ವಿಜಯಪುರ ಡಿಸಿ ಮನೆ ಮುಂದೆ ಶವ ಇಟ್ಟು ಪ್ರತಿಭಟನೆ

By Web DeskFirst Published Sep 30, 2019, 2:46 PM IST
Highlights

ನಗರದ ಶಿಕಾರಖಾನೆ ಬಡಾವಣೆಯಲ್ಲಿ ಶುಚಿತ್ವ ಇಲ್ಲದ್ದರಿಂದ ಸಾಂಕ್ರಾಮಿಕ ರೋಗಗಳ ಸಮಸ್ಯೆ ಉಲ್ಬಣ| ಹೀಗಾಗಿ 13 ವರ್ಷದ ಬಾಲಕಿ ಮೆದುಳು ಜ್ವರದಿಂದ ಮೃತಪಟ್ಟಿದ್ದಾಳೆಂದು ಆರೋಪಿಸಿದ ಬಾಲಕಿಯ ಪಾಲಕರು|  ಬಾಲಕಿ ಶವವನ್ನು ಜಿಲ್ಲಾಧಿಕಾರಿ ನಿವಾಸದ ಎದುರು ಇಟ್ಟು ಪ್ರತಿಭಟನೆ| ವೈದ್ಯರು, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಬಾಲಕಿ ಮೃತಪಟ್ಟಿದ್ದಾಳೆಂದು ಆರೋಪ|  

ವಿಜಯಪುರ(ಸೆ.30) ನಗರದ ಶಿಕಾರಖಾನೆ ಬಡಾವಣೆಯಲ್ಲಿ ಶುಚಿತ್ವ ಇಲ್ಲದ್ದರಿಂದ ಸಾಂಕ್ರಾಮಿಕ ರೋಗಗಳ ಸಮಸ್ಯೆ ಉಲ್ಬಣವಾಗಿ 13 ವರ್ಷದ ಬಾಲಕಿ ಮೆದುಳು ಜ್ವರದಿಂದ ಮೃತಪಟ್ಟಿದ್ದಾಳೆಂದು ಆರೋಪಿಸಿದ ಬಾಲಕಿಯ ಪಾಲಕರು ಹಾಗೂ ಸ್ಥಳೀಯ ನಿವಾಸಿ ಬಾಲಕಿ ಶವವನ್ನು ಜಿಲ್ಲಾಧಿಕಾರಿ ನಿವಾಸದ ಎದುರು ಇಟ್ಟು ಪ್ರತಿಭಟಿಸಿದ ಘಟನೆ ನಡೆಯಿತು. 
ಭಾನುವಾರ ನಗರದ ಜಿಲ್ಲಾಧಿಕಾರಿ ನಿವಾಸದ ಎದುರು ಬಾಲಕಿ ಶವವನ್ನು ಆಟೋದಲ್ಲಿಟ್ಟು ವೈದ್ಯರು, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಬಾಲಕಿ ಮೃತಪಟ್ಟಿದ್ದಾಳೆಂದು ಆರೋಪಿಸಿ ಪ್ರತಿಭಟಿಸಿದರು. 

ಮೃತ ಬಾಲಕಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇಲಾಖೆ ಅಧಿಕಾರಿಗಳು, ಕೆಲವೇ ನಿಮಿಷಗಳಲ್ಲಿ ಪ್ರತಿಭಟನಾಕಾರರನ್ನು ಮನವೊಲಿಸಿದರು. ನಂತರ ಪ್ರತಿಭಟನಾಕಾರರು ಪ್ರತಿಭಟನೆ ಕೈ ಬಿಟ್ಟರು. ನಂತರ ಕುಟುಂಬ ಸದಸ್ಯರು ಹಾಗೂ ಬಡಾವಣೆ ನಾಗರಿಕರು ಬಾಲಕಿ ಶವವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ದರು. 

ಕಳೆದ ಹಲವು ದಿನಗಳಿಂದ ಬಾಲಕಿ ಮೆದುಳು ಜ್ವರದಿಂದ ಬಳಲುತ್ತಿದ್ದಳು. ಆಕೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಮೃತಪಟ್ಟಳು. ಬಡಾವಣೆಯಲ್ಲಿ ಶುಚಿತ್ವ ಇಲ್ಲದೇ ಇರುವುದರಿಂದ ಸಾಂಕ್ರಾಮಿಕ ರೋಗಗಳ ಹಾವಳಿ ವ್ಯಾಪಕವಾಗಿದೆ. ಅನೇಕರು ಸಾಂಕ್ರಾಮಿಕ ರೋಗಗಳಿಂದ ಬಳಲುವಂತಾಗಿದೆ ಎಂದು ಬಡಾವಣೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಈ ಬಡಾವಣೆಯಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡದೆ ಇರುವುದರಿಂದಾಗಿ ಆರೋಗ್ಯ ಸಮಸ್ಯೆ ಬಡಾವಣೆಯಲ್ಲಿ ವ್ಯಾಪಕವಾಗಿದೆ. ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪಾಲಿಕೆ ಅಧಿಕಾರಿಗಳು ಗಮನಹರಿಸದೇ ಇರುವುದರಿಂದಾಗಿ ಬಡಾವಣೆಯಲ್ಲಿ ಸಾಂಕ್ರಾಮಿಕ ರೋ ಗಗಳು ಉಲ್ಬಣಗೊಂಡಿವೆ. 

ಇನ್ನಾದರೂ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮಕಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದರು. ಪ್ರತಿಭಟನಾಕಾರರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ನಾಳೆಯೇ ಪಾಲಿಕೆ ಅಧಿಕಾರಿಗಳು ಹಾಗೂ ವೈದ್ಯರ ಸಭೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. 
 

click me!