ರೇಷ್ಮೆ ನಗರಿ ರಾಮನಗರದಲ್ಲಿ ಮುಂದುವರಿದ ಮಳೆ ಅಬ್ಬರ, ಅಪಾರ ಪ್ರಮಾಣದ ಬೆಳೆ ನಾಶ

By Suvarna News  |  First Published Aug 5, 2022, 9:41 PM IST

ಕರ್ನಾಟಕದ ಹಲವೆಡೆ ಭಾರೀ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಅಪರಾರ ಪ್ರಮಾಣದ ನಷ್ಟವಾಗಿದೆ. ಇನ್ನೂ ರಾಮನಗರ ಜಿಲ್ಲೆಯಲ್ಲಿ ಮಳೆ ಮಾಡಿದ ಅನಾಹುತಗಳ ಬಗ್ಗೆ ಒಂದು ವರದಿ ಇಲ್ಲಿದೆ.


ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ, (ಆಗಸ್ಟ್.05): ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲೂ ಸಹ ಮಳೆ ಸತತವಾಗಿ ಸುರಿಯುತ್ತಿರುವ ಹಿನ್ನಲೆ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದು, ರೈತರು ಇದೀಗ ಸಂಕಷ್ಟ ಅನುಭವಿಸುತ್ತಿದ್ದಾರೆ..

ಹಲವು ಕಡೆ ಜಮೀನುಗಳಿಗೆ ನುಗ್ಗಿದ ನೀರು


ಹೌದು, ರಾಮನಗರ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ರೇಷ್ಮೆ ನಗರಿ ರಾಮನಗರ ಅಕ್ಷರಶಃ ನಲುಗಿ ಹೋಗಿದೆ. ಜಿಲ್ಲೆಯ ಜೀವನಾಡಿಗಳಾದ ಕಣ್ವ, ಮಂಚನಬೆಲೆ, ದೇವೇಗೌಡ, ಮಾರ್ಕೊಂಡನಹಳ್ಳಿ ಜಲಾಶಯಗಳು ತುಂಬಿ ಮೈದುಂಬಿ ಹರಿಯುತ್ತಿದೆ. ಹಲವು ವರ್ಷಗಳಿಂದ ಮಳೆ ಇಲ್ಲದೇ ಕೊರಗುತ್ತಿದ್ದ ರೈತರಿಗೆ ಇದೀಗ ದೊಡ್ಡ ಮಟ್ಟದಲ್ಲಿ ಮಳೆಯಾಗಿದ್ದು, ಒಂದು ಕಡೆ ಸಂಭ್ರಮ ಮತ್ತೊಂದು ಕಡೆ ಪ್ರವಾಹ ಭೀತಿಯಿಂದ ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

Tap to resize

Latest Videos

ಕರಾವಳಿಯಲ್ಲಿ ಇನ್ನೂ ಮೂರು ದಿನ ಮಳೆ ಅಬ್ಬರ: ಹಲವು ಜೆಲ್ಲೆಗಳಲ್ಲಿ ರೆಡ್‌ ಅಲರ್ಟ್‌

ಅಬ್ಬೂರು- ದಶವಾರ ರಸ್ತೆ ಸಂಪರ್ಕ ಕಟ್

ಇನ್ನೂ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರು- ದಶವಾರ ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಟ್ ಆಗಿದೆ. ಕಣ್ವ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹೊರ ಬಿಟ್ಟ ಹಿನ್ನಲೆ ಹಲವು ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಸ್ಥಳೀಯ ಗ್ರಾಮಸ್ಥರು ಕಿಮೀ ಗಟ್ಟಲೇ ಸುತ್ತಾಡಿಕೊಂಡು ಓಡಾಡುವ ಅನಿವಾರ್ಯ ಉಂಟಾಗಿದೆ. ಅಬ್ಬೂರು ಗ್ರಾಮದ ವ್ಯಾಸರಾಯರ ಮಠಕ್ಕೆ ಜಲಧಿಗ್ಬಂದನ ಆಗಿದೆ. ನೀರಿನ ಪ್ರಮಾಣ ಹೆಚ್ಚಾದ ಹಿನ್ನಲೆ ಮಠದ ಸುತ್ತಾ ನೀರು ಆವರಿಸಿದ್ದು ಮಠ ಸಂಪೂರ್ಣವಾಗಿ ಜಲಾವೃತವಾಗಿದ್ದು, 3 ದಿನಗಳ ಕಾಲ ಮಠದಲ್ಲಿ ಪೂಜೆ ಪುನಸ್ಕಾರಕ್ಕೆ ಬ್ರೇಕ್ ಹಾಕಲಾಗಿದೆ.

ಅಪಾರ ಪ್ರಮಾಣದ ಬೆಳೆ ನಾಶ
ಇನ್ನೂ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ಹಲವು ಕಡೆ ಬೆಳೆ ನಾಶವಾಗಿದೆ ನೂರಾರು ಎಕರೆಯಲ್ಲಿ ಬೆಳೆದಿದ್ದ, ತೆಂಗು, ರೇಷ್ಮೆ, ಬಾಳೆ, ಸೀಮೆ ಹುಲ್ಲು ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಬೆಳೆಗಳು ಮಳೆರಾಯನ ಅಬ್ಬರಕ್ಕೆ ಕೊಚ್ಚಿಹೋಗಿದೆ. ಕೆಲವಡೆ ಕೆರೆಗಳು ಕೋಡಿ ಬಿದ್ದು, ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ಅಪಾರ ಪ್ರಮಾಣದ ಬೆಲೆ ಬಾಳುವ ವಸ್ತುಗಳು, ದಿನಸಿ ವಸ್ತುಗಳು ಸಂಪೂರ್ಣವಾಗಿ ನಾಶವಾಗಿದ್ದು, ರೈತರು,‌ ಮನೆ ಕಳೆದುಕೊಂಡ ಕುಟುಂಬಸ್ಥರು ಸಂಕಷ್ಟದಲ್ಲಿದ್ದಾರೆ.

ಒಟ್ಟಾರೆ ರಕ್ಕಸ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದು, ಸಂಕಷ್ಟದಲ್ಲಿರುವ ರೈತರು, ಮನೆ ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರ ಸೂಕ್ತ ಪ್ರಮಾಣದಲ್ಲಿ ಪರಿಹಾರ ಕೊಡಿಸುವ ಕೆಲಸ ಮಾಡಬೇಕಾಗಿದೆ.

click me!