ಪೌರತ್ವ ಕಾಯ್ದೆಗೆ ವಿರೋಧ: ಕಲಬುರಗಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ

By Kannadaprabha NewsFirst Published Jan 25, 2020, 10:58 AM IST
Highlights

ಪೌರತ್ವ ಕಾಯ್ದೆಗೆ ಅಸಹಕಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶ| ಕಲಬುರಗಿಯಲ್ಲಿ ನಡೆದ ಪ್ರತಿಭಟನಾ ರ‌್ಯಾಲಿ| 

ಕಲಬುರಗಿ(ಜ.25): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶುಕ್ರವಾರ ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಜನಾಂದೋಲನ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ರ‌್ಯಾಲಿಯಲ್ಲಿ ಕಾಂಗ್ರೆಸ್ ಮುಖಂಡರು ಸೇರಿದಂತೆ ಪ್ರಗತಿಪರ ಚಿಂತಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ರ‌್ಯಾಲಿಯಲ್ಲಿ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕಾಯ್ದೆಗಳನ್ನು ಹಿಂಪಡೆಯುವವರಿಗೆ ಹೋರಾಟ ನಿರಂತರವಾಗಿ ನಡೆಯಲಿದೆ. ಸಂವಿಧಾನ ಆಶಯಕ್ಕೆ ಬಲಿಕೊಟ್ಟು ಜಾರಿಗೆ ತರಲು ಮುಂದಾದ ಈ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಗತ್ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಬಿ.ಆರ್ . ಪಾಟೀಲ್ ಮಾತನಾಡಿ, ದೇಶದಲ್ಲಿ ಬಡತನ, ನಿರುದ್ಯೋಗ, ರೈತರ ಆತ್ಮಹತ್ಯೆ, ಮಹಿಳೆಯರ ಮೇಲೆ, ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಸರ್ಕಾರ ಜನಪರ ಯೋಜನೆ ಜಾರಿಗೆ ತರುತ್ತಿಲ್ಲ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಸಿಎಎ ಕಾಯ್ದೆ ಜಾರಿಗೆ ತರಲು ಮುಂದಾಗಿ ಜನರ ಗಮನ ಬೇರೆಡೆ ಸೆಳೆಯುವುದಕ್ಕಾಗಿ ಇದೊಂದು ಕುತಂತ್ರವಾಗಿದೆ. ಮುಸಲ್ಮಾನರು ಮತ್ತು ಹಿಂದೂಗಳಲ್ಲಿ ಧಾರ್ಮಿಕ ವಿಷಬೀಜ ಬಿತ್ತಿ ಹಿಂದೂ ರಾಷ್ಟ್ರ ಕಟ್ಟಲು ಮುಂದಾಗಿದೆ. ಜನವಿರೋಧಿ ಕೇಂದ್ರ ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ದಾಖಲಾತಿ ಕೊಡುವುದಿಲ್ಲವೆಂದು ಪ್ರತಿಯೊಬ್ಬರೂ ನಿರ್ಣಯಕೈಗೊಳ್ಳಬೇಕೆಂದು ಹೇಳಿದರು. 

ಜೆಡಿಎಸ್ ಮುಖಂಡ ನಾಸೀರ್ ಹುಸೇನ್, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ, ಅರ್ಜುನ ಭದ್ರೆ, ಡಾ. ಅಜಯಸಿಂಗ್, ವಿಠ್ಠಲ ದೊಡ್ಡಮನಿ, ಮಹಾರಾಷ್ಟ್ರದ ಸುಷ್ಮಾ ಅಂದಾರೆ, ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದು ಹಿಂದು ಮುಸ್ಲಿಮ್‌ರಲ್ಲಿ ವಿಷ ಬೀಜ ಬಿತ್ತಲಾಗುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತಂದು ಜಾರಿಗೆ ತರಲಾಗಿದೆ. ಈ ಕಾಯ್ದೆ ಜಾತಿ ತಾರತಮ್ಯದಿಂದ ಕೂಡಿದೆ. ಭಾರತದ ಜಾತ್ಯತೀತ ಪರಂಪರೆ ಮುರಿದು ಹಾಕಿ ದೇಶದಲ್ಲಿ ಧರ್ಮದ ಮೇಲೆ ವಿಭಜನೆ ಮಾಡಲಾಗುತ್ತಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ಎನ್‌ಸಿಆರ್, ಎನ್‌ಪಿಆರ್ ಕುರಿತು ಮಾಹಿತಿ ಕೇಳಲು ಬಂದಲೆ ದಾಖಲಾತಿ ಕೊಡಬಾರದು ಎಂದು ಹೇಳಿದರು. 

ಸಮಾವೇಶದಲ್ಲಿ ಶಾಸಕಿ ಖನೀಜ್ ಫಾತಿಮಾ, ಮಹ್ಮದ್ ಅಸಗರ್ ಚುಲಬುಲ್, ಅಲ್ಲಂಪ್ರಭು ಪಾಟೀಲ್, ಜಾವೀದ್ ಅಲಂ, ಅರುಣಕುಮಾರ್ ಪಾಟೀಲ್, ವಾಹಜ್ ಬಾಬಾ, ಮಜರ್‌ಖಾನ್, ಗೌಸುದ್ದೀನ್ ಸಾಬ್, ಎ.ಬಿ. ಹೊಸಮನಿ, ಡಿ.ಜಿ. ಸಾಗರ, ಬಸಣ್ಣ ಸಿಂಗೆ, ಮಲ್ಲೇಸ ಸಜ್ಜನ್ ಸೇರಿದಂತೆ ಇತರ ಮುಖಂಡರು ಇದ್ದರು.
 

click me!