
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಆ.10): ಬಿಜೆಪಿ ಸರ್ಕಾರದಲ್ಲಿ ಜಾರಿಗೆ ತಂದಿದ್ದ ರೈತಪರವಾದ ಹಲವು ಯೋಜನೆಗಳನ್ನು ರದ್ದು ಪಡಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿ ನಡೆದುಕೊಂಡಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಚಿಕ್ಕಮಗಳೂರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಬಿಜೆಪಿ ಕಚೇರಿಯಿಂದ ಆಜಾದ್ ಪಾರ್ಕ್ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.
ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಕಾರ್ಯಕತರ ಘೋಷಣೆ: ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಅಜಾದ್ ಪಾರ್ಕ್ ವೃತ್ತದಲ್ಲಿ ಬಹಿರಂಗ ಪ್ರತಿಭಟನಾ ಸಭೆ ನಡೆಸಿದ ಕಾರ್ಯಕರ್ತರು ಸರ್ಕಾರದ ವಿರುದ್ದ ಕಿಡಿಕಾರಿದರು. ಪ್ರತಿಭಟನಾ ಸಭೆಯಲ್ಲಿ ಮಾತಾಡಿದ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕೆ.ಆರ್.ಆನಂದಪ್ಪ ಮಳೆ ವೈಫಲ್ಯದಿಂದಾಗಿ ರಾಜ್ಯದಲ್ಲಿ 43 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಅದರ ಬಗ್ಗೆ ಚಿಂತನೆಗಳಿಲ್ಲದೆ ಕೇವಲ ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ ಆದರೆ ಯಾವ ಗ್ಯಾರಂಟಿಯೂ ಪರಿಪೂರ್ಣವಾಗಿ ಜಾರಿಯಾಗಿಲ್ಲ ಎಂದು ದೂರಿದರು.ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟ 11 ಸಾವಿರ ಕೋಟಿ ರೂ. ಅನುದಾನವನ್ನೂ ಗ್ಯಾರಂಟಿಗೆ ಬಳಸಿಕೊಂಡು ಅನ್ಯಾಯ ಮಾಡಿದೆ. ದಲಿತರು ಹಾಗೂ ರೈತ ವಿರೋಧಿಯಾಗಿ ನಡೆದುಕೊಂಡಿದೆ ಎಂದು ಆರೋಪಿಸಿದರು.
ಆಫ್ರಿಕಾ ಜನರ ಆರೋಗ್ಯದ ಗುಟ್ಟು ಭಾರತಕ್ಕೆ ಪರಿಚಯಿಸಿದ ಅನಿಲ್: Baobab Tree ವೈಶಿಷ್ಟ್ಯತೆ ಗೊತ್ತಾ?
ಸರ್ಕಾರ ದಲ್ಲಾಳಿಗಳ ಜೊತೆ ಶಾಮೀಲು: ರಾಜ್ಯ ಕಾಂಗ್ರೆಸ್ ಸರ್ಕಾರ ಇದೇ ರೀತಿ ರೈತವಿರೋಧಿ ನೀತಿ ಮುಂದುವರಿಸಿದಲ್ಲಿ ಕಾಂಗ್ರೆಸಿಗರು ಗ್ರಾಮಗಳಿಗೆ ಕಾಲಿಡದಂತೆ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು. ರೈತ ಬೆಳೆದ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದಾದ ಮಹತ್ವದ ಕಾಯ್ದೆಯನ್ನು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಜಾರಿಗೆ ತಂದಿದ್ದವು. ಈಗಿನ ಕಾಂಗ್ರೆಸ್ ಸರ್ಕಾರ ದಲ್ಲಾಳಿಗಳ ಜೊತೆ ಶಾಮೀಲಾಗಿ ರೈತವಿರೋಧಿಯಾಗಿ ವರ್ತಿಸುತ್ತಿರುವುದನ್ನು ಖಂಡಿಸುತ್ತೇವೆ ಎಂದರು.ರೈತರ ಮಕ್ಕಳು ಉನ್ನತ ವ್ಯಾಸಂಗ ಪಡೆಯಬೇಕು.
ಮುಖ್ಯವಾಹಿನಿಗೆ ಅವರೂ ಬರಬೇಕು ಎನ್ನುವ ಕಾರಣಕ್ಕೆ ಬಿಜೆಪಿ ಸರ್ಕಾರ 11 ಲಕ್ಷ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ನೆರವು ನೀಡಿತ್ತು. ಅದನ್ನೂ ಕಾಂಗ್ರೆಸ್ ಸರ್ಕಾರ ಕಿತ್ತುಹಾಕಿದೆ. ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಬೊಮ್ಮಾಯಿ ಅವರ ಸರ್ಕಾರ 3500 ಕೋಟಿ ರೂ. ಅನುದಾನ ಮಿಸಲಿಟ್ಟಿತ್ತು. ಎಲ್ಲಾ ತಾಲ್ಲೂಕುಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಗೋಶಾಲೆಗಳನ್ನು ತೆರೆಯುವುದು, ಗೋಹತ್ಯೆ ನಿಷೇಧ ಮಾಡುವುದನ್ನು ಜಾರಿಗೆ ತಂದಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗಾಗಿ ಅದನ್ನು ರದ್ದು ಪಡಿಸುವ ಕೆಟ್ಟ ನಿರ್ಧಾರ ತೆಗೆದುಕೊಂಡಿದೆ ಎಂದು ದೂರಿದರು.
ಚಿತ್ರದುರ್ಗ ಜಿಲ್ಲಾಡಳಿತ ಯಡವಟ್ಟು: ಕುಡಿಯುವ ನೀರಿಗೆ ಜನರ ಪರದಾಟ
ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿರಿಸಲಾಗಿದೆ, ಭೂ ಸಿರಿ ಯೋಜನೆ, ಕೃಷಿ ಭೂಮಿ ಮಾರಾಟ ಕಾಯ್ದೆ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್, ಜೀವನ್ ಜ್ಯೋತಿ ವಿಮಾ ಯೋಜನೆ, ಸಿರಿಧಾನ್ಯ ಸಂರಿಸುವ ರೈತ ಉತ್ಪಾದಕ ಸಂ, ರೈತ ಸಂಪದ ಯೋಜನೆ, ಸಹಸ್ತ್ರ ಸರೋವರ ಮತ್ತು ಸಹ್ಯಾದ್ರಿ ಸಿರಿ ಯೋಜನೆ, ಮೀನುಗಾರರಿಗೆ ವಸತಿ ಸೌಲ, ಕಲ್ಯಾಣ ಕರ್ನಾಟಕದ ಕೃಷಿ ಕ್ಲಸ್ಟರ್ ಹೀಗೆ ರೈತರಿಗೆ ಅನುಕೂಲವಾಗುವ ಹತ್ತಾರು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ರದ್ದು ಪಡಿಸಿ ರೈತರಿಗೆ ಅನ್ಯಾಯ ಮಾಡಿದೆ ಎಂದರು.ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಶೆಟ್ಟಿ, ಮಧುರಾಜ್ ಅರಸ್ ಇತರರು ಭಾಗವಹಿಸಿದ್ದರು.