ಕಲಬುರಗಿ ಭಾಗದಲ್ಲಿ ಬೆಳೆಯುವ ತೊಗರಿಗೆ ಈಗ ಭೌಗೋಳಿಕ ಮಾನ್ಯತೆ ಸಿಕ್ಕಿದೆ. ಕೇಂದ್ರ ಸರ್ಕಾರದಿಂದ ಕೊಡಮಾಡುವ ಭೌಗೋಳಿಕ ಸೂಚ್ಯಂಕ (ಜಿಯೋಗ್ರಫಿಕಲ್ ರಿಜಿಸ್ಪ್ರೇಷನ್ ಇಂಡೆಕ್ಸ್)ವನ್ನು ಈಗ ಕಲಬುರಗಿ ತೊಗರಿಯೂ ಪಡೆದುಕೊಂಡಿದೆ.
ಶೇಷಮೂರ್ತಿ ಅವಧಾನಿ
ಕಲಬುರಗಿ [ಆ.26]: ತ್ವರಿತವಾಗಿ ಬೇಯುವ, ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ, ಕಲಬುರಗಿ ಭಾಗದಲ್ಲಿ ಬೆಳೆಯುವ ತೊಗರಿಗೆ ಈಗ ಭೌಗೋಳಿಕ ಮಾನ್ಯತೆ ಸಿಕ್ಕಿದೆ. ಕೇಂದ್ರ ಸರ್ಕಾರದಿಂದ ಕೊಡಮಾಡುವ ಭೌಗೋಳಿಕ ಸೂಚ್ಯಂಕ (ಜಿಯೋಗ್ರಫಿಕಲ್ ರಿಜಿಸ್ಪ್ರೇಷನ್ ಇಂಡೆಕ್ಸ್)ವನ್ನು ಈಗ ಕಲಬುರಗಿ ತೊಗರಿಯೂ ಪಡೆದುಕೊಂಡಿದೆ. ಈ ಮೂಲಕ ರಾಷ್ಟ್ರ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕಲಬುರಗಿಯ ತೊಗರಿಯನ್ನು ಬ್ರ್ಯಾಂಡ್ ಮಾಡುವುದು ಸುಲಭವಾಗಲಿದೆ.
ಕಲಬುರಗಿ ಜಿಲ್ಲೆಯಲ್ಲಿ ಸುಮಾರು 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗುತ್ತಿದ್ದು, ಸರಿಯಾದ ಬೆಲೆ ಸಿಗದೆ ರೈತರು ಸಾಕಷ್ಟುಸಮಸ್ಯೆ ಎದುರಿಸುತ್ತಿದ್ದರು. ಈಗ ಭೌಗೋಳಿಕ ಮಾನ್ಯತೆ ಸಿಕ್ಕಿರುವುದರಿಂದ ಈ ಭಾಗದ ತೊಗರಿಗೆ ಉತ್ತಮ ಮಾರುಕಟ್ಟೆಸಿಗುವ ನಿರೀಕ್ಷೆ ಇದೆ.
ಭೌಗೋಳಿಕ ಮಾನ್ಯತೆಗಾಗಿ 2017ರ ಸೆಪ್ಟೆಂಬರ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆ ಬಳಿಕ ಅನೇಕ ಹಂತದ ವಿಚಾರಣೆಗಳು, ಪೂರಕ ಮಾಹಿತಿ, ದಾಖಲೆ, ಅಂಕಿ-ಅಂಶಗಳನ್ನೆಲ್ಲ ಕಲೆಹಾಕಿ ಮಾಹಿತಿ ಪಡೆದ ಚೆನ್ನೈನಲ್ಲಿರುವ ಜಿಯೋಗ್ರಫಿಕಲ್ ರಿಜಿಸ್ಪ್ರೇಷನ್ ಕಚೇರಿಯವರು ಆ.14 ರಂದು ಕಲಬುರಗಿ ತೊಗರಿಗೆ ಭೌಗೋಳಿಕ ಸೂಚ್ಯಂಕ ನೀಡುವ ತೀರ್ಮಾನ ತೆಗೆದುಕೊಂಡರು.
ಕಲಬುರಿಗ ತೊಗರಿ ಬೇಳೆ ತನ್ನ ಸ್ವಾದ ಹಾಗೂ ಗುಣಮಟ್ಟಕ್ಕೆ ಹೆಸರುವಾಸಿ. ಈ ಬೇಳೆ ಬೇಯಲು ಹೆಚ್ಚು ಸಮಯ ಬೇಕಿಲ್ಲ. ಹೆಚ್ಚಿನ ಖನಿಜಾಂಶಗಳು, ಪೋಷಕಾಂಶಗಳನ್ನೂ ಈ ಭಾಗದಲ್ಲಿ ಬೆಳೆಯುವ ತೊಗರಿ ಹೊಂದಿದೆ. ಕೆಲ ವರ್ಷಗಳ ಹಿಂದೆ ರಾಜ್ಯದಲ್ಲಿ ಉಡುಪಿ ಜಿಲ್ಲೆಯ ಮಟ್ಟುಗುಳ್ಳ(ಬದನೆ), ನಂಜನಗೂಡಿನ ರಸಬಾಳೆಗೂ ಭೌಗೋಳಿಕ ಮಾನ್ಯತೆ ಸಿಕ್ಕಿತ್ತು. ರಾಜ್ಯದಲ್ಲಿ ಅಂದಾಜು 9 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗುತ್ತಿದ್ದು, ಈ ಪೈಕಿ ಶೇ.60ರಷ್ಟುಪ್ರದೇಶ ಕಲಬುರಗಿ ಜಿಲ್ಲೆಯೊಂದರಲ್ಲೇ ಬೆಳೆಯಲಾಗುತ್ತದೆ.
ಏನಿದು ಜಿಇಆರ್?
ನಿರ್ದಿಷ್ಟಪ್ರದೇಶವೊಂದರಲ್ಲಿ ಯಾವುದೇ ರೀತಿಯ ಉತ್ಪನ್ನವನ್ನು ವಿಶಿಷ್ಟವಾಗಿ ಬೆಳೆಯಲಾಗುತ್ತಿದ್ದರೆ ಅಲ್ಲಿನ ಹವಾಮಾನ ಅಂಶಗಳು, ಪರಿಸರ ಇತ್ಯಾದಿ ಸಂಗತಿಗಳನ್ನಾಧರಿಸಿ ಭೌಗೋಳಿಕವಾಗಿ ಈ ಉತ್ಪನ್ನ ನಿರ್ದಿಷ್ಟಪರಿಸರದಲ್ಲಷ್ಟೇ ಗುಣಮಟ್ಟದಿಂದ ಬೆಳೆಯುತ್ತದೆ ಎಂದು ಸಾರುವುದೇ ಭೌಗೋಳಿಕ ಸೂಚ್ಯಂಕದ ಉದ್ದೇಶ. ಕಲಬುರಗಿಯ ಬಿಸಿಲು, ಆದ್ರ್ರ ಹವಾಮಾನ, ಕಡಿಮೆ ಮಳೆ, ಸುಣ್ಣದ ಕಲ್ಲಿನ ಭೂಮಿಯೊಡಲು ಮತ್ತಿತರ ಅಂಶಗಳು ಈ ಭಾಗದಲ್ಲಿ ಬೆಳೆಯುವ ತೊಗರಿಯನ್ನು ಇತರೆಡೆ ಬೆಳೆಯುವ ತೊಗರಿಗಿಂತ ಭಿನ್ನವಾಗಿಸುತ್ತದೆ.
ಏನು ಲಾಭ?
ಕಲಬುರಗಿ ತೊಗರಿಗೆ ದೇಶ, ವಿದೇಶದಲ್ಲಿ ಮಾನ್ಯತೆ ಸಿಗಲಿದೆ. ಕಲಬುರಗಿ ತೊಗರಿ ಹೆಸರಲ್ಲಿ ಬೇರೆ ಪ್ರದೇಶದಲ್ಲಿ ಬೆಳೆಯುವ ತೊಗರಿ ಮಾರಾಟ ತಪ್ಪಲಿದೆ. ಕಲಬುರಗಿ ರೈತರಿಗೆ ಹೆಚ್ಚಿನ ಬೆಲೆ ಸಿಗಲಿದೆ