Raichur Republic Day : ಜಡ್ಜ್ ವಿರುದ್ಧ ಪ್ರತಿಭಟನೆ ಜೋರು, ಸತ್ಯ ಮರೆಮಾಚಿ ಅಪಪ್ರಚಾರ ಎಂದ ನ್ಯಾಯಾಧೀಶ

By Suvarna News  |  First Published Jan 27, 2022, 7:24 PM IST

* ಅಂಬೇಡ್ಕರ್‌ ಚಿತ್ರ ತೆರವುಗೊಳಿಸಿದ ಜಡ್ಜ್‌,  ವಿವಾದ
* ರಾಯಚೂರಲ್ಲಿ ದಲಿತರ ಪ್ರತಿಭಟನೆ
*  ರಾಯಚೂರಿನ ಗಣರಾಜ್ಯೋತ್ಸವದ ಘಟನೆ
* ಸುಳ್ಳು ವದಂತಿ ಬಿತ್ತರಿಸಲಾಗುತ್ತಿದೆ ಎಂದ ನ್ಯಾಯಾಧೀಶ


ರಾಯಚೂರು(ಜ. 27)   ರಾಯಚೂರು ಜಿಲ್ಲಾ ನ್ಯಾಯಾಲಯದ ಗಣರಾಜ್ಯೋತ್ಸವ ಸಂದರ್ಭ  ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆರವು  ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿವೆ.  ರಾಯಚೂರು ಮಾತ್ರವಲ್ಲದೆ  ಕರ್ನಾಟಕದ ಇತರ ಕಡೆಗಳಲ್ಲಿಯೂ ಪ್ರತಿಭಟನೆ  ನಡೆದಿದೆ. ಘಟನೆಗೆ ಸಂಬಂಧಿಸಿ  ನ್ಯಾಯಾಧೀಶರು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ ಸತ್ಯ ಸಂಗತಿ ಮರೆಮಾಚಿ ಅಪಪ್ರಚಾರ ಮಾಡಲಾಗುತ್ತಿದೆ  ಎಂದಿದ್ದಾರೆ.

73ನೇ ಗಣರಾಜ್ಯೋತ್ಸವ  ಸಂದರ್ಭ ಜಿಲ್ಲಾ(Raichur) ಕೋರ್ಟ್ ಆವರಣದಲ್ಲಿ ಧ್ವಜಾರೋಹಣಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಅಂಬೇಡ್ಕರ್ (Dr. B. R. Ambedkar) ಮತ್ತು ಗಾಂಧೀಜಿ (Mahatma Gandhi)ಪೋಟೋ  ಒಂದರ ಪಕ್ಕ ಒಂದು ಇಡಲಾಗಿತ್ತು.  ಆದರೆ ಅಂಬೇಡ್ಕರ್ ಪೋಟೋ ತೆರವು ಮಾಡಿದ್ರೆ ಮಾತ್ರ ಧ್ವಜಾರೋಹಣಕ್ಕೆ ಬರುತ್ತೇನೆ ಎಂದು ನ್ಯಾಯಾಧೀಶರು ಹೇಳಿದ್ದರು ಎನ್ನುವುದು ವಿವಾದಕ್ಕೆ ಕಾರಣವಾಗಿತ್ತು.

Tap to resize

Latest Videos

ಗಣರಾಜ್ಯೋತ್ಸವದ ವೇಳೆ ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರವು ಆದೇಶ ಹೊರಡಿಸಿತ್ತು. ಆದರೆ ನ್ಯಾಯಾಧೀಶರು ಸರ್ಕಾರದ ಆದೇಶವು ಹೈಕೋರ್ಟ್‌ ಮುಖಾಂತರ ಕೈ ಸೇರಿಲ್ಲ. ಅದಕ್ಕಾಗಿ ಅಂಬೇಡ್ಕರ್‌ ಭಾವಚಿತ್ರವನ್ನು ತೆರವುಗೊಳಿಸಿದ್ದಾರೆ ಎಂದು ಎಸ್ಸಿ ಸಮುದಾಯ ಹಾಗೂ ಇತರೆ ವಕೀಲರು ಆರೋಪಿಸಿ ಕೋರ್ಟ್‌ ಆವರಣದಲ್ಲಿ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ನಂತರ ಹೈಕೋರ್ಟಿನ ಉಸ್ತುವಾರಿ ನ್ಯಾಯಮೂರ್ತಿಗಳೊಂದಿಗೆ ನ್ಯಾಯಾಧೀಶರು ಚರ್ಚೆ ನಡೆಸಿದ ಬಳಿಕ ಅಂಬೇಡ್ಕರ್‌ ಭಾವಚಿತ್ರವನ್ನು ತಂದು ಮತ್ತೆ ಅದೇ ಸ್ಥಾನದಲ್ಲಿ ಇರಿಸಲಾಯಿತು. ಅಂಬೇಡ್ಕರ್‌ ಭಾವಚಿತ್ರ ತೆರವುಗೊಳಿಸಿದ ವಿಚಾರಕ್ಕಾಗಿ ಸ್ಥಳೀಯರು ನ್ಯಾಯಾಧೀಶರ ನಡೆಯ ವಿರುದ್ಧ ತೀವ್ರ ಅಸಮಧಾನ ಹೊರ ಹಾಕಿದ್ದರು.

ನ್ಯಾಯಾಲಯ ಆವರಣದಲ್ಲಿ ಅಂಬೇಡ್ಕರ್ ಫೋಟೋ ತೆರವು ಘಟನೆ ಖಂಡಿಸಿ ರಾಯಚೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ನಗರ ಬಂದ್ ಗೆ ದಲಿತ ಸಂಘಟನೆಗಳು ಕರೆ ನೀಡಿದ್ದವು. ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಬಳಿ ಟೈರ್ ಗೆ ಬೆಂಕಿ ಹಚ್ಚಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗಿದೆ. ಗಣರಾಜ್ಯೋತ್ಸವದ ವೇಳೆ ಅಂಬೇಡ್ಕರ್ ಫೋಟೋ ತೆರವುಗೊಳಿಸಿದ್ದಕ್ಕೆ ಸಾರಿಗೆ ಬಸ್ ಸೇರಿ ವಾಹನಗಳ ಸಂಚಾರ ಬಂದ್  ಮಾಡಲಾಗಿತ್ತು. ಕಲಬುರಗಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿಯೂ ಪ್ರತಿಭಟನೆ ನಡೆದಿದೆ.

ಸತ್ಯ ಘಟನೆ ಮರೆಮಾಚಿ ಅಪಪ್ರಚಾರ:
ರಾಯಚೂರು “ಸಂವಿಧಾನ ಶಿಲ್ಪಿ ಹಾಗೂ ಭಾರತ ರತ್ನ ಡಾ.ಬಿ.ಅರ್.ಅಂಬೇಡ್ಕರವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಅಭಿಮಾನ ಇದೆ” ಎಂದು ರಾಯಚೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ, ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನ ದಿನ ಆಚರಣೆ ಮಾಡುತ್ತಾ ಬಂದಿದ್ದು, ಆ ಸಮಯದಲ್ಲಿ ನಾನು ಅಂತಹ ಮಹಾನ್ ವ್ಯಕ್ತಿತ್ವ,ತತ್ವ, ಆದರ್ಶ ಮತ್ತು ನಡೆ ನುಡಿಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಅಂತಾ ವಿನಂತಿಸಿಕೊಂಡಿರುತ್ತೇನೆ.  ಮಹಾನ್ ವ್ಯಕ್ತಿಗೆ ನಾನು ಯಾವತ್ತು ಅಗೌರವ ತೋರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ನನ್ನ ಬಗ್ಗೆ ಯಾವ ಉದ್ದೇಶ ಇಟ್ಟುಕೊಂಡು ಆ ರೀತಿ ಅಪಪ್ರಚಾರ ಮಾಡಿದ್ದಾರೆ ಎನ್ನುವುದು ತಿಳಿಯದಾಗಿದೆ. ವದಂತಿ ಸುಳ್ಳಾಗಿದ್ದು ಅದನ್ನು ನಂಬಬೇಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಜ.26ರಂದು(ಬುಧವಾರ)ಬೆಳಗ್ಗೆ 8:30ಕ್ಕೆ ನಮ್ಮ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಾನ್ಯ ಉಚ್ಚ ನ್ಯಾಯಾಲಯದವರು ನೀಡಿದ ಎಸ್.ಒ.ಪಿ. ಪ್ರಕಾರ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿ, ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಒಟ್ಟು 200 ಜನರಿಗೆ ಮೀರದಂತೆ ಸೇರಿ ಗಣರಾಜ್ಯೋತ್ಸವ ಆಚರಿಸಲು ನಿರ್ಣಯಿಸಲಾಗಿತ್ತು.

Raichur Republic Day : ಅಂಬೇಡ್ಕರ್ ಪೋಟೋ ತೆರವು.. ಪ್ರತಿಭಟನೆ ಮತ್ತು ಸಮರ್ಥನೆ

ಆದರೆ ಜ.26ರಂದು ಮುಂಜಾನೆ 8.15ರ ಸುಮಾರಿಗೆ ನಮ್ಮ ಸಿಬ್ಬಂದಿಯವರು ನನ್ನ ಕೊಠಡಿಗೆ ಬಂದು ಕೆಲವು ವಕೀಲರು ಮಹಾತ್ಮ ಗಾಂಧಿಯವರ ಫೋಟೋದ ಜೊತೆ ಡಾ.ಬಿ.ಆರ್.ಅಂಬೇಡ್ಕರ ರವರ ಫೊಟೊವನ್ನು ಸಹ ಇಟ್ಟು ಗಣರಾಜೋತ್ಸವ ಆಚರಿಸಬೇಕೆಂದು ಸರಕಾರದ ಸುತ್ತೋಲೆ ಇದೆ ಅಂತಾ ಹೇಳುತ್ತಿದ್ದಾರೆ ಎಂದರು. ನಂತರ ಕೆಲ ವಕೀಲರು ಬಂದು ನನಗೆ ಸರಕಾರದ ಸುತ್ತೋಲೆಯ ಪ್ರಕಾರ ಡಾ. ಬಿ.ಆರ್. ಅಂಬೇಡ್ಕರ್ ರವರ ಫೋಟೋವನ್ನು ಇಟ್ಟು ಗಣರಾಜೋತ್ಸವ ಆಚರಿಸಬೇಕು ಅಂತಾ ಒತ್ತಾಯಿಸಿದರು.ಆಗ ನಾನು ಆ ಸುತ್ತೋಲೆಯನ್ನು ಉಚ್ಚನ್ಯಾಯಾಲಯದ ಫುಲ್ ಕೋರ್ಟ್ ಮುಂದೆ ಪರಿಗಣೆನೆಗೆ ಇರುವ ಕಾರಣ ನಾವು ಕಾಯಬೇಕು ಅಂತಾ ಉಚ್ಚ ನ್ಯಾಯಾಲಯದ ವಿಲೇಖನಾಧಿಕಾರಿಗಳು ನಮ್ಮ ಲೀಡರ್ಸ್ ಗುಂಪಿನಲ್ಲಿ ತಿಳಿಸಿದ್ದಾರೆ. ಆದ ಕಾರಣ ಒತ್ತಾಯಿಸಬೇಡಿ ಅಂತಾ ವಿನಂತಿಸಿಕೊಂಡೆ. ಅದೇ ಸಮಯದಲ್ಲಿ ರಾಯಚೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜಿ. ಬಸವರಾಜ ವಕೀಲರು ಬಂದು ಅವರಿಗೆ ವಿಲೇಖನಾಧಿಕಾರಿಗಳ ಸೂಚನೆಯ ಬಗ್ಗೆ ತಿಳಿಸಿ ಹೇಳಿ ಹೊರಗೆ ಕರೆದುಕೊಂಡು ಹೋದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ನಮ್ಮ ಸಿಬ್ಬಂದಿ ನನಗೆ ಹೊರಗಡೆ ಬಹಳ ಜನ ಸೇರಿದ್ದಾರೆ ಅಂತಾ ತಿಳಿಸಿದರು. ನಂತರ ನಮ್ಮ ಸಿಬ್ಬಂದಿ ಹೊರಗಡೆಯಿಂದ ಬಂದಿರುವ ಬೇರೆ ಜನರು ಹೊರಗೆ ಹೋಗಿದ್ದಾರೆ, ತಾವು ಧ್ವಜಾರೋಹಣಕ್ಕೆ ಬರಬಹುದು ಅಂತಾ ತಿಳಿಸಿದ ನಂತರ ನಾನು ನಮ್ಮ ಎಲ್ಲಾ ನ್ಯಾಯಾಧೀಶರನ್ನು ಕರೆದುಕೊಂಡು ಧ್ವಜಾರೋಹಣಾ ಸ್ಥಳಕ್ಕೆ ಹೋಗಿ ಧ್ವಜಾರೋಹಣ ನೆರವೇರಿಸಿದೆ ಎಂದು ತಿಳಿಸಿದ್ದಾರೆ.

ಯಾವುದೇ ವ್ಯಕ್ತಿಗಳು ಡಾ.ಬಿ.ಆರ್.ಅಂಬೇಡ್ಕರವರ ಫೋಟೋ ತೆಗೆದುಕೊಂಡು ಬಂದು ಇಟ್ಟಿದ್ದನ್ನು ಮತ್ತು ತೆಗೆದುಕೊಂಡು ಹೋಗಿರುವುದನ್ನು ನಾನು ನೋಡಿರುವುದಿಲ್ಲ. ಈ ಸತ್ಯ ಘಟನೆಯನ್ನು ಮರೆಮಾಚಿ ನಾನು ಅವರಿಗೆ ಡಾ. ಅಂಬೇಡ್ಕರ್ ಫೋಟೊ ತೆಗೆದರೆ ಮಾತ್ರ ಧ್ವಜಾರೋಹಣಕ್ಕೆ ಬರುತ್ತೇನೆ ಅಂತಾ ಅಪಪ್ರಚಾರ ಮಾಡಲಾಗುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

click me!