ಉಡುಪಿಯ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿರುವ ಮೂವರು ವಿದ್ಯಾರ್ಥಿನಿಯನ್ನು ಬಂಧಿಸಬೇಕು ಹಾಗೂ ಸಿಐಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ಮುಖಂಡರು ಹಾಗೂ ಕಾರ್ಯಕರ್ತರು ಮೈಸೂರು ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟಿಸಿದರು.
ಮೈಸೂರು : ಉಡುಪಿಯ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿರುವ ಮೂವರು ವಿದ್ಯಾರ್ಥಿನಿಯನ್ನು ಬಂಧಿಸಬೇಕು ಹಾಗೂ ಸಿಐಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ಮುಖಂಡರು ಹಾಗೂ ಕಾರ್ಯಕರ್ತರು ಮೈಸೂರು ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟಿಸಿದರು.
ಈ ವೇಳೆ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಉಡುಪಿಯ ಖಾಸಗಿ ಮಹಿಳಾ ಕಾಲೇಜಿನಲ್ಲಿ ಅದೇ ಕಾಲೇಜಿನ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಕ್ಯಾಮರಾ ಇರಿಸಿ ಹಿಂದೂ ಯುವತಿಯರ ಖಾಸಗಿ ವಿಡಿಯೋ ಚಿತ್ರೀಕರಿಸಿದ್ದಾರೆ. ಇಂತಹ ಘಟನೆ ಕಾಲೇಜಿನಲ್ಲಿ ನಡೆದಿದ್ದರೂ ಯಾವ ರೀತಿಯ ಕಾನೂನು ಕ್ರಮ ಜರುಗಿಸಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗ ಮಧ್ಯಪ್ರವೇಶಿಸಿದ ನಂತರ ಮೂವರು ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿನಿಯರನ್ನು ಅಮಾನತಿನಲ್ಲಿಟ್ಟಿದ್ದು, ಕೂಡಲೇ ಈ ವಿದ್ಯಾರ್ಥಿನಿಯರನ್ನು ಬಂಧಿಸಬೇಕು. ಇವರ ಹಿಂದೆ ಇರುವ ಸಂಘಟನೆ ಯಾವುದೆಂದು ಪತ್ತೆಹಚ್ಚಿ ನಿಷೇಧಿಸಬೇಕು. ಕೂಡಲೇ ಸಂತ್ರಸ್ತ ಹೆಣ್ಣು ಮಕ್ಕಳಿಗೆ ಮತ್ತು ಅವರ ಮನೆಯವರಿಗೆ, ಪ್ರಕರಣ ಬೆಳಕಿಗೆ ತಂದ ರಶ್ಮಿ ಸಾವಂತ ಅವರಿಗೂ ರಕ್ಷಣೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯ ಸರ್ಕಾರ ಪೊಲೀಸರ ಮೇಲೆ ಒತ್ತಡ ಹೇರಿ ಪ್ರಕರಣವನ್ನು ಮುಚ್ಚಿ ಹಾಕಿಸುವ ಗುಮಾನಿ ಇದ್ದು, ಸಿಐಡಿ ತನಿಖೆಗೆ ವಹಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು, ಇದು ಮಕ್ಕಳ ಆಟ ಎಂದು ಉಡಾಫೆ ಮಾತುಗಳನ್ನು ಆಡಿದ್ದಾರೆ. ರಾಜ್ಯದ ಜನತೆಗೆ ಇಂತಹ ಗೃಹಮಂತ್ರಿ ಯಾವ ರಕ್ಷಣೆ ನೀಡುತ್ತಾರೆ? ರಾಜ್ಯದ ಮಹಿಳೆಯರಿಗೆ ಹೇಗೆ ನ್ಯಾಯ ಕೊಡಿಸುತ್ತಾರೆ. ಇಂತಹ ಗೃಹಮಂತ್ರಿ ರಾಜ್ಯಕ್ಕೆ ಬೇಕಿಲ್ಲ. ಹೀಗಾಗಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಉಪ ಮೇಯರ್ ಡಾ.ಜಿ. ರೂಪಾ, ನಗರ ಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್, ವೇದಾವತಿ, ಛಾಯಾ, ಶಾಂತಮ್ಮ, ಶಾರದಮ್ಮ, ಬಿಜೆಪಿ ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಹೇಮ ನಂದೀಶ್, ಮುಖಂಡರಾದ ಎಚ್.ಜಿ. ಗಿರಿಧರ್, ವಾಣೀಶ್ ಕುಮಾರ್, ಮಹೇಶ್, ರೇಣುಕಾ ರಾಜ್, ನಾಗರತ್ನ ಗೌಡ, ಗೋಪಾಲ್ ರಾಜ್ ಅರಸ್, ಚಿಕ್ಕಮ್ಮ ಬಸವರಾಜು, ರಶ್ಮಿ, ನಾಗಮಣಿ, ಸರ್ವಮಂಗಳ, ಜ್ಯೋತಿ ರೇಚಣ್ಣ ಮೊದಲಾದವರು ಇದ್ದರು.