
ತಿಪಟೂರು: ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿ ಕೃಷಿಕರ ಸಮಸ್ಯೆಗಳನ್ನು ಇಲಾಖೆಗಳ ಗಮನಕ್ಕೆ ತರುವಲ್ಲಿ ಹಾಲಪ್ಪ ಪ್ರತಿಷ್ಠಾನದ ರೈತರೊಂದಿಗೆ ನಾವು ಉತ್ತಮ ಕಾರ್ಯಕ್ರಮವಾಗಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ಕರಡಾಳುಸಂತೆ ಮೈದಾನದಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ರೈತರೊಂದಿಗೆ ನಾವು ಎಂಬ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹತ್ತಾರು ಯೋಜನೆ ಜಾರಿಗೆ ತಂದು ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿವೆ. ಸಹಕಾರಿ ಕ್ಷೇತ್ರದ ಮೂಲಕವೂ ರೈತರಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಕ್ರಾಂತಿಕಾರಿ ಬದಲಾವಣೆ ತರಲಾಗಿದೆ. ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ್ ಹಾಲಪ್ಪ ಜಿಲ್ಲೆಯಾದ್ಯಂತ ರೈತರೊಂದಿಗೆ ನಾವು ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸುತ್ತಿದ್ದಾರೆ ಎಂದರು.
ಹಾಲಪ್ಪ ಪ್ರತಿಷ್ಠಾನದ ಮುರುಳೀಧರ್ ಹಾಲಪ್ಪ ಮಾತನಾಡಿ, , ರೈತರಿಗೆ ಸರ್ಕಾರ ಯೋಜನೆಗಳು ತಲುಪಬೇಕು ಹಾಗೂ ಅವರ ಕಷ್ಟ ಕಾರ್ಪಣ್ಯ, ಸಮಸ್ಯೆಗಳ ಧ್ವನಿಯಾಗಿ ರೈತರೊಂದಿಗೆ ನಾವು ಎಂಬ ವಿಭಿನ್ನ ಕಾರ್ಯಕ್ರಮ ಜಿಲ್ಲಾದ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು ಇದು 9ನೇ ಕಾರ್ಯಕ್ರಮವಾಗಿದೆ. ರಾಜ್ಯ ಸರ್ಕಾರ ರೈತರ ಹಿತಾಸಕ್ತಿಗೆ ಬದ್ಧವಾಗಿ ನಿಂತಿದ್ದು, ರೈತರ ಏಳಿಗೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಬರ ತಾಂಡವವಾಡುತ್ತಿದ್ದು 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳಾಗಿ ಘೋಷಿಸಿದ್ದು, ಕೇಂದ್ರದಿಂದ ಪ್ರವಾಸ ತಂಡ ರಾಜ್ಯಕ್ಕೆ ಭೇಟಿ ಕೊಟ್ಟು ಮಾಹಿತಿ ಪಡೆದಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಯಥಾವತ್ತು ವರದಿ ಕೊಟ್ಟಿದ್ದು, ಹೆಚ್ಚಿನ ಅನುದಾನ, ಪರಿಹಾರವನ್ನು ನ್ಯಾಯಬದ್ದವಾಗಿ ಕೇಂದ್ರ ಸರ್ಕಾರ ಕೊಡಬೇಕು ಎಂದರು.
ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಈ ಸಂದರ್ಭದಲ್ಲಿ ರೈತರು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಂಡು ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡರು.
ಸಂಸದ ಜಿ.ಎಸ್.ಬಸವರಾಜು, ಜಿಲ್ಲೆಯ ಜನರ ಪರವಾಗಿ ಲೋಕಸಭೆಯಲ್ಲಿ ಪ್ರತಿನಿಧಿಯಾಗಿದ್ದರೂ ಅವರ ಕಾರ್ಯವೈಖರಿ ತುಮಕೂರು ನಗರಕ್ಕೆ ಮಾತ್ರ ಸೀಮಿತವಾಗಿದೆ. ಸಂಸತ್ ಸದಸ್ಯರಾಗಿದ್ದರೂ ಇಡೀ ಜಿಲ್ಲೆಯ ಅಭಿವೃದ್ಧಿ ಕುಂಟಿತವಾಗಿದೆ. ಚುನಾವಣೆ ಈ ಸಂದರ್ಭದಲ್ಲಾದರೂ ನಗರದಿಂದ ಆಚೆ ಬಂದು ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಭೇಟಿ ನೀಡಿ ಜನರ ಕಷ್ಟಕ್ಕೆ ಸ್ಪಂದಿಸಿ ಅಭಿವೃದ್ದಿಯತ್ತ ಚಿಂತಿಸಬೇಕಿದೆ.
-ಮುರುಳೀಧರ್ ಹಾಲಪ್ಪ, ಜಿಲ್ಲಾ ಲೋಕಸಭಾ ಕ್ಷೇತ್ರದ ಸಂಭವನೀಯ ಅಭ್ಯರ್ಥಿ
ಸಭೆಯಲ್ಲಿ ಕೃಷಿ ಸಹಾಯಕ ನಿರ್ದೇಶಕ ಚನ್ನಕೇಶವಮೂರ್ತಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಪಶು ಸಂಗೋಪನಾ ಇಲಾಖೆ ಅಧಿಕಾರಿ ಡಾ. ನಂದೀಶ್, ನಬಾರ್ಡ್‌ನ ಕೀರ್ತಿಪ್ರಭಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾ. ಯೋಜನಾಧಿಕಾರಿ ಸುರೇಶ್, ಮೀನುಗಾರಿಕೆ ಇಲಾಖೆ, ರೇಷ್ಮೆ, ಅರಣ್ಯ ಇಲಾಖೆ, ಲೀಡ್ ಬ್ಯಾಂಕ್ ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ರೈತರಿಗೆ ಮಾಹಿತಿ ನೀಡಿದರು. ಕಾಂಗ್ರೆಸ್ ಮುಖಂಡ ಕಾಂತರಾಜು ಸೇರಿದಂತೆ ಸ್ಥಳೀಯ ಮುಖಂಡರು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು. ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ವಿವಿಧ ವಸ್ತುಗಳ ಮಾರಾಟ ಏರ್ಪಡಿಸಲಾಗಿತ್ತು.