ರಾಜ್ಯಾದ್ಯಂತ ಒಟ್ಟು 9280 ದಾಳಿಂಬೆ ರೈತರು ಸುಮಾರು 341 ಕೋಟಿ ರು. ಸಾಲ ಪಡೆದಿದ್ದು, ಕೊಪ್ಪಳದ ಕುಷ್ಟಗಿ ತಾಲೂಕಿನ ಅನೇಕ ರೈತರಿಗೆ ಬ್ಯಾಂಕುಗಳಿಂದ ನೋಟಿಸು ಬಂದಿದೆ. ಹತ್ತು ದಿನದೊಳಗೆ ಸಾಲ ಮರುಪಾವತಿ ಮಾಡಿ ಎಂದು ತಾಕೀತು ಮಾಡಲಾಗಿದೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ [ಆ.26]: ದಾಳಿಂಬೆ ಬೆಳೆಗಾರರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಉದ್ದೇಶದಿಂದಲೇ ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ 150 ಕೋಟಿ ರು. ಮೀಸಲು ಇಟ್ಟಿದ್ದರು. ಇದೀಗ ಸಮ್ಮಿಶ್ರ ಸರ್ಕಾರ ಪತನವಾಗಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವ ಬೆನ್ನಲ್ಲೇ ದಾಳಿಂಬೆ ಬೆಳೆಗಾರರಿಗೆ ವಕೀಲರ ಮೂಲಕ ಬ್ಯಾಂಕ್‌ನವರು ಸಾಲ ಮರುಪಾವತಿ ನೋಟಿಸ್ ಜಾರಿ ಮಾಡಿದ್ದಾರೆ. ಹತ್ತು ದಿನದೊಳಗೆ ಪಾವತಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಕೂಡ ನೀಡಿದ್ದಾರೆ.
ರಾಜ್ಯಾದ್ಯಂತ ಒಟ್ಟು 9280 ದಾಳಿಂಬೆ ರೈತರು ಸುಮಾರು 341 ಕೋಟಿ ರು. ಸಾಲ ಪಡೆದಿದ್ದು, ಕುಷ್ಟಗಿ ತಾಲೂಕಿನ ಅನೇಕ ರೈತರಿಗೆ ಬ್ಯಾಂಕುಗಳಿಂದ ನೋಟಿಸು ಬಂದಿದೆ ಎಂದು ತಿಳಿದುಬಂದಿದೆ. ಗಂಗನಾಳ ಗ್ರಾಮದ ರಾಮಪ್ಪ ಲಕ್ಷ್ಮಪ್ಪ ಎನ್ನುವವರಿಗೆ ಆ.22ರಂದು ವಕೀಲರ ಮೂಲಕ ಬ್ಯಾಂಕ್ ನೋಟಿಸ್ ಜಾರಿ ಮಾಡಿದ್ದು, ಹತ್ತು ದಿನದೊಳಗೆ ಸಾಲ ಮರುಪಾವತಿ ಮಾಡಿ ಎಂದು ತಾಕೀತು ಮಾಡಲಾಗಿದೆ.
ರಾಮಪ್ಪ ಅವರು ದಾಳಿಂಬೆ ಬೆಳೆಯಲು 2007ರಲ್ಲಿ ಕೆನರಾ ಬ್ಯಾಂಕ್‌ನಲ್ಲಿ 2.80 ಲಕ್ಷ ರು. ಸಾಲ ಪಡೆದಿದ್ದರು. ದಾಳಿಂಬೆ ಬೆಳೆ ದುಂಡಾಣು ಅಂಗಮಾರಿ ರೋಗಕ್ಕೆ ತುತ್ತಾಗಿದ್ದರಿಂದ ಸಾಲ ಮರುಪಾವತಿ ಮಾಡಲು ಆಗಿರಲಿಲ್ಲ. ಈಗ ಸಾಲದ ಅಸಲು, ಬಡ್ಡಿ ಸೇರಿ ಬರೋಬ್ಬರಿ 14 ಲಕ್ಷ ರು. ಆಗಿದೆ. ಹೀಗಾಗಿ ಸಾಲ ಪಾವತಿ ಮಾಡದಿದ್ದರೆ ಬ್ಯಾಂಕ್ ಆಸ್ತಿಯನ್ನೇ ಹರಾಜು ಹಾಕುವ ಕುರಿತು ನೋಟಿಸ್ ಜಾರಿ ಮಾಡಿದೆ.
80% ದಾಳಿಂಬೆ ರಾಜ್ಯದಿಂದ ರಫ್ತಾಗುತ್ತಿತ್ತು
ರಾಜ್ಯಾದ್ಯಂತ ದಾಳಿಂಬೆ ಬೆಳೆ ಅತ್ಯುತ್ತಮವಾಗಿ ಬೆಳೆಯುತ್ತಿದ್ದ ರೈತರು ವಿದೇಶಕ್ಕೆ ರಫ್ತು ಮಾಡುತ್ತಿದ್ದರು. ಅರಬ್ ದೇಶಗಳಲ್ಲಿ ರಾಜ್ಯದ ದಾಳಿಂಬೆಗೆ ಬಹು ಬೇಡಿಕೆ ಇತ್ತು. ದೇಶದ ಶೇ.80 ರಷ್ಟುದಾಳಿಂಬೆ ರಫ್ತು ರಾಜ್ಯದಿಂದಲೇ ಆಗುತ್ತಿತ್ತು. ಇದರಿಂದ ಸಾವಿರಾರು ಕೋಟಿ ರುಪಾಯಿ ವಿದೇಶಿ ವಿನಿಮಯ ದೇಶಕ್ಕೆ ಬಂದಿದೆ. ರಾಜ್ಯಕ್ಕೂ ಅಪಾರ ಪ್ರಮಾಣದ ಆದಾಯ ಬರುವುದಕ್ಕೆ ಕಾರಣವಾಗಿದೆ. ಹೀಗಾಗಿ, ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಿ ಎನ್ನುವುದು ದಾಳಿಂಬೆ ಬೆಳೆಗಾರರ ಒತ್ತಾಯ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೆಳೆ ರೋಗದಿಂದ ರೈತರು ಸಂಕಷ್ಟ
ದಾಳಿಂಬೆ ಬೆಳೆ ಅತ್ಯುತ್ತಮವಾಗಿ ಬರುತ್ತಿತ್ತು. ಬಹುರಾಷ್ಟ್ರೀಯ ಕಂಪನಿಗಳು ದಾಳಿಂಬೆ ಖರೀದಿ ಮಾಡಲು ತಾಲೂಕು ಕೇಂದ್ರಗಳಲ್ಲಿಯೂ ಕಚೇರಿ ತೆರೆದಿದ್ದವು. ದುರದೃಷ್ಟವಶಾತ್ ದಾಳಿಂಬೆ ಬೆಳೆಗೆ 2009ರಲ್ಲಿ ದುಂಡಾಣು ಅಂಗಮಾರಿ ರೋಗ ಬಂತು. ಇದರಿಂದ ಇಡೀ ದಾಳಿಂಬೆ ಬೆಳೆ ನಾಶವಾಯಿತು. ತೋಟಗಾರಿಕಾ ಇಲಾಖೆಯಿಂದ ವಿತರಣೆ ಮಾಡಿದ ದಾಳಿಂಬೆ ಸಸಿಯಿಂದಲೇ ರೋಗ ಬಂದಿದೆ. ರೈತರು ನಾವು ಮಾಡದ ತಪ್ಪಿಗೆ ನಷ್ಟಅನುಭವಿಸಿದ್ದೇವೆ, ಸಾಲಗಾರರಾಗಿದ್ದೇವೆ. ನಮ್ಮ ಸಾಲವನ್ನು ಮನ್ನಾ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ.
ಎಲ್ಲೆಲ್ಲಿ ದಾಳಿಂಬೆ ಬೆಳೆಯುತ್ತಾರೆ?
ಕೊಪ್ಪಳ, ರಾಯಚೂರು, ಬಳ್ಳಾರಿ, ದಾವಣಗೆರೆ, ಗದಗ, ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ಬೀದರ್, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ.
ದಾಳಿಂಬೆ ಬೆಳೆಗಾರರ ಸಾಲಮನ್ನಾ ಮಾಡುವ ಸಂಬಂಧ ಕುಮಾರಸ್ವಾಮಿ ಅವರು ಮಂಡನೆ ಮಾಡಿದ ಬಜೆಟ್‌ನಲ್ಲಿ 150 ಕೋಟಿ ರು. ಮೀಸಲು ಇಟ್ಟಿದ್ದಾರೆ. ಈಗ ಅವರ ಸರ್ಕಾರ ಪತನವಾಗಿ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಈ ನಡುವೆ ದಾಳಿಂಬೆ ಬೆಳೆಗಾರರ ಆಸ್ತಿ ಹರಾಜು ಹಾಕಲು ಬ್ಯಾಂಕಿನವರು ಮುಂದಾಗಿದ್ದಾರೆ. ಕೂಡಲೇ ದಾಳಿಂಬೆ ಬೆಳೆಗಾರರ ಸಾಲ ಮನ್ನಾ ಮಾಡಬೇಕು.
-ನಯೀಮ್, ದಾಳಿಂಬೆ ಬೆಳೆಗಾರರ ಸಂಘದ ಅಧ್ಯಕ್ಷ, ಕುಷ್ಟಗಿ