ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಕಲಚೇತನರಿಂದ ಪ್ರತಿಭಟನಾ ಮೆರವಣಿಗೆ| ಹರಪನಹಳ್ಳಿಗೆ ಬಳ್ಳಾರಿಗೆ ಬಹಳಷ್ಟು ದೂರ| ಹರಪನಹಳ್ಳಿ ಶೈಕ್ಷಣಿಕವಾಗಿ, ಭೌಗೋಳಿಕವಾಗಿ ಜಿಲ್ಲೆಯಾಗಲು ಎಲ್ಲ ಅರ್ಹತೆ ಹೊಂದಿದೆ|
ಹರಪನಹಳ್ಳಿ(ಡಿ.08): ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಶನಿವಾರ ವಿಕಲಚೇತನರು ಬೆಂಬಲ ಸೂಚಿಸಿದ್ದಾರೆ.
ಪಶ್ಚಿಮ ತಾಲೂಕುಗಳನ್ನು ಸೇರಿಸಿ ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂಬ ಬೇಡಿಕೆ ಈ ಭಾಗದ ಜನರದ್ದಾಗಿದ್ದು, ಈ ಹಿಂದಿನ ಸರ್ಕಾರಗಳು ರಾಜ್ಯದಲ್ಲಿ ಹೊಸ ಹೊಸ ಜಿಲ್ಲಾ ಕೇಂದ್ರಗಳನ್ನು ರಚನೆ ಮಾಡಿವೆ. ಆದರೆ, ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂಬ ಬೇಡಿಕೆ ಇಟ್ಟುಕೊಂಡು ಇಲ್ಲಿಯ ಜನರು ಹೋರಾಟಕ್ಕಿಳಿದು ತಿಂಗಳುಗಳೇ ಕಳೆದರೂ ಸರ್ಕಾರ ಈ ಕಡೆ ಗಮನ ಹರಿಸದಿರುವುದು ವಿಷಾದದ ಸಂಗತಿ ಎಂದು ವಿಕಲಚೇತನ ಅಸಮಾಧಾನ ವ್ಯಕ್ತಪಡಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹರಪನಹಳ್ಳಿಗೆ ಬಳ್ಳಾರಿಗೆ ಬಹಳಷ್ಟು ದೂರವಾಗುತ್ತದೆ. ಹರಪನಹಳ್ಳಿ ಶೈಕ್ಷಣಿಕವಾಗಿ, ಭೌಗೋಳಿಕವಾಗಿ ಜಿಲ್ಲೆಯಾಗಲು ಎಲ್ಲ ಅರ್ಹತೆ ಹೊಂದಿದೆ. ತಾಲೂಕಿನಲ್ಲಿ 21 ಬಗೆಯ ವಿಕಲಚೇತನರಿದ್ದು, ಇವರು ಯಾವುದೇ ಸೌಲಭ್ಯ ಪಡೆಯಲು ಅಂದರೆ ವೈದ್ಯಕೀಯ ಪ್ರಮಾಣ ಪತ್ರ, ವಿದ್ಯಾರ್ಥಿ ವೇತನ, ವಿವಾಹ ಪ್ರೋತ್ಸಾಹ ಧನ, ವಿಕಲಚೇತನರ ಕಲ್ಯಾಣ ಇಲಾಖೆಯ 33 ಯೋಜನೆಗಳನ್ನು ಹಾಗೂ ನಿಗಮದ ಸಾಲ ಸೌಲಭ್ಯ ಪಡೆಯಲು ದೂರದ ಬಳ್ಳಾರಿಗೆ ಹೋಗಬೇಕಾಗುತ್ತದೆ ಎಂದು ಹೇಳಿದರು.
ಬಳ್ಳಾರಿಗೆ ಹೋಗಿ ಬರಲು ವಿಕಲ ಚೇತನರಿಗೆ ಆರ್ಥಿಕ ಸಂಕಷ್ಟವಿರುತ್ತದೆ. ಒಟ್ಟಿನಲ್ಲಿ ವಿಕಲಚೇತನರಿಗೆ ಒಂದು ಸೂರಿನಡಿ ಸೌಲಭ್ಯ ಪಡೆಯಲು ಕಷ್ಟವಾಗಿದ್ದು, ಹರಪನಹಳ್ಳಿ ಜಿಲ್ಲಾ ಕೇಂದ್ರವಾದರೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ವಿಕಲಚೇತನರು ಪ್ರವಾಸಿ ಮಂದಿರ ವೃತ್ತದಲ್ಲಿ ಜಿಲ್ಲಾ ಹೋರಾಟ ಸಮಿತಿಯಿಂದ ನಡೆಸುತ್ತಿರುವ ಧರಣಿ ಶಾಮಿಯಾನದಲ್ಲಿ ಕುಳಿತು ಬೆಂಬಲ ಸೂಚಿಸಿದರು.
ವಿಕಲಚೇತನರ ಹಾಗೂ ವಿವಿಧೋದ್ದೇಶ ಪುನರ್ವಸತಿ ರಾಜ್ಯ ನಿರ್ದೇಶಕ ಆರ್. ಧನರಾಜ್ , ದಾವಣಗೆರೆ ಜಿಲ್ಲಾಧ್ಯಕ್ಷ ಡಿ. ನೇಮನಾಯ್ಕ, ಚಿಗಟೇರಿ ಪರಶುರಾಮ, ಸೇರಿದಂತೆ ಅನೇಕ ವಿಕಲಚೇತನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.