ಟಿಕೆಟ್ ಆಧರಿಸಿ ಬಸ್ ಪತ್ತೆ: ಒಡವೆ, ದಾಖಲೆಪತ್ರದ ಬ್ಯಾಗ್ ಹುಡುಕಿದ ಸಾರಿಗೆ ಸಿಬ್ಬಂದಿ

Published : Oct 13, 2026, 09:14 AM IST
Vijayapura

ಸಾರಾಂಶ

ವಿಜಯಪುರದಿಂದ ಬೀಳಗಿಗೆ ಪ್ರಯಾಣಿಸುತ್ತಿದ್ದ ದಂಪತಿ ಆಕಸ್ಮಿಕವಾಗಿ ಬಸ್‌ನಲ್ಲಿ ಚಿನ್ನಾಭರಣ ಹಾಗೂ ದಾಖಲೆಗಳಿದ್ದ ಬ್ಯಾಗ್ ಮರೆತು ಇಳಿದಿದ್ದರು. ಕೋಲ್ಹಾರ ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕ ಸುರೇಶ್ ಚಲವಾದಿ ಅವರು ಟಿಕೆಟ್ ಆಧಾರದ ಮೇಲೆ ಬಸ್ ಪತ್ತೆಹಚ್ಚಿದ್ದಾರೆ. ಬಳಿಕ ಆ ಬ್ಯಾಗನ್ನು ಸುರಕ್ಷಿತವಾಗಿ ದಂಪತಿಗೆ ಮರಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ವಿಜಯಪುರ : ವಿಜಯಪುರದಿಂದ ಬೀಳಗಿಯತ್ತ ಹೋಗುವ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಪ್ರಯಾಣಿಕರು ಬಸ್‌ನಲ್ಲಿ ಬಿಟ್ಟಿದ್ದ ಬಂಗಾರದ ಆಭರಣ ಹಾಗೂ ಕಾಗದ ಪತ್ರಗಳಿರುವ ಬ್ಯಾಗ್‌ನ್ನು ಟಿಕೆಟ್ ಆಧಾರದ ಮೇಲೆ ಬಸ್‌ನ್ನು ಗುರುತಿಸಿ ಚಾಲಕನನ್ನು ಸಂಪರ್ಕಿಸಿ ಮರಳಿ ಪ್ರಯಾಣಿಕರಿಗೆ ಬ್ಯಾಗ್‌ನ್ನು ಒಪ್ಪಿಸಿ ಕೋಲ್ಹಾರ ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕರಾದ ಸುರೇಶ ಚಲವಾದಿ ಮಾನವೀಯತೆ ಮೆರೆದಿದ್ದಾರೆ.

ಬ್ಯಾಗ್‌ ಮರೆತು ಬಸ್‌ನಿಂದ ಇಳಿದ ದಂಪತಿ

ಸೋಮವಾರ ವಿಜಯಪುರದಿಂದ ಬೀಳಗಿ ಕಡೆ ಹೋಗುವ ಬಸ್‌ಗೆ ಪ್ರಯಾಣಿಸುತ್ತಿದ್ದ ನಿಡಗುಂದಿ ತಾಲೂಕಿನ ಆಕಳವಾಡಿ ಗ್ರಾಮದ ಮಹಾಂತೇಶ್ ಹಾಗೂ ಸುರೇಖಾ ಮಾದರ ದಂಪತಿ ಕೋಲ್ಹಾರ ಸಮೀಪದ ಯು.ಕೆ.ಪಿ ಕ್ರಾಸ್‌ನಲ್ಲಿ ಆಕಸ್ಮಿಕವಾಗಿ ಬ್ಯಾಗನ್ನು ಮರೆತು ಬಸ್‌ನಿಂದ ಇಳಿದಿದ್ದಾರೆ. ನಂತರ ಅವರಿಗೆ ಬ್ಯಾಗ್ ನೆನಪಾದಾಗ ತಕ್ಷಣ ಕೋಲ್ಹಾರ ಪಟ್ಟಣಕ್ಕೆ ಆಗಮಿಸಿ ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕ ಸುರೇಶ್ ಚಲವಾದಿರವರಿಗೆ ಮಾಹಿತಿ ತಿಳಿಸಿದ್ದಾರೆ.

ಟಿಕೆಟ್ ಆಧರಿಸಿ ಬಸ್ ಮತ್ತು ಚಾಲಕನ್ನು ಪತ್ತೆ ಮಾಡಿದ ಸುರೇಶ್

ಮಾಹಿತಿ ಪಡೆದುಕೊಂಡ ಸುರೇಶ್ ಅವರು ಪ್ರಯಾಣಿಕರ ಬಳಿಯಿದ್ದ ಟಿಕೆಟ್ ಆಧಾರದ ಮೇಲೆ ಚಾಲಕನನ್ನು ಸಂಪರ್ಕಿಸಿದ್ದಾರೆ. ಅದು ಬೀಳಗಿ ಡಿಪೋ ಬಸ್ ಆಗಿರುವುದರಿಂದ ಚಾಲಕ ವಿಠ್ಠಲ್ ಕೆಳಗಿನಮನಿಯವರನ್ನು ಸಂಪರ್ಕಿಸಿ ಬಸ್‌ನಲ್ಲಿದ್ದ ಬ್ಯಾಗ್‌ನ್ನು ವಶಪಡಿಸಿಕೊಂಡಿದ್ದಾರೆ. ನಂತರ ಕೋಲ್ಹಾರ ಮಾರ್ಗವಾಗಿ ಜೈನಾಪುರ ಕಡೆಗೆ ತೆರಳುತ್ತಿದ್ದ ಬಸ್‌ನ ಚಾಲಕರ ಬಳಿಗೆ ಒಪ್ಪಿಸಿದ್ದಾರೆ. ಅದನ್ನು ಸುರೇಶ್ ಅವರು ಬ್ಯಾಗ್‌ ಕಳೆದುಕೊಂಡ ದಂಪತಿಗೆ ಪುನಃ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಬ್ಯಾಗ್‌ನಲ್ಲಿ ಏನೇನಿತ್ತು?

ಈ ವೇಳೆ ಬ್ಯಾಗ್‌ನಲ್ಲಿ ಬಂಗಾರದ ಕಿವಿ ಒಲೆಗಳು, ಬೆಳ್ಳಿ ಕಾಲ್ಗೆಜ್ಜೆ ಹಾಗೂ SSLC ಅಂಕಪಟ್ಟಿ, ಪಾನ್ ಕಾರ್ಡ್, ಆಧಾರ್‌ ಕಾರ್ಡ್ ಇದ್ದವೆಂದು ತಿಳಿದು ಬಂದಿದೆ. ನಿತ್ಯ ಕೋಲ್ಹಾರ ಮೂಲಕ ನೂರಾರು ಬಸ್‌ಗಳು ಸಂಚರಿಸುತ್ತವೆ. ಪ್ರಯಾಣಿಕರು ಪ್ರಯಾಣದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಸ್‌ನಲ್ಲಿ ಬಿಟ್ಟಿದ್ದ ವಸ್ತುಗಳನ್ನು ಪತ್ತೆಹಚ್ಚಿ ಪುನಃ ಪ್ರಯಾಣಿಕರಿಗೆ ತಲುಪಿಸಿ ಈ ಭಾಗದಲ್ಲಿ ದಕ್ಷ, ಪ್ರಾಮಾಣಿಕ ಸಾರಿಗೆ ನಿಯಂತ್ರಕರಾಗಿ ಸುರೇಶ್ ಚಲವಾದಿರವರು ಕಾರ್ಯನಿರ್ವಹಿಸುತ್ತಿದ್ದಾರೆಂದು ಕೊಲ್ಹಾರ ಪಟ್ಟಣದ ಸಾರ್ವಜನಿಕರು ಕಾರ್ಯವನ್ನು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ವಂದೇ ಮಾತರಂ ಸಂಪೂರ್ಣ ಹಾಡಿದ್ದಕ್ಕೆ ಕಾಂಗ್ರೆಸ್ ಖಂಡನೆ..! ಶಿವಮೊಗ್ಗ ದಸರಾದಲ್ಲಿ ನಡೆದಿದ್ದೇನು?
Yuva Dasara 2026: ಇಂದು ಯುವ ದಸರಾಕ್ಕೆ ನಟ ಪ್ರಭುದೇವರಿಂದ ಉದ್ಘಾಟನೆ, ಇಂದಿನ ಕಾರ್ಯಕ್ರಮ, ಸಮಯ, ಸ್ಥಳದ ಸಂಪೂರ್ಣ ವಿವರ ಇಲ್ಲಿದೆ