ಪುತ್ರಿ ಆಸ್ಪತ್ರೆಯಲ್ಲಿದ್ದರೂ ಕೊರೋನಾ ಕರ್ತವ್ಯ ಬಿಡದ PSI..!

By Kannadaprabha NewsFirst Published Apr 17, 2020, 1:55 PM IST
Highlights

ವಿಚಲಿತರಾಗದ ಹುಕ್ಕೇರಿ ಪಿಎಸ್‌ಐ ಶಿವಾನಂದ ಗುಡಗನಟ್ಟಿ| ಕರ್ತವ್ಯಪ್ರಜ್ಞೆ ಸಾರ್ವಜನಿಕರ ಮೆಚ್ಚುಗೆ| ಹಿಂದೆಯೂ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿಯೇ ಮುಖ್ಯಮಂತ್ರಿಗಳ ಪದಕಕ್ಕೂ ಭಾಜನರಾಗಿದ್ದ ಗುಡಗನಟ್ಟಿ|

ರವಿ ಕಾಂಬಳೆ 

ಹುಕ್ಕೇರಿ(ಏ.17): ಕೊರೋನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್‌ ವೇಳೆಯಲ್ಲಿಯೇ ತಮ್ಮ ಮುದ್ದಾದ ಮಗಳು ಅನಾರೋಗ್ಯದಿಂದ ಆಸ್ಪತ್ರೆ ಸೇರಿದರೂ ಒಂದಿಷ್ಟು ವಿಚಲಿತರಾಗದೇ ಕರ್ತವ್ಯ ಪ್ರಜ್ಞೆ ಮೆರೆದಿರುವ ಹುಕ್ಕೇರಿ ಪಿಎಸ್‌ಐ ಶಿವಾನಂದ ಗುಡಗನಟ್ಟಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಲಾಕ್‌ಡೌನ್‌ ಘೋಷಿಸಿದ ಬಳಿಕ ಹುಕ್ಕೇರಿ ಠಾಣೆ ವ್ಯಾಪ್ತಿಯ ಇಡೀ ವ್ಯವಸ್ಥೆಯ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿ ನಿಂತು ಪೊಲೀಸರೊಂದಿಗೆ ಕೆಲಸ ನಿರ್ವಹಿಸಬೇಕಾದ ಸಂದರ್ಭ ಒದಗಿ ಬಂತು ಎನ್ನುತ್ತಾರೆ ಪಿಎಸ್‌ಐ ಗುಡಗನಟ್ಟಿ. ಈ ರೀತಿ ಇಲಾಖೆಯಲ್ಲಿ ಹಿಂದೆಯೂ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿಯೇ ಗುಡಗನಟ್ಟಿ ಅವರಿಗೆ ಮುಖ್ಯಮಂತ್ರಿಗಳ ಪದಕಕ್ಕೂ ಭಾಜನರಾಗಿದ್ದಾರೆ.

ಕೊರೋನಾ ವಾರಿ​ಯ​ರ್ಸ್‌: ‘ಗಂಡ-ಮಕ್ಕಳೂ ಸಹ ಅನುಮಾನದಿಂದ ನೋಡ್ತಾರೆ’

ಜನರ ಜತೆಗಿನ ಮುಖಾಮುಖಿಯಲ್ಲಿ ಶಾಂತಿಯಿಂದ ವ್ಯವಸ್ಥೆಯನ್ನು ಪೋಷಿಸುವುದು ಸುಲಭದ ಕೆಲಸವಲ್ಲ. ಪೊಲೀಸರೆಂದರೆ ಹೊಡೆಯುವವರು, ಬಡಿಯುವವರು, ಶಿಕ್ಷೆ ನೀಡುವವರು ಎಂಬ ಮಾತು ಸಾಮಾನ್ಯವಾಗಿ ಕೇಳಿ ಬರುತ್ತಿರುವಾಗ ನಾವು ಇದಕ್ಕಿಂತ ಭಿನ್ನ ಎಂಬುದನ್ನು ಲಾಕ್‌ಡೌನ್‌ ವೇಳೆ ಸಾಬೀತುಪಡಿಸಿದ್ದೇವೆ. ಜತೆಗೆ ಅನೇಕ ಮಾನವೀಯ ಕೆಲಸಗಳನ್ನೂ ಮಾಡಿರುವ ತೃಪ್ತಿ ತಮಗಿದೆ ಎನ್ನುತ್ತಾರೆ ಗುಡಗನಟ್ಟಿ.

ಲಾಕ್‌ಡೌನ್‌ ವೇಳೆ 20 ತಿಂಗಳ ಮಗಳು ಸಾನ್ವಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಈ ವೇಳೆಯಲ್ಲಿ ಸ್ವಲ್ಪ ಭಯಗೊಂಡರೂ ಎದೆಗುಂದದ ಪಿಎಸ್‌ಐ ಗುಡಗನಟ್ಟಿಅವರು ಮಗಳನ್ನು ಸಂಕೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸುತ್ತಾರೆ. ಮಗಳೊಂದಿಗೆ ತಮ್ಮ ಪತ್ನಿ ದೀಪಾ ಅವರನ್ನು ಆಸ್ಪತ್ರೆಯಲ್ಲಿ ಬಿಟ್ಟು ಕರ್ತವ್ಯದ ಕಡೆಗೆ ಮುಖ ಮಾಡಿದ ಪಿಎಸ್‌ಐ ಆ ಕಡೆಗೆ ಹಿಂದಿರುಗಿ ನೋಡಲಿಲ್ಲ.

ಬೆಳಗ್ಗೆ 6 ಗಂಟೆಯಿಂದ ಕೆಲಸದ ದಿನಚರಿ ಆರಂಭಗೊಂಡು ರಾತ್ರಿ 11ಕ್ಕೆ ಮುಕ್ತಾಯವಾಗುತ್ತಿತ್ತು. ಈ ಅವಧಿಯಲ್ಲಿ ಹೇಗೂ ಕೆಲಸದ ಮೇಲಿರುವುದರಿಂದ ಸಮಯ ಹೋಗಿದ್ದೇ ಗೊತ್ತಾಗುತ್ತಿರಲಿಲ್ಲ. ದಾನಿಗಳು ನೀಡಿರುವ ಊಟ-ಉಪಹಾರವನ್ನು ಠಾಣೆಯಲ್ಲಿಯೇ ಸೇವಿಸಿ ಮತ್ತೆ ಕೆಲಸದ ಕಡೆಗೆ ಗಮನಿಸುತ್ತಿದ್ದರು. ಇನ್ನು ಪತ್ನಿ-ಪುತ್ರಿ ಆಸ್ಪತ್ರೆಯಲ್ಲಿದ್ದರೆ ರಾತ್ರಿ ಮನೆಗೆ ಹೋಗಿ ಪಿಎಸ್‌ಐ ಏಕಾಂಗಿಯಾಗಿದ್ದರು.

ಅಷ್ಟೇ ಅಲ್ಲ ತಮ್ಮ ಮಗಳು ಆಸ್ಪತ್ರೆಯಲ್ಲಿದ್ದ ವೇಳೆಯಲ್ಲಿಯೇ ಅನೇಕ ಅಪರಾಧ ಪ್ರಕರಣಗಳನ್ನೂ ಹತ್ತಿಕ್ಕಿದ್ದಾರೆ. ಶಿರೂರ ಅರಣ್ಯ ಪ್ರದೇಶದಲ್ಲಿ ತಮ್ಮ ಪೊಲೀಸ್‌ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಸುಮಾರು 10 ಬ್ಯಾರೆಲ್‌ ಕಳ್ಳಬಟ್ಟಿಸಾರಾಯಿ ನಾಶಪಡಿಸಿದ್ದಾರೆ. ಮದಿಹಳ್ಳಿ, ಹುಲ್ಲೋಳಿ, ಬೆಲ್ಲದ ಬಾಗೇವಾಡಿ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ. ಅನಗತ್ಯವಾಗಿ ಓಡಾಡುತ್ತಿದ್ದ 30ಕ್ಕೂ ಹೆಚ್ಚು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೊರೋನಾ ಹಾಟ್‌ಸ್ಪಾಟ್‌ ಎಂದೇ ಪರಿಗಣಿಸಿರುವ ಕುಡಚಿ ಹಾಗೂ ಬೆಳಗಾವಿಯಿಂದ ಬಂದು ಹುಕ್ಕೇರಿಯಲ್ಲಿ ನೆಲೆಸಿದ್ದವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೇ ರಕ್ಷಿ ಗ್ರಾಮದಿಂದ ನಾಪತ್ತೆಯಾದ ಮಹಿಳೆಯೊಬ್ಬಳನ್ನು ಕೇವಲ 24 ಗಂಟೆಯೊಳಗೆ ಪತ್ತೆ ಹಚ್ಚಿದ್ದಾರೆ.

ಜನರನ್ನು ಮನೆಯೊಳಗೆ ಇರಿಸುವುದು ಮಾತ್ರವಲ್ಲ, ಹೊರಗಿನಿಂದ ಬಂದ ವ್ಯಕ್ತಿಗಳ ತಪಾಸಣೆಗೆ ನೇರವಾಗಿ, ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸುವ ಕೆಲಸವೂ ಇರುತ್ತದೆ. ಜತೆಗೆ ಲಾಕ್‌ಡೌನ್‌ ಉಲ್ಲಂಘನೆಯಾಗದಂತೆ ನೋಡಿಕೊಳ್ಳವುದು. ತಾಲೂಕು ಆಡಳಿತದೊಂದಿಗೆ ವ್ಯವಸ್ಥಿತವಾಗಿ ಕೆಲಸ ನಿರ್ವಹಿಸಿದ್ದೇವೆ. ನನ್ನ ಸಿಬ್ಬಂದಿ ಜತೆಗೆ ಸಹಕರಿಸಿದ ಜನತೆಗೂ ಅಷ್ಟೇ ಧನ್ಯವಾದ ಅರ್ಪಿಸಬೇಕು ಎಂದು ಹುಕ್ಕೇರಿ ಪಿಎಸ್‌ಐ ಶಿವಾನಂದ ಗುಡಗನಟ್ಟಿ ಹೇಳಿದ್ದಾರೆ. 
 

click me!