
ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ದಕ್ಷಿಣ ಕನ್ನಡ (ಜು. 06): ಕಾರ್ಮಿಕರು ಉಳಿದುಕೊಂಡ ಶೆಡ್‌ಗೆ ಗುಡ್ಡ ಕುಸಿದ ಪರಿಣಾಮ ಶೆಡ್ ನೊಳಗೆ ಸಿಲುಕಿಕೊಂಡ ನಾಲ್ವರು ಕಾರ್ಮಿಕರಲ್ಲಿ ಓರ್ವ ಮೃತಪಟ್ಟು ಮೂವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಬಳಿ ನಡೆದಿದೆ.
ಪಂಜಿಕಲ್ಲು ಗ್ರಾಮದ ಮುಕ್ಕುಡ ಎಂಬಲ್ಲಿ ಹೆನ್ರಿ ಕಾರ್ಲೊ ಎಂಬವರ ಮನೆಯ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಐವರ ಪೈಕಿ ನಾಲ್ವರು ಗುಡ್ಡ ಜರಿದು ಶೆಡ್ ನೊಳಗೆ ಸಿಲುಕಿಕೊಂಡಿದ್ದರು. ಅದರಲ್ಲಿ ಮೂವರನ್ನು ಜೆಸಿಬಿ ಮೂಲಕ ರಕ್ಷಣೆ ಮಾಡಿದರೆ ಓರ್ವ ಮೃತಪಟ್ಟಿದ್ದಾನೆ. ಪಾಲಕ್ಕಾಡು ನಿವಾಸಿ ವಿಜು (46) ಮೃತಪಟ್ಟ ದುರ್ದೈವಿ. ಉಳಿದಂತೆ ಕೊಟ್ಟಾಂ ನಿವಾಸಿ ಬಾಬು (46) ಎಂಬವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೆ, ಕಣ್ಣೂರು ನಿವಾಸಿ ಜಾನ್ (44)ಎಂಬಾತ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ: ಮಳೆ ಕಡಿಮೆಯಾದರೂ ನಿಲ್ಲದ ನೆರೆಹಾವಳಿ: ಉಡುಪಿಯಲ್ಲಿ ರೆಡ್ ಅಲರ್ಟ್
ಸಂತೋಷ್ ಅಲ್ಫೊನ್ಸಾ ಅವರ ರಕ್ಷಣಾ ಕಾರ್ಯ ನಡೆದಿದೆ. ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಶಾಸಕ ರಾಜೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರನ್ನು ಬೆಂಗಳೂರಿನಿಂದಲೇ ದೂರವಾಣಿ ಮೂಲಕ ಸಂಪರ್ಕಿಸಿ ರಕ್ಷಣಾ ಕಾರ್ಯಚರಣೆಗೆ ನಿರ್ದೇಶನ ನೀಡಿದ್ದಾರೆ. ನಾಳೆ ಬೆಳಿಗ್ಗೆ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಜೊತೆ ಘಟನಾ ಸ್ಥಳಕ್ಕೆ ಬೇಟಿ ನೀಡುವುದಾಗಿ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ಎಸ್.ಪಿ.ಹೃಷಿಕೇಶ್ ಸೋನಾವಣೆ, ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ತಹಶೀಲ್ದಾರ್ ಸ್ಮಿತಾರಾಮು ಸಹಿತ ಅಧಿಕಾರಿಗಳು ಭೇಟಿ ನೀಡಿದ್ದಾರೆ.