
ಭಾಲ್ಕಿ/ಬಳ್ಳಾರಿ: ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ಇಂಧನ ಹಾಗೂ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಗ್ಯಾಸ್ ಸಿಲಿಂಡರ್‌ಗೆ ಹಾಗೂ ಬಳ್ಳಾರಿಯಲ್ಲಿ ಪೆಟ್ರೋಲ್‌ಗಾಗಿ ಜನರು ಪರದಾಡುವಂತಾಗಿದೆ.
ಗ್ಯಾಸ್ ಸಿಲಿಂಡರ್ ಸಿಗುತ್ತೋ, ಇಲ್ಲವೋ ಎಂಬ ಆತಂಕದಲ್ಲಿ ಭಾನುವಾರ ಬೆಳ್ಳಂ ಬೆಳಗ್ಗೆ ಭಾಲ್ಕಿ ಪಟ್ಟಣದ ಭಾರತ್ ಗ್ಯಾಸ್ ಏಜೆನ್ಸಿಯ ಕಚೇರಿ ಮುಂದೆ ನೂರಾರು ಗ್ರಾಹಕರು ಜಮಾಯಿಸಿದ್ದು, ಗ್ಯಾಸ್ ಸಿಲಿಂಡರ್‌ಗಳನ್ನು ಕ್ಯೂನಲ್ಲಿ ಇಟ್ಟಿದ್ದರು. ಸುಮಾರು 1 ಕಿಲೋ ಮೀಟರ್ ದೂರದವರೆಗೆ ಸಿಲಿಂಡರ್‌ಗಳು ಸರತಿ ಸಾಲಿನಲ್ಲಿಟ್ಟಿದ್ದು ಕಂಡು ಬಂತು.
ಹಲವರು ಮಧ್ಯರಾತ್ರಿಯಿಂದಲೇ ಸಿಲಿಂಡರ್ ಪಡೆಯಲು ಸಾಲುಗಟ್ಟಿ ನಿಂತರೆ, ಮಹಿಳೆಯರು, ವೃದ್ಧರು ತಮ್ಮ, ತಮ್ಮ ಖಾಲಿ ಸಿಲಿಂಡರ್ ಮೇಲೆಯೇ ಕುಳಿತುಕೊಂಡು ಸಮಯ ಕಳೆದಿದ್ದಾರೆ. ಭಾಲ್ಕಿಯಲ್ಲಿ ಭಾರತ್ ಗ್ಯಾಸ್‌ನ ಒಂದೇ ಒಂದು ಏಜೆನ್ಸಿ ಇರುವ ಕಾರಣ ಸಿಲಿಂಡರ್ ಕೊರತೆಯಿಂದ ಜನರು ಪರದಾಡುವಂತಾಗಿದೆ. ನೂರಾರು ಜನ ಸೇರಿದ್ದರಿಂದ ಪೊಲೀಸರನ್ನು ಕರೆಸಿ, ಎಲ್ಲರಿಗೂ ಸಿಲಿಂಡರ್ ಸಿಗುವಂತೆ ಮಾಡಲಾಯಿತು.
ಬಳ್ಳಾರಿಯ ಎಚ್.ಪಿ.ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಸಿಗದೆ ಗ್ರಾಹಕರು ಪರದಾಡುವಂತಾಗಿದೆ. ಹೊಸ ಬೈಕ್ ಖರೀದಿಸಿದ್ದ ಗ್ರಾಹಕನೊಬ್ಬ ಪೆಟ್ರೋಲ್ ಸಿಗದೆ ಸುಮಾರು 2 ಕಿ.ಮೀ. ದೂರ ಬೈಕ್ ತಳ್ಳಿಕೊಂಡು ಬಂದಿದ್ದ. ಭಾನುವಾರ ಬೆಳಗ್ಗೆಯಿಂದಲೇ ಸ್ಟಾಕ್ ಇಲ್ಲದೆ, ಬಂಕನ್ನು ಬಂದ್ ಮಾಡಲಾಗಿತ್ತು.