ಉಡುಪಿ: ವಾರಾಹಿ ನದಿಯಿಂದ ಪಂಪಿಂಗ್ ಸ್ಟೋರೆಜ್ ಯೋಜನೆ, ಜಾರ್ಜ್‌

By Kannadaprabha NewsFirst Published Feb 8, 2024, 2:00 AM IST
Highlights

ಗ್ರೀನ್ ಹೈಡ್ರೋಜನ್ ಯೋಜನೆಯಡಿ 400 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಯ ಪೈಲಟ್ ಯೋಜನೆಯನ್ನು ಮಂಗಳೂರಿನಲ್ಲಿ ಆರಂಭಿಸಲಾಗುತ್ತದೆ. ಬಳಿಕ ಖಾಸಗಿ ಸಹಭಾಗಿತ್ವದಲ್ಲಿ 30,000 ಕೋಟಿ ರು. ವೆಚ್ಚದಲ್ಲಿ 5000 ಮೆಗಾವ್ಯಾಟ್ ಯೋಜನೆಯನ್ನು ಆರಂಭಿಸಲಾಗುತ್ತದೆ ಎಂದ ಇಂಧನ ಸಚಿವ ಕೆ.ಜೆ.ಜಾರ್ಜ್ 

ಉಡುಪಿ(ಫೆ.08): ರಾಜ್ಯದಲ್ಲಿ ಮಂಗಳೂರು, ಬೆಳಗಾವಿ ಮತ್ತು ಬಳ್ಳಾರಿಗಳಲ್ಲಿ ಗ್ರೀನ್ ಹೈಡ್ರೋಜನ್ ವಿದ್ಯುತ್ ಉತ್ಪಾದನೆ ಹಾಗೂ ಉಡುಪಿಯಲ್ಲಿ ಪಂಪಿಂಗ್ ಸ್ಟೋರೆಜ್ ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಲಾಗುವುದು ಎಂದು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಅವರು ಮಂಗಳವಾರ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಗ್ರೀನ್ ಹೈಡ್ರೋಜನ್ ಯೋಜನೆಯಡಿ 400 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಯ ಪೈಲಟ್ ಯೋಜನೆಯನ್ನು ಮಂಗಳೂರಿನಲ್ಲಿ ಆರಂಭಿಸಲಾಗುತ್ತದೆ. ಬಳಿಕ ಖಾಸಗಿ ಸಹಭಾಗಿತ್ವದಲ್ಲಿ 30,000 ಕೋಟಿ ರು. ವೆಚ್ಚದಲ್ಲಿ 5000 ಮೆಗಾವ್ಯಾಟ್ ಯೋಜನೆಯನ್ನು ಆರಂಭಿಸಲಾಗುತ್ತದೆ ಎಂದರು. ಬಳ್ಳಾರಿ ಮತ್ತು ಬೆಳಗಾವಿಯಲ್ಲಿಯೂ ಗ್ರೀನ್ ಹೈಡ್ರೋಜನ್ ವಿದ್ಯುತ್ ಉತ್ಪಾದನೆಗೆ ಖಾಸಗಿ ಕಂಪನಿಗಳು ಮುಂದೆ ಬಂದಿವೆ ಎಂದವರು ಹೇಳಿದರು. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ವಾರಾಹಿ ನದಿ ತೀರದಲ್ಲಿ ರಾಜ್ಯದ ಪ್ರಪ್ರಥಮ ಪಂಪಿಂಗ್ ಸ್ಟೋರೆಜ್ ವಿದ್ಯುತ್ ಸ್ಥಾವರ ಸ್ಥಾಪನೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದವರು ಹೇಳಿದರು. ಪ್ರಸ್ತುತ ವಾರಾಹಿ ಭೂಗರ್ಭ ವಿದ್ಯುತ್ ಸ್ಥಾವರದಲ್ಲಿ 500 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗುತ್ತಿದೆ. ಪಂಪಿಂಗ್ ಸ್ಟೋರೆಜ್‌ನಿಂದ ಇದು 1500 ಮೆ.ವ್ಯಾ.ಗೇರಲಿದೆ ಎಂದು ತಿಳಿಸಿದರು.

ಕುಮಾರಪರ್ವತ ಚಾರಣಕ್ಕೂ ಆನ್‌ಲೈನ್‌ ಬುಕ್ಕಿಂಗ್ ಕಡ್ಡಾಯ: ಅರಣ್ಯ ಸಚಿವ ಈಶ್ವರ ಖಂಡ್ರೆ

ವಿದ್ಯುತ್ ಬಳಕೆ ಕಡಿಮೆಯಾಗಿದೆ

ರಾಜ್ಯ ಸರ್ಕಾರ ಗೃಹಜ್ಯೋತಿ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿದ ಬಳಿಕ ರಾಜ್ಯದಲ್ಲಿ ಒಟ್ಟು ವಿದ್ಯುತ್ ಬಳಕೆ ಕಡಿಮೆಯಾಗಿ, ವಿದ್ಯುತ್ ಉಳಿತಾಯವಾಗುತ್ತಿದೆ ಎಂದು ಸಚಿವರು ಹೇಳಿದರು.
ಉಚಿತ ವಿದ್ಯುತ್ ಪಡೆಯುವುದಕ್ಕೆ 200 ಯೂನಿಟ್ ಮಿತಿ ಹಾಕಿರುವುದರಿಂದ, ಈ ಯೋಜನೆಯ ಲಾಭ ಪಡೆಯಲು 200 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುತ್ತಿದ್ದವರು ವಿದ್ಯುತ್ ಬಳಕೆ ಕಡಿಮೆ ಮಾಡಿದ್ದಾರೆ ಎಂದರು.

70 ಲಕ್ಷ ಮನೆಗಳಿಗೆ ಪ್ರಯೋಜನ

ರಾಜ್ಯದಲ್ಲೀಗ ಸರಾಸರಿ ಮನೆ ವಿದ್ಯುತ್ ಬಳಕೆ 58 ಯೂನಿಟ್‌ಗಳಾಗಿದ್ದು, 48 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿರುವವರಿಗೆ ಹೆಚ್ಚುವರಿಯಾಗಿ 10 ಯೂನಿಟ್ ವಿದ್ಯುತ್ ಉಚಿತ ನೀಡುತ್ತಿದ್ದು, ಇದರಿಂದ ರಾಜ್ಯದ 70 ಲಕ್ಷ ಕುಟುಂಬಗಳಿಗೆ ಪ್ರಯೋಜನವಾಗಿದೆ ಎಂದು ಇಂಧನ ಸಚಿವ ಹೇಳಿದರು.

ದಾಖಲೆಯ 40,000 ಮೆಗಾವ್ಯಾಟ್

ರಾಜ್ಯದ ಇತಿಹಾಸದಲ್ಲಿಯೇ ಅತೀಹೆಚ್ಚು 40 ಸಾವಿರ ಮೆಗಾ ವ್ಯಾಟ್ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಕಲ್ಲಿದ್ದಲು ಬಳಕೆಯಿಂದ ಬೂದಿಯ ಸಮಸ್ಯೆ ಎದುರಾಗಿದೆ. ಆದ್ದರಿಂದ ತೊಳೆದ ಕಲ್ಲಿದ್ದಲು ಮತ್ತು ಕಡಿಮೆ ಬೂದು ಉತ್ಪಾದಿಸುವ ಕಲ್ಲಿದ್ದಲು ಖರೀದಿ ಮಾಡಲಾಗುತ್ತದೆ. ರಾಜ್ಯದಲ್ಲೀಗ ವಿದ್ಯುತ್ ಕೊರತೆ ಇಲ್ಲ, ಆದ್ದರಿಂದ ವಿದ್ಯುತ್ ಕಡಿತವೂ ಇಲ್ಲ ಎಂದು ಕೆ.ಜೆ.ಜಾರ್ಜ್ ಹೇಳಿದರು.

ಅಡ್ವಾಣಿಗೆ ರಾಮಲಲ್ಲಾನ ಪೂರ್ಣ ಕೃಪೆಯಾಗಿದೆ: ಪೇಜಾವರ ಶ್ರೀ

ಏನಿದು ಪಂಪಿಂಗ್ ಸ್ಟೋರೆಜ್ ಯೋಜನೆ

ವಾರಾಹಿ ನದಿಯಿಂದ ಕೇವಲ 0.3 ಟಿಎಂಸಿ ನೀರನ್ನು ಒಂದು ಬಾರಿಗೆ ಬಳಸಿ 1000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ ಇದಾಗಿದೆ. ನದಿಯಿಂದ ನೀರನ್ನು ಗುಡ್ಡೆಯ ಮೇಲ್ಭಾಗಕ್ಕೆ ಪಂಪ್ ಮಾಡಿ ಅದರಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಮೇಲಿನಿಂದ ಕೆಳಗೆ ಬಂದ ನೀರನ್ನು ಅಣೆಕಟ್ಟೆಯಲ್ಲಿ ಸಂಗ್ರಹಿಸಿ ಮತ್ತೇ ಅದೇ ನೀರನ್ನು ಮೇಲಕ್ಕೆ ಪಂಪ್ ಮಾಡಿ ನಿರಂತರ ವಿದ್ಯುತ್ ಉತ್ಪಾದಿಸಲಾಗುತ್ತದೆ.

ನೀರನ್ನು ಪುನರ್ಬಳಕೆ ಮಾಡುವುದರಿಂದ, ನದಿಯಲ್ಲಿರುವ ನೀರಾವರಿ ಯೋಜನೆಗೆ ನೀರಿನ ಕೊರತೆಯಾಗುವುದಿಲ್ಲ, ಬೇಸಿಗೆಯಲ್ಲಿಯೂ ನೀರಿನ ಕೊರತೆ ಇದ್ದಾಗಲೂ ನಿರಂತರವಾಗಿ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

click me!