
ಹಾಸನ: ಇಲ್ಲಿನ ವಿದ್ಯಾನಗರದಲ್ಲಿರುವ ತಮ್ಮ ಮನೆಯ ಪಕ್ಕದ ನಿವೇಶನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ನಿರ್ಮಾಪಕಿ ಪುಷ್ಪಾ ಅವರು ಸೋಮವಾರ ಅಪರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ನಮ್ಮ ಜಾಗಕ್ಕೆ ಕೆಲವರು ಬಂದು ಸುಖಾಸುಮ್ಮನೆ ಗಲಾಟೆ ಮಾಡುತ್ತಿದ್ದಾರೆ. ನಾನು ಸದಾ ಇಲ್ಲಿ ಇರುವುದಿಲ್ಲ. ನಮ್ಮ ಹುಡುಗರು ಮಾತ್ರ ಇರುತ್ತಾರೆ. ಹೀಗಾಗಿ, ಈ ಜಾಗಕ್ಕೆ ಭದ್ರತೆ ಒದಗಿಸುವ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.
ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ನಿರ್ಮಾಪಕಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಅಪರ ಜಿಲ್ಲಾಧಿಕಾರಿಗೆ ಮನವಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ನಮ್ಮ ಇ-ಸ್ವತ್ತು ಹಾಗೂ ಚಕ್ಕುಬಂದಿ ದಾಖಲೆಗಳಲ್ಲಿ ಪೂರ್ವಕ್ಕೆ ನಟರಾಜ್ ಅವರಿಗೆ ಸೇರಿದ ನಿವೇಶನ, ಪಶ್ಚಿಮಕ್ಕೆ ನಾನು ಖರೀದಿಸಿರುವ ಮನೆ, ದಕ್ಷಿಣಕ್ಕೆ ರಸ್ತೆ ಹಾಗೂ ಉತ್ತರಕ್ಕೆ ಖಾಲಿ ನಿವೇಶನ ಇದೆ ಎಂದು ಸ್ಪಷ್ಟವಾಗಿ ನಮೂದಾಗಿದೆ.
ಈ ಜಾಗವನ್ನು 1982ರಲ್ಲಿ ಶ್ರೀಮತಿ ಎಂಬುವರು ಖರೀದಿಸಿದ್ದು, 2007ರಲ್ಲಿ ಗಿರೀಶ್ ಅವರಿಗೆ ಮಾರಾಟ ಮಾಡಲಾಗಿತ್ತು. ನಂತರ 2020ರಲ್ಲಿ ನಾನು ಕಾನೂನುಬದ್ಧವಾಗಿ ಇದನ್ನು ಖರೀದಿಸಿದ್ದೇನೆ. ನಮ್ಮ ವಕೀಲರು ಎಲ್ಲಾ ದಾಖಲೆಗಳನ್ನು ಖುದ್ದು ಪರಿಶೀಲಿಸಿದ ಬಳಿಕವೇ ನಾನು 2020ರಲ್ಲಿ ನಿವೇಶನ ಖರೀದಿಸಿದ್ದೇನೆ ಎಂದು ಹೇಳಿದರು.
ಇಷ್ಟು ವರ್ಷ ಯಾವುದೇ ವಿವಾದವಿಲ್ಲದಿದ್ದ ಈ ಜಾಗಕ್ಕೆ ಸಂಬಂಧಿಸಿ ಈಗ ಏಕಾಏಕಿ ಗಲಾಟೆ ಶುರುವಾಗಿದೆ?. ಇದರ ಹಿಂದೆ ಸತ್ಯಮಂಗಲ ಗ್ರಾ.ಪಂ, ಪಿಡಿಓ ನಟರಾಜ್ ಇದ್ದಾರೆ. ಯಶ್ ತಾಯಿ ಎನ್ನುವ ಕಾರಣಕ್ಕೆ ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ವಿವಾದ ಸೃಷ್ಟಿಸಲಾಗುತ್ತಿದೆ. ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಾಸನ ನಿವೇಶನ ವಿವಾದ: ನಿರ್ಮಾಪಕಿ ಪುಷ್ಮಾ ಅರುಣ್‌ಕುಮಾರ್‌ಗೆ ನ್ಯಾಯಾಲಯದಲ್ಲಿ ಹಿನ್ನಡೆ
ಈ ಪ್ರಕರಣ ಈಗಾಗಲೇ ನ್ಯಾಯಾಲಯದ ಮುಂದೆ ಇದ್ದು, ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ. ನನ್ನನ್ನು ಹೆದರಿಸಿ ಜಾಗ ಕಿತ್ತುಕೊಳ್ಳಲು ಕೆಲವರು ಯತ್ನಿಸುತ್ತಿದ್ದಾರೆ. ಆದರೆ, ನಾನು ಇದಕ್ಕೆಲ್ಲಾ ಹೆದರುವುದಿಲ್ಲ. ಈ ವಿಚಾರದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಹೀಗಾಗಿ, ಇಂದು ಅಪರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದೇನೆ. ನಮ್ಮ ಜಾಗಕ್ಕೆ ಕೆಲವರು ಬಂದು ಸುಖಾಸುಮ್ಮನೆ ಗಲಾಟೆ ಮಾಡುತ್ತಿದ್ದಾರೆ. ನಾನು ಸದಾ ಇಲ್ಲಿ ಇರುವುದಿಲ್ಲ. ನಮ್ಮ ಹುಡುಗರು ಇರುತ್ತಾರೆ. ಹೀಗಾಗಿ, ಭದ್ರತಾ ಬಂದೋಬಸ್ತ್ ಅಗತ್ಯವಿದೆ ಎಂದು ಹೇಳಿದರು.
42 ವರ್ಷಗಳ ಬಳಿಕ ಈಗ ಗಲಾಟೆ ಏಕೆ?
ಇದಕ್ಕೆ ಸತ್ಯಮಂಗಲ ಗ್ರಾ.ಪಂ.ಪಿಡಿಓ ಕುಮ್ಮಕ್ಕಿದೆ: ಪುಷ್ಪಾ
ಇದನ್ನೂ ಓದಿ: 'ಏನ್ ರೌಡಿಸಂ ಮಾಡ್ತೀಯಾ..' ಬೋರ್ಡ್ ಕಿತ್ತು ಹಾಕಿ ಮತ್ತೆ ಕಂಪೌಂಡ್ ಹಾಕಲು ಬಂದ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್!