
ಮಂಡ್ಯ (ಏ.18): ಮಹಿಳಾ ಮೀಸಲು ಮಸೂದೆಯನ್ನು ಜಾರಿಗೆ ತರುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಮಹಿಳೆಯರಿಗೆ ಇದರಿಂದ ರಾಜಕೀಯ ಪ್ರಾತಿನಿಧ್ಯ ಸಿಕ್ಕಂತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ಮಹಿಳಾ ಮೀಸಲು ಮಸೂದೆ ಜಾರಿಗೆ ಹಿಂದಿನ ಸರ್ಕಾರಗಳು ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಯಾವ ರೀತಿಯಲ್ಲಿ ಜಾರಿಗೊಳಿಸಬೇಕೆಂಬ ವಿಚಾರದಲ್ಲಿ ಗೊಂದಲದಲ್ಲಿದ್ದವು. ಆದರೆ, ಎನ್‌ಡಿಎ ಸರ್ಕಾರ ಮಹಿಳೆಯರನ್ನು ರಾಜಕೀಯವಾಗಿ ಸಬಲೀಕರಣಗೊಳಿಸುವ ದೂರದೃಷ್ಟಿಯನ್ನಿಟ್ಟುಕೊಂಡು ಗೊಂದಲಗಳಿಗೆ ಅವಕಾಶವಾಗದ ರೀತಿಯಲ್ಲಿ ಜಾರಿಗೊಳಿಸಿ ಹೊಸ ಚರಿತ್ರೆಯನ್ನು ಸೃಷ್ಟಿಸಿರುವುದಾಗಿ ಹೇಳಿದರು.
ದೇಶದಲ್ಲಿ ಜನಸಂಖ್ಯೆ ಹೆಚ್ಚಿದೆ. ಎಲ್ಲರಿಗೂ ಸಮಾನತೆ ಸಿಗಬೇಕು. ಮಹಿಳೆಯರಿಗೂ ರಾಜಕೀಯ ಶಕ್ತಿ ತುಂಬಬೇಕೆಂಬ ಕಾರಣದಿಂದ ಮಸೂದಯೆನ್ನು ಜಾರಿಗೊಳಿಸಲಾಗಿದೆ. ಇದಕ್ಕೆ ಮಹಿಳೆಯರೆಲ್ಲರೂ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನವರು ಮಾತ್ರ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲದ ಕಿತಾಪತಿ ಮಾಡುತ್ತಿದ್ದಾರೆ. ಧರ್ಮಾಧಾರಿತವಾಗಿಯೂ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಟೀಕಿಸಿದರು.
ದಕ್ಷಿಣ ರಾಜ್ಯಗಳಿಗೆ ಅನ್ಯಾಯವಿಲ್ಲ: ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಿಂದ ದಕ್ಷಿಣದ ಯಾವುದೇ ರಾಜ್ಯಗಳಿಗೆ ಅನ್ಯಾಯವಾಗುವುದಿಲ್ಲ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ಗೆ ಬುದ್ದಿ ಇಲ್ಲ. ಕೇಂದ್ರ ಸರ್ಕಾರ ಬಿಲ್‌ನಲ್ಲಿ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ. ಹಿಂದೆ ಕಾಂಗ್ರೆಸ್ ಕೂಡ ಇದನ್ನೇ ಮಾಡಿದ್ದು. ತಮಿಳುನಾಡಿನಲ್ಲಿ 39 ಕ್ಷೇತ್ರಗಳಿರುವುದನ್ನು 59ಕ್ಕೆ ಏರಿಸಲಾಗುತ್ತಿದೆ. ಇವರಿಗೇನು ಕಷ್ಟ? ಮೋದಿಯವರು ಮೂರನೇ ಬಾರಿ ಗೆದ್ದಿದ್ದಾರೆ. ನಾಲ್ಕನೇ ಬಾರಿಯೂ ಗೆದ್ದರೆ ನಾವೆಲ್ಲ ಟೆಂಟ್ ಕಟ್ಟಿಕೊಂಡು ಹೋಗಬೇಕಾಗುತ್ತದೆ ಎಂಬ ಭಯ ಅವರಿಗೆ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.
ಸಿಬಿಐನಿಂದ ಸತ್ಯ ಬಹಿರಂಗ: ರಾಜಕಾರಣಿಯ ಮಾತು ಕೇಳಿ ಕೊಲೆ ಮಾಡಿದರೆ ಏನಾಗುತ್ತದೆ ಎಂಬುದು ವಿನಯ್ ಕುಲಕರ್ಣಿ ಪ್ರಕರಣ ಉದಾಹರಣೆ. ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್‌ಗೆ ಶಿಕ್ಷೆಯಾಗಿದೆ. ಯಾರು ಕೊಲೆಯಲ್ಲಿ ಭಾಗಿಯಾಗಿದ್ದರೋ ಅವರೇ ಸತ್ಯ ಹೇಳಿದ್ದಾರೆ. ಕಾಂಗ್ರೆಸ್ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ಮಾಡಿದ್ದರು. ಸಿಬಿಐಗೆ ಕೊಟ್ಟ ಮೇಲೆ ಸತ್ಯ ಬಹಿರಂಗ ಆಗಿದೆ. ರಾಜಕೀಯ ಕೊಲೆಗೆ ತಿಲಾಂಜಲಿ ಹಾಡಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ದೇವೇಗೌಡರನ್ನು ಮತ್ತೆ ರಾಜ್ಯಸಭೆಗೆ ಆಯ್ಕೆ ಮಾಡುವ ವಿಚಾರವನ್ನು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಇದರಲ್ಲಿ ನಮ್ಮ ಹಸ್ತಕ್ಷೇಪ ಏನೂ ಇರುವುದಿಲ್ಲ ಎಂದು ಹೇಳಿದರು.
ಕರ್ನಾಟಕ ಸರ್ಕಾರ ಸತ್ತು ಹೋಗಿದೆ. ಶಾಸಕರು ದೆಹಲಿಗೆ ಹೋಗುತ್ತಿದ್ದಾರೆ. ಒಂದೆಡೆ ಡಿ.ಕೆ.ಶಿವಕುಮಾರ್ ಸಿಎಂ ಆಗಲು ಹೊರಟಿದ್ದಾರೆ. ಆದರೆ ಸಿದ್ದರಾಮಯ್ಯ ಸೀಟ್ ಬಿಡುತ್ತಿಲ್ಲ. ಇದೀಗ ಅವರವರ ಮಕ್ಕಳು ಅಪ್ಪಂದಿರೇ ಮುಖ್ಯಮಂತ್ರಿ ಆಗಬೇಕು ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಒಡೆದ ಮನೆಯಾಗಿದೆ. ಸಿದ್ದರಾಮಯ್ಯ ಅವರು ರಾಜ್ಯವನ್ನು ಸಾಲದ ಕೂಪಕ್ಕೆ ಕೊಂಡೊಯ್ಯುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮನೆಯಲ್ಲಿ ಒಂದು ಕ್ಯಾಬಿನೆಟ್ ಇದೆ ಎಂದು ವ್ಯಂಗ್ಯವಾಡಿದರು.
ದಾವಣಗೆರೆ ಉಪ ಚುನಾವಣೆ ಬಳಿಕ ಮುಸ್ಲಿಂ ನಾಯಕರು ಟಾರ್ಗೆಟ್ ಆಗಿದ್ದಾರೆ. ಜಮೀರ್ ಅಹಮದ್ ಟಾರ್ಗೆಟ್ ಆಗುತ್ತಿದ್ದಾರೆ. ಸದ್ಯ ಕಾಂಗ್ರೆಸ್‌ನಲ್ಲಿ ಗೊಂದಲ ಇರುವುದಂತೂ ಸತ್ಯ. ಯಾರು ಮುಖ್ಯಮಂತ್ರಿ ಅನ್ನೋದು ಜನರ ಪ್ರಶ್ನೆಯೂ ಆಗಿದೆ ಎಂದು ಛೇಡಿಸಿದರು.