* ದಿನವಿಡೀ ದಟ್ಟಮೋಡ
* ತೀವ್ರವಾಗಿ ಕುಸಿದ ಉಷ್ಣಾಂಶ
* ಇಂದು ಮಳೆ ಬರುವ ಸಾಧ್ಯತೆ
ಬೆಂಗಳೂರು(ಮೇ.12): ಕಳೆದ ಹತ್ತು ದಿನಗಳಿಂದ ಪ್ರತಿ ದಿನ ಸುರಿಯುತ್ತಿದ್ದ ಮಳೆ ಬುಧವಾರ ಕಡಿಮೆಯಾಗಿತ್ತು, ದಿನವಿಡೀ ದಟ್ಟಮೋಡ ಕವಿದ ವಾತಾವರಣವಿದ್ದರೂ ಕೆಲವೆಡೆ ಮಾತ್ರ ತುಂತುರು ಮಳೆಯಾಗಿದೆ(Rain). ಸತತ ಎರಡನೇ ದಿನ ‘ಅಸಾನಿ’ ಚಂಡಮಾರುತದ(Asani Cyclone) ಪ್ರಭಾವದಿಂದ ಸಾಕಷ್ಟು ಕಾರ್ಮೋಡ ಆವರಿಸಿದ್ದರೂ ನಿರೀಕ್ಷಿಸಿದ ಮಟ್ಟದಲ್ಲಿ ಮಳೆ ಸುರಿಯಲಿಲ್ಲ.
ಸಾಮಾನ್ಯವಾಗಿ ಮೇ ತಿಂಗಳಲ್ಲಿ ನಗರದ ವಾಡಿಕೆಯ ಗರಿಷ್ಠ ತಾಪಮಾನ 33.3 ಡಿಗ್ರಿ ಸೆಲ್ಸಿಯಸ್ ಇದ್ದರೆ ಬುಧವಾರ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಚಂಡಮಾರುತದ ಕಾರಣದಿಂದ ನಗರದಲ್ಲಿ ಚಳಿಯ ವಾತಾವರಣ ಇತ್ತು. ಜನರು ಮನೆಯಿಂದ ಸ್ವೆಟರ್, ಜರ್ಕಿನ್ ಧರಿಸಿಕೊಂಡು, ಕೊಡೆ ಹಿಡಿದುಕೊಂಡು ಹೊರ ಬರುವ ದೃಶ್ಯ ಸಾಮಾನ್ಯವಾಗಿತ್ತು.
ನಗರದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 25 ಮತ್ತು 21.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 26.3 ಡಿಗ್ರಿ ಸೆಲ್ಸಿಯಸ್ ಮತ್ತು 22 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 25.8 ಡಿಗ್ರಿ ಸೆಲ್ಸಿಯಸ್ ಮತ್ತು 20.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
‘ಆಸಾನಿ’ಯಿಂದಾಗಿ ಪೂರ್ವ ಕರಾವಳಿಗೆ ಭಾರಿ ಮಳೆ ಭೀತಿ!
ಬೊಮ್ಮನಹಳ್ಳಿ, ಬಿಳೇಕಹಳ್ಳಿ, ಬಿಟಿಎಂ ಬಡಾವಣೆ, ದೊಡ್ಡಬೊಮ್ಮಸಂದ್ರ, ವಿದ್ಯಾಪೀಠ, ಬೆಳ್ಳಂದೂರು, ಸಿಂಗಸಂದ್ರ, ಕೋರಮಂಗಲ, ಈಜಿಪುರ, ಹೂಡಿ, ಶಾಂತಿನಗರ, ಹೆರೋಹಳ್ಳಿ, ಸಾರಕ್ಕಿ ಸೇರಿದಂತೆ ಕೆಲವು ಕಡೆ ತುಂತುರು ಮಳೆ ಬಿದ್ದಿದೆ.
ಗುರುವಾರ ಕೂಡ ಮೋಡ ಕವಿದ ವಾತಾವರಣ(Atmosphere) ಇರಲಿದ್ದು, ಮಳೆ ಬರುವ ಸಾಧ್ಯತೆಯಿದೆ. ಗಾಳಿ ಪ್ರಬಲವಾಗಿ ಬೀಸುವ ನಿರೀಕ್ಷೆಯಿದೆ. ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಕ್ರಮವಾಗಿ 26 ಮತ್ತು 21 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ(Department of Meteorology) ತಿಳಿಸಿದೆ.