ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು ನಗರಸಭೆ ಸಮರ್ಪಕವಾಗಿ 24*7ನೀರು ಪೂರೈಕೆ ಮಾಡುವಲ್ಲಿ ವಿಫಲವಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದು, ನಾವುಗಳು ಟ್ಯಾಂಕರ್‌ಗಳ ಮೂಲಕ ನಿವಾಸಿಗಳಿಗೆ ನೀರು ಪೂರೈಸುವಂತಾಗಿದೆ ಎಂದು ನಗರಸಭೆಯ ಅಧಿಕಾರಿಗಳ ವಿರುದ್ಧ ನಗರಸಭೆ ಸದಸ್ಯ ವಿ. ಯೋಗೇಶ್ ಹರಿಹಾಯ್ದ ಘಟನೆ ನಡೆಯಿತು.
ತಿಪಟೂರು : ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು ನಗರಸಭೆ ಸಮರ್ಪಕವಾಗಿ 24*7ನೀರು ಪೂರೈಕೆ ಮಾಡುವಲ್ಲಿ ವಿಫಲವಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದು, ನಾವುಗಳು ಟ್ಯಾಂಕರ್‌ಗಳ ಮೂಲಕ ನಿವಾಸಿಗಳಿಗೆ ನೀರು ಪೂರೈಸುವಂತಾಗಿದೆ ಎಂದು ನಗರಸಭೆಯ ಅಧಿಕಾರಿಗಳ ವಿರುದ್ಧ ನಗರಸಭೆ ಸದಸ್ಯ ವಿ. ಯೋಗೇಶ್ ಹರಿಹಾಯ್ದ ಘಟನೆ ನಡೆಯಿತು.
ನಗರಸಭೆಯ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ರಾಮಮೋಹನ್ ಅಧ್ಯಕ್ಷತೆಯಲ್ಲಿ ಕರೆದಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ನೀರಿನ ಸಮಸ್ಯೆ ಸಾಕಷ್ಟುಕಂಡು ಬರುತ್ತಿದ್ದು ಈ ಬಗ್ಗೆ ಹಲವಾರು ಬಾರಿ ನಗರಸಭೆಯ ಅಭಿಯಂತರರಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ 24*7 ಕುಡಿವ ನೀರಿನ ಕಾಮಗಾರಿ ಮಾಡುವಾಗ ರಸ್ತೆಯಲ್ಲಿ ಬೋರ್‌ವೆಲ್ ನೀರಿನ ಪೈಪ್‌ಗಳು ಹಾನಿಗೊಳಗಾಗಿದ್ದು ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಕೆ.ಆರ್.ಬಡಾವಣೆ ಸೇರಿದಂತೆ ಗಾಂಧಿನಗರ ಪ್ರದೇಶದಲ್ಲೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಸಾರ್ವಜನಿಕರಿಂದ ನಗರಸಭೆಯು ಕುಡಿಯುವ ನೀರಿಗಾಗಿ ಪ್ರತಿ ತಿಂಗಳು 120 ರು. ಹಣ ಪಡೆಯುತ್ತಿದ್ದು, ನೀರು ಕೊಡದೆ ಹಣ ವಸೂಲಿ ಏಕೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
undefined
ಹಾಜರಿದ್ದ ಬಹುತೇಕ ಸದಸ್ಯರು ಮಾತನಾಡಿ, ನಗರದ ನೀಲಕಂಠಸ್ವಾಮಿ (ಕೋಡಿ ಸರ್ಕಲ್) ವೃತ್ತದಲ್ಲಿ ನಗರಸಭೆ ವತಿಯಿಂದ ವೃತ್ತದ ಕಾಮಗಾರಿ ನಡೆಯುತ್ತಿದೆ. ಆದರೆ ಈ ಹಿಂದೆ ಇದ್ದ ಹಳೆಯ ಕಲ್ಲುಗಳನ್ನು ಬಳಕೆ ಮಾಡಿಕೊಂಡು ಗುತ್ತಿಗೆದಾರರು ಕಾಮಗಾರಿ ನಡೆಸುತ್ತಿದ್ದಾರೆ. ಅಲ್ಲದೆ ಕಾಮಗಾರಿ ಸ್ಥಳದಲ್ಲಿ ಈ ಹಿಂದೆ ಎರಕದ ವಿದ್ಯುತ್ ಕಂಬವಿತ್ತು ಆದರೆ ಈಗ ಅಲ್ಲಿಲ್ಲ. ಕಾಮಗಾರಿ ಪ್ರಾರಂಭ ಮಾಡಿರುವ ಗುತ್ತಿಗೆದಾರರು ಅಧಿಕಾರಿಗಳು ಯಾವುದೇ ಸರಿಯಾದ ಮಾಹಿತಿ ನೀಡುತ್ತಿಲ್ಲ. ನಗರಸಭೆಗೆ ಸಂಬಂಧಪಟ್ಟಸ್ವತ್ತುಗಳನ್ನು ಜವಾಬ್ದಾರಿಯಿಂದ ರಕ್ಷಣೆ ಮಾಡುವ ಕೆಲಸವನ್ನು ನಗರಸಭೆ ಅಧಿಕಾರಿಗಳು ಮಾಡುತ್ತಿಲ್ಲ. ನಗರಸಭಾ ವ್ಯಾಪ್ತಿಯಲ್ಲಿ ಅನೇಕ ಕಾಮಗಾರಿಗಳು ಸರಿಯಾಗಿ ನಡೆಯದಿದ್ದರೂ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕಾಮಗಾರಿಯ ಬಿಲ್‌ನ್ನು ನೀಡಿದ್ದಾರೆಂದು ನಗರಸಭೆ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡು ಈ ಕೂಡಲೇ ಕಾಮಗಾರಿಗಳ ಬಿಲ್ಲನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷ ರಾಮಮೋಹನ್, ನಗರದಲ್ಲಿ ಕುಡಿಯುವ ನೀರಿಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಹಾಳಾಗಿರುವ ನೀರಿನ ಮೋಟಾರ್ ಪಂಪ್‌ಗಳನ್ನು ಸರಿಪಡಿಸಲಾಗುವುದು. ಕಾಮಗಾರಿಗಳ ಬಗ್ಗೆ ಸಂಬಂಧಪಟ್ಟಗುತ್ತಿಗೆದಾರರು ಹಾಗೂ ಎಂಜಿನಿಯರ್‌ಗಳ ಬಳಿ ಮಾಹಿತಿ ಪಡೆದು ಕ್ರಮವಹಿಸಲಾಗುವುದು ಎಂದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಸೊಪ್ಪುಗಣೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಿರಣ್, ಪೌರಾಯುಕ್ತ ಉಮಾಕಾಂತ್ ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.
ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಅನುಮೋದನೆ
ಕಳೆದ ಒಂದು ತಿಂಗಳಿನಿಂದಲೂ ನೀಲಕಂಠಸ್ವಾಮಿ ವೃತ್ತದಲ್ಲಿ (ಕೋಡಿ ಸರ್ಕಲ್) ಬಸವೇಶ್ವರರ ಪುತ್ಥಳಿ ಸ್ಥಾಪಿಸಬೇಕೆಂದು ತಾಲೂಕು ಬಸವ ಬಳಗವು ನಗರಸಭೆಗೆ ಒತ್ತಾಯ ಮಾಡುತ್ತಲೇ ಇದ್ದು, ಸಭೆಯಲ್ಲಿ ಬಸವೇಶ್ವರ ಪುತ್ಥಳಿಯ ನಿರ್ಮಾಣಕ್ಕೆ ಹಾಜರಿದ್ದ ಎಲ್ಲಾ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿ ಪುತ್ಥಳಿ ಸ್ಥಾಪನೆಗೆ ಅನುಮೋದನೆ ನೀಡಿದರು.