
ಬೆಂಗಳೂರು(ಫೆ.05): ದೇಶದ ಪ್ರತಿಷ್ಠಿತ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್‌ಗೆ (ಎಚ್‌ಎಎಲ್) ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಕೋಟಿ ಮೊತ್ತದ ಯುದ್ಧ ವಿಮಾನ ಹಾಗೂ ಲಘು ಬಳಕೆಯ ಹೆಲಿಕಾಪ್ಟರ್‌ಗಳ ನಿರ್ಮಾಣಕ್ಕೆ ಆರ್ಡರ್‌ಗಳು ಬರಲಿವೆ. ಹೀಗಾಗಿ ಎಚ್‌ಎಎಲ್ ಪಾಲಿಗೆ ಇದು ಉತ್ತಮ ವರ್ಷ ಎಂದು ಎಚ್‌ಎಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್ ಹೇಳಿದ್ದಾರೆ.
ಈಗಾಗಲೇ 53,000 ಕೋಟಿ ಮೊತ್ತದ ಒಪ್ಪಂದಗಳು ಆರ್ಡರ್ ಪುಸ್ತಕದಲ್ಲಿ ದಾಖಲಾಗಿವೆ. ಏರೋ ಇಂಡಿಯಾ ಮೊದಲ ದಿನವಾದ ಬುಧವಾರ ಕೇಂದ್ರ ಸರ್ಕಾರದೊಂದಿಗೆ ಮಾಡಿಕೊಂಡ 83 ತೇಜಸ್ ಲಘು ಯುದ್ಧ ವಿಮಾನಗಳ ನಿರ್ಮಾಣದ ಒಪ್ಪಂದ ಸೇರಿದರೆ 80 ಸಾವಿರ ಕೋಟಿಗೂ ಹೆಚ್ಚು ಆರ್ಡರ್‌ಗಳು ಬಂದಂತಾಗಿವೆ. ಇನ್ನು ಎಲ್‌ಸಿಎ ತೇಜಸ್ ಫೈಟರ್ ಜೆಟ್ ಖರೀದಿಗೆ ಆಗ್ನೇಯ ಮತ್ತು ಪಶ್ಚಿಮ ಏಷ್ಯಾ ಭಾಗದ ದೇಶಗಳು ಆಸಕ್ತಿ ತೋರಿವೆ. ಜೊತೆಗೆ ಎಲ್‌ಸಿಎಚ್ ಹೆಲಿಕಾಪ್ಟರ್ ಹಾಗೂ ಎಚ್‌ಟಿಟಿ-40 ವಿಮಾನಗಳಿಗೂ ಬೇಡಿಕೆ ಬರುವ ನಿರೀಕ್ಷೆ ಇದೆ. ಹೀಗಾಗಿ ಮುಂದಿನ ವರ್ಷದಲ್ಲಿ 1 ಲಕ್ಷ ಕೋಟಿಗೂ ಹೆಚ್ಚು ಆರ್ಡರ್‌ಗಳು ನಮ್ಮ ಪುಸ್ತಕದಲ್ಲಿ ದಾಖಲಾಗಲಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಐಒಆರ್ ರಾಷ್ಟ್ರಗಳ ಸಮಸ್ಯೆಗಳಿಗೆ ಎಸ್ ಮಂತ್ರವೇ ಪರಿಹಾರ: ಸಿಂಗ್
ಏರೋ ಇಂಡಿಯಾದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂದಿನ 36 ತಿಂಗಳಲ್ಲಿ ಮೊದಲ ತೇಜಸ್ ಲಘು ಯುದ್ಧ ವಿಮಾನವನ್ನು ಭಾರತೀಯ ವಾಯು ಸೇನೆಗೆ ಹಸ್ತಾಂತರಿಸಲಾಗುವುದು. 9 ವರ್ಷದಲ್ಲಿ ಎಲ್ಲ 83 ತೇಜಸ್ ಫೈಟರ್‌ಜೆಟ್‌ಗಳ ಉತ್ಪಾದನೆ ಪೂರ್ಣಗೊಳಿಸಲಾಗುವುದು. ತೇಜಸ್‌ನ ಇಂಜಿನ್ ಭಾಗ ಅಮೆರಿಕಾ, ಇಸ್ರೇಲ್‌ನಿಂದ ಪೂರೈಸಲಾಗುವ ರಡಾರ್ ಮತ್ತು ದೇಶೀಯ ಉತ್ತಮ್ ರಡಾರ್ ಬಳಕೆ ಮಾಡಲಾಗುತ್ತದೆ. ಹೀಗಾಗಿ ಶೇ.52 ರಷ್ಟುಸ್ವದೇಶಿ ವಸ್ತುಗಳಿಂದ ತೇಜಸ್ ನಿರ್ಮಾಣಗೊಳ್ಳಲಿದೆ ಎಂದರು.