ಮಾಹಿತಿ ಪಡೆಯಲು ಹೋಗಿದ್ದ ಮಾಧ್ಯಮದವರ ಮೇಲೆ ತಾವರಗೇರಾ ಪೊಲೀಸ್ ಠಾಣೆಯ ಪಿಎಸ್‌ಐ ಗೀತಾಂಜಲಿ ಸಿಂಧೆ ದರ್ಪ| ಕೊಪ್ಪಳ ಜಿಲ್ಲೆಯ ತಾವರಗೇರಾದಲ್ಲಿ ನಡೆದ ಘಟನೆ| ಠಾಣೆಯ ಎದುರು ಚಿತ್ರೀಕರಣ ಮಾಡುವುದಕ್ಕೂ ವಿರೋಧ| ಮಾಹಿತಿ ನೀಡದೆ ಮುಚ್ಚಿಡುವ ಯತ್ನ ಮಾಡಿದ್ದು ಅನುಮಾನಕ್ಕೆ ಕಾರಣ|
ಕೊಪ್ಪಳ(ಜು. 06): ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯ ಮಾಹಿತಿ ಪಡೆಯಲು ಹೋಗಿದ್ದ ಮಾಧ್ಯಮದವರ ಮೇಲೆ ತಾವರಗೇರಾ ಪೊಲೀಸ್ ಠಾಣೆಯ ಪಿಎಸ್‌ಐ ಗೀತಾಂಜಲಿ ಸಿಂಧೆ ದರ್ಪ ಮೆರೆದಿದ್ದಾರೆ. ಅಷ್ಟೇ ಅಲ್ಲ, ಕ್ಯಾಮೆರಾ ತಳ್ಳಾಡಿ ವರದಿಗಾರರ ಮೇಲೆ ಹರಿಹಾಯ್ದಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಹಾಗೂ ಮೃತ ದೇಹಗಳನ್ನು ನೋಡಲು ಮುಂದಾದ ಮಾಧ್ಯಮದವರನ್ನು ಠಾಣೆಯಿಂದ ಹೊರ ಹಾಕಿದ್ದಾರೆ.
ಪತ್ರಕರ್ತರಾದ ಶಿವಕುಮಾರ ಪತ್ತಾರ, ದೊಡ್ಡೇಶ ಎಲಿಗಾರ, ಕ್ಯಾಮರಾಮೆನ್‌ಗಳಾದ ಮಾರುತಿ ಕಟ್ಟಿಮನಿ, ಸಮೀರ್ ಮೇಲೆ ದರ್ಪ ತೋರಿದ್ದಾರೆ. ಇದಾದ ಮೇಲೆಯೂ ಮಾಹಿತಿ ನೀಡಲು ನಿರಾಕರಣೆ ಮಾಡಿದ್ದಲ್ಲದೇ ನಾನೇನು ತಪ್ಪೇ ಮಾಡಿಲ್ಲ ಎನ್ನುವಂತೆ ವರ್ತಿಸಿದ್ದಾರೆ.
ಮದುವೆಗೆ ಅಡ್ಡ ಬಂದ ಜಾತಿ: ಒಂದೇ ಮರಕ್ಕೆ ನೇಣು ಬಿಗಿದುಕೊಂಡ ಪ್ರೇಮಿಗಳು
ಠಾಣೆಯ ಎದುರು ಚಿತ್ರೀಕರಣ ಮಾಡುವುದಕ್ಕೂ ವಿರೋಧ ವ್ಯಕ್ತಪಡಿಸಿದ್ದಲ್ಲದೆ ಮಾಹಿತಿ ನೀಡದೆ ಮುಚ್ಚಿಡುವ ಯತ್ನ ಮಾಡಿದ್ದು ಅನುಮಾನಕ್ಕೆ ಕಾರಣವಾಗಿದೆ. ಕೊನೆಗೆ ಡಿವೈಎಸ್ಪಿ ಅವರು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ನನ್ನದೇನು ತಪ್ಪಿಲ್ಲ, ಮೃತ ದೇಹಗಳನ್ನು ನೋಡುತ್ತೇವೆ ಎಂದರೆ ತೋರಿಸಲು ಆಗುವುದಿಲ್ಲ ಎಂದಿದ್ದಕ್ಕೆ ಹೀಗೆಲ್ಲಾ ಮಾಡಿದ್ದಾರೆ. ಮತ್ತೇನು ಇಲ್ಲ ಎಂದು ಪಿಎಸ್‌ಐ ಗೀತಾಂಜಲಿ ಸಿಂಧೆ ಅವರು ತಿಳಿಸಿದ್ದಾರೆ.