ಸಾಗರದ ಸರ್ಕಾರಿ ಕಾಲೇಜಿಗೆ ಎರಡು ರ‍್ಯಾಂಕ್‌!

By Kannadaprabha News  |  First Published Jul 15, 2020, 12:56 PM IST

ಸಾಗರ ಸರ್ಕಾರಿ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ರ‍್ಯಾಂಕ್‌ ಗಳಿಸಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಖಿಲಾ ಹೆಗಡೆ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಿಂಧು ಜಿ.ಎಂ. ತೃತೀಯ ರ‍್ಯಾಂಕ್‌ ಪಡೆಯುವ ಮೂಲಕ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಸಾಗರ(ಜು.15): ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಎರಡು ರ‍್ಯಾಂಕ್‌ಗಳು ಬಂದಿವೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಖಿಲಾ ಹೆಗಡೆ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಿಂಧು ಜಿ.ಎಂ. ತೃತೀಯ ರ‍್ಯಾಂಕ್‌ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಪಟ್ಟಣದ ವಿನೋಬಾನಗರ ವಾಸಿಯಾಗಿರುವ ಯು.ಪಿ. ಹೆಗಡೆ ಮತ್ತು ಜ್ಯೋತಿ ಹೆಗಡೆ ಅವರ ಪುತ್ರಿಯಾದ ಅಖಿಲಾ ಹೆಗಡೆ ಶೇ.99 ಅಂಕ ಪಡೆದಿದ್ದಾರೆ. ಈಕೆ ಫಿಜಿಕ್ಸ್‌ 100, ಕೆಮಿಸ್ಟ್ರಿ 100, ಮ್ಯಾಥ್‌ಮೆಟಿಕ್ಸ್‌ 100, ಕಂಪ್ಯೂಟರ್‌ ವಿಜ್ಞಾನ 100, ಇಂಗ್ಲೀಷ್‌ 94 ಹಾಗೂ ಸಂಸ್ಕೃತದಲ್ಲಿ 100 ಸೇರಿದಂತೆ ಒಟ್ಟು 594 ಅಂಕ ಪಡೆದಿದ್ದಾರೆ. ಅಖಿಲಾ ಹೆಗಡೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿಯೂ ಶೇ.99.20 ಅಂಕ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

Tap to resize

Latest Videos

ಕಂಪ್ಯೂಟರ್‌ ಕಾಮರ್ಸ್‌ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಿಂಧು ಜಿ.ಎಂ. ತಾಲೂಕಿನ ಗೀಜಗಾರು ಗ್ರಾಮದ ಮಂಜುನಾಥ್‌ ಮತ್ತು ಶಾರದಾ ಅವರ ಪುತ್ರಿಯಾಗಿದ್ದು ಒಟ್ಟು ಶೇ.99.10 ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ರ‍್ಯಾಂಕ್‌ ಪಡೆದಿದ್ದಾರೆ. ಇವರು ಎಕನಾಮಿಕ್ಸ್‌ 100, ಬಿಸಿನೆಸ್‌ ಸ್ಟಡೀಸ್‌ 100, ಅಕೌಂಟೆನ್ಸಿ 100, ಕಂಪ್ಯೂಟರ್‌ ಸೈನ್ಸ್‌ 100, ಇಂಗ್ಲೀಷ್‌ 95 ಹಾಗೂ ಸಂಸ್ಕೃತದಲ್ಲಿ 100 ಅಂಕ ಸೇರಿದಂತೆ ಒಟ್ಟು 595 ಅಂಕ ಪಡೆದಿದ್ದಾರೆ.

ಪೋಷಕರ ಪ್ರೋತ್ಸಾಹ ಹಾಗೂ ಕಾಲೇಜಿನಲ್ಲಿ ಶಿಕ್ಷಕರು ನೀಡಿದ ಮಾರ್ಗದರ್ಶನದಿಂದ ನನಗೆ ತೃತೀಯ ರ‍್ಯಾಂಕ್‌ ಬಂದಿದೆ. ಸರ್ಕಾರಿ ಶಾಲೆಯಲ್ಲಿಯೇ ಓದಬೇಕು ಎನ್ನುವ ನನ್ನ ತಂದೆಯವರ ಮಾರ್ಗದರ್ಶನ ನನಗೆ ಹೆಚ್ಚು ಪ್ರೇರಣೆ ನೀಡಿದೆ. ಜೊತೆಗೆ ಕಾಲೇಜಿನಲ್ಲಿ ಉತ್ತಮ ಬೋಧಕವರ್ಗವಿದ್ದು, ಎಲ್ಲರ ಸಹಕಾರದಿಂದ ರ‍್ಯಾಂಕ್‌ ಪಡೆಯಲು ಸಾಧ್ಯವಾಗಿದೆ. ನನ್ನ ಕಠಿಣ ಪರಿಶ್ರಮಕ್ಕೆ ಫಲ ದೊರಕಿದೆ. - ಅಖಿಲಾ ಹೆಗಡೆ

ರಾಜ್ಯಕ್ಕೆ ತೃತೀಯ ರ‍್ಯಾಂಕ್‌ ಬಂದಿರುವುದು ನನಗೆ ತುಂಬಾ ಸಂತೋಷ ತಂದಿದೆ. ಸರ್ಕಾರಿ ಕಾಲೇಜು ಆದರೂ ಎಲ್ಲಾ ವಿದ್ಯಾರ್ಥಿಗಳ ಬಗ್ಗೆಯೂ ಉಪನ್ಯಾಸಕರು ಪ್ರತ್ಯೇಕ ಕಾಳಜಿ ವಹಿಸಿ ಬೋಧನೆ ಮಾಡುತ್ತಿದ್ದರು. ಸರ್ಕಾರಿ ಕಾಲೇಜು ಎಂದು ಕೆಲವರು ಬೇಸರಪಟ್ಟುಕೊಳ್ಳುತ್ತಾರೆ. ಆದರೆ ಸರ್ಕಾರಿ ಕಾಲೇಜಿನಲ್ಲಿಯೂ ಉತ್ತಮ ಶಿಕ್ಷಣ ಪಡೆಯಬಹುದು ಎನ್ನುವುದಕ್ಕೆ ನನ್ನಂತಹ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಚಾರ್ಟೆಡ್‌ ಅಕೌಂಟೆಂಟ್‌ ಆಗಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದೇನೆ.- ಸಿಂಧು ಜಿ.ಎಂ.  

ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅಖಿಲಾ ಹೆಗಡೆ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. 

click me!