೆ ಬಿತ್ತನೆ ಆಲೂಗಡ್ಡೆ ಖರೀದಿಗೆ ಹೋಗುತ್ತಿದ್ದರು. ಆ ದಿನಗಳು ನನಗೆ ಚೆನ್ನಾಗಿ ನೆನಪಿವೆ ಎಂದು ಹೇಳಿದರು.

ಕಬ್ಬಿನ ರೈತರ ನೆರವಿಗೆ ಬರುವೆ

ಮಂಡ್ಯ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಕಬ್ಬಿನ ಬೆಳೆಗಾರರು ಕಷ್ಟದಲ್ಲಿ ಇದ್ದಾರೆ. ನನ್ನ ಸರಕಾರ ಬಂದರೆ ಅವರ ನೆರವಿಗೆ ಧಾವಿಸಲಾಗುವುದು. ರೈತ ಬಂಧು ಕಾರ್ಯಕ್ರಮದ ಮೂಲಕ ಕಬ್ಬು ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಲಾಗುವುದು. ರೈತರಿಗೆ ವ್ಯವಸಾಯಕ್ಕೆ 24 ಗಂಟೆ ವಿದ್ಯುತ್‌ ಒದಗಿಸುವುದಾಗಿ ಭರವಸೆ ನೀಡಿದರು.

ಸಿ.ಪಿ. ಯೋಗೇಶ್ವರದ್ದು ಎನ್ನಲಾದ ಆಡಿಯೋ ವೈರಲ್: ವಿಪಕ್ಷಗಳಿಂದ ಭಾರಿ ತರಾಟೆ

ಹಳ್ಳಿ ಜನರಿಗೆ ಸರ್ಕಾರ ತರಬೇತಿ

ತುಮಕೂರು ಕೊರಟಗೆರೆ ಕ್ಷೇತ್ರದ ರೈತರ ಜತೆ ಸಂವಾದ ನಡೆಸಿದ ಕುಮಾರಸ್ವಾಮಿ ಅವರು, ರಾಗಿ ಖರೀದಿಯ ಬಗ್ಗೆ ಸರಕಾರದ ನೀತಿ ಸರಿ ಇಲ್ಲ. ರಾಗಿ ಬೆಳೆ ಮಾರಾಟ ಮಾಡಲು ಬೆಲೆ ಸಿಗ್ತಿಲ್ಲ ಅನ್ಕೋಬೇಡಿ. ರಾಗಿ ಬೆಳೆಯನ್ನು ಬೈ ಪ್ರಾಡಕ್ಟ್ ಮಾಡಿ ಲಾಭ ಗಳಿಸಬಹುದು. ರಾಗಿಯ ಬಿಸ್ಕೇಟ್‌ಗೆ ಹೆಚ್ಚಿನ ಬೇಡಿಕೆಗಳು ಇದೆ. ಇದಕ್ಕೆ ಹಳ್ಳಿಯ ಜನರಿಗೆ ಸರ್ಕಾರ ತರಬೇತಿ ನೀಡಲಿದೆ ಎಂದು ಹೇಳಿದರು.

ಪಿಎಂ ಫಸಲ್‌ ವಿಮೆಯಲ್ಲಿ ವಂಚನೆ

ಪ್ರಧಾನಿ ಭಿಮಾ ಫಸಲ… ವಿಮೆಯಲ್ಲಿ ವಂಚನೆ ಆಗುತ್ತಿದೆ. ರೈತರಿಗೆ ದಾರಿ ತಪ್ಪಿಸಿ ಮೋಸ ಮಾಡುತ್ತಿದ್ದಾರೆ. ನಮ್ಮ ಮುಂದಿನ ಕಾರ್ಯಕ್ರಮ ಬೆಳೆ ವಿಮೆ ಯೋಜನೆ ಕಾರ್ಯಕ್ರಮ ಆಗಿದೆ. ಇದನ್ನು ನಾನು ಸರಿ ಮಾಡುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.

click me!