ಕೆಂಪೇಗೌಡ ಲೇಔಟ್ ಪಕ್ಕದ ₹100 ಕೋಟಿ ಮೌಲ್ಯದ ರುದ್ರಭೂಮಿಯಲ್ಲಿ ಖಾಸಗಿ ಬಡಾವಣೆ; ಎನ್.ಆರ್. ರಮೇಶ್ ದೂರು!

Published : Feb 07, 2025, 12:16 PM IST
ಕೆಂಪೇಗೌಡ ಲೇಔಟ್ ಪಕ್ಕದ ₹100 ಕೋಟಿ ಮೌಲ್ಯದ ರುದ್ರಭೂಮಿಯಲ್ಲಿ ಖಾಸಗಿ ಬಡಾವಣೆ; ಎನ್.ಆರ್. ರಮೇಶ್ ದೂರು!

ಸಾರಾಂಶ

ಬೆಂಗಳೂರಿನ ಸೂಲಿಕೆರೆ ಗ್ರಾಮದ 100 ಕೋಟಿ ರೂ. ಮೌಲ್ಯದ 4 ಎಕರೆ ಸ್ಮಶಾನ ಭೂಮಿಯನ್ನು ಖಾಸಗಿ ಬಡಾವಣೆಗೆ ರಸ್ತೆ ನಿರ್ಮಿಸಲು ತಹಶೀಲ್ದಾರ್ ಅವರು ಅನುಮತಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕ್ರಮವನ್ನು ಪ್ರಶ್ನಿಸಿ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಬೆಂಗಳೂರು (ಫೆ.07): ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಲಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಹೊಂದಿಕೊಂಡಂತೆ ಇರುವ ದಕ್ಷಿಣ ತಾಲೂಕಿನ ಸೂಲಿಕೆರೆ ಗ್ರಾಮದ 100 ಕೋಟಿ ರೂ. ಮೌಲ್ಯದ 4 ಎಕರೆ ಸ್ಮಶಾನ ಭೂಮಿಯನ್ನು ತಹಶೀಲ್ದಾರ್ ಅವರೇ ಖಾಸಗಿ ಬಡಾವಣೆ ನಿರ್ಮಾಣ ಮಾಡುವ ವ್ಯಕ್ತಿಗೆ ರಸ್ತೆ ನಿರ್ಮಿಸಲು ಅನುಕೂಲ ಆಗುವಂತೆ ಅದರ ನಿರಪೇಕ್ಷಣಾ ಪತ್ರಕ್ಕೆ ಸಹಿ ಹಾಕಿ ಕೊಟ್ಟಿದ್ದಾರೆ.

ಪ್ರತಿಯೊಂದು ಗ್ರಾಮಕ್ಕೂ ಸ್ಮಶಾನದ ಭೂಮಿ ಇರಲೇಬೇಕು. ಸರ್ಕಾರದಿಂದ ಸ್ಮಶಾನಕ್ಕಾಗಿ ನಿಗದಿಪಡಿಸಲಾದ ಭೂಮಿಯನ್ನು ಯಾವುದೇ ಕಾರಣಕ್ಕೂ ಬೇರೆ ಯಾವ ಉದ್ದೇಶಕ್ಕೂ ಬಿಟ್ಟುಕೊಡುವುದಿಲ್ಲ. ಅದೇ ರೀತಿ ಕಳೆದ 15 ವರ್ಷಗಳ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಸೂಲಿಕೆರೆ ಗ್ರಾಮದ 4 ಎಕರೆ ಭೂಮಿ ಕೊಡುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿತ್ತು. ಆದರೆ, ಅಂದಿನ ಬೆಂಗಳೂರು ನಗರ ಜಿಲ್ಲಾಧಿಕಾರಿ ಸ್ಮಶಾನ ಭೂಮಿಯನ್ನು ಬಿಡಿಎ ಬಡಾವಣೆ ನಿರ್ಮಾಣಕ್ಕೆ ಬಿಟ್ಟುಕೊಟ್ಟಿರಲಿಲ್ಲ. ಜೊತೆಗೆ, ಸ್ಮಶಾನ ಭೂಮಿಯನ್ನು ಯಥಾವತ್ತಾಗಿ ಕಾಪಾಡಿಕೊಂಡು ಹೋಗುವಂತೆ ಆದೇಶವನ್ನೂ ಹೊರಡಿಸಿದ್ದರು. ಆದರೆ, ಇದೀಗ ವಿಲೇಜ್ ಅಕೌಂಟೆಂಟ್‌ನಿಂದ ಹಿಡಿದು ತಹಶೀಲ್ದಾರ್‌ವರೆಗೆ ಎಲ್ಲ ಅಧಿಕಾರಿಗಳು ಖಾಸಗಿ ಬಡಾವಣೆಯ ನಿರ್ಮಾಣಕ್ಕೆ ಅನುಕೂಲ ಆಗುವಂತೆ ಈ ಸ್ಮಶಾನ ಭೂಮಿಯ ಮೇಲೆ ದೊಡ್ಡದಾದ ರಸ್ತೆಯನ್ನು ನಿರ್ಮಾಣ ಮಾಡಿಕೊಡುವುದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ.

ಈ ಬಗ್ಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಜಿ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ಅವರು ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಸ್ಮಶಾನ ಭೂಮಿ ಕಾಪಾಡುವಂತೆ ದಾಖಲೆಗಳ ಸಮೇತ ಮನವಿ ಸಲ್ಲಿಕೆ ಮಾಡಿದ್ದಾರೆ. ಈ ಮನವಿ ಪತ್ರದಲ್ಲಿ ಅವರು, 100 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ 'ಸ್ಮಶಾನಕ್ಕೆಂದು ಮೀಸಲಿಟ್ಟಿರುವ ಸರ್ಕಾರಿ ಸ್ವತ್ತನ್ನು ಪ್ರಭಾವೀ ವ್ಯಕ್ತಿಯೊಬ್ಬರ ಖಾಸಗಿ ಬಡಾವಣೆಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಸರ್ಕಾರಿ ಅಧಿಕಾರಿ ಮತ್ತು ನೌಕರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹ ಮಾಡಿದ್ದಾರೆ. 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹೊಸದಾಗಿ ನಿರ್ಮಿಸಿರುವ 'ಕೆಂಪೇಗೌಡ ಬಡಾವಣೆ'ಗೆ ಹೊಂದಿಕೊಂಡಂತಿರುವ ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಸೂಲಿಕೆರೆ ಗ್ರಾಮದ ಸರ್ವೆ ನಂ: 77 (ಹಳೆಯ ಸರ್ವೆ ನಂ: 8) ರ 4 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ಸೂಲಿಕೆರೆ ಗ್ರಾಮದ 'ರುದ್ರಭೂಮಿ'ಗೆಂದು ಮೀಸಲಿಟ್ಟು ಆದೇಶಿಸಲಾಗಿರುತ್ತದೆ. ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಗಳ (ಆದೇಶ ಸಂಖ್ಯೆ – LND (SLR) – 625/2008-09/dt: 12/01/2010) ಆದೇಶದಂತೆ 2010 ರಲ್ಲಿ ಮೀಸಲಿರಿಸಲಾಗಿದೆ.

ಇದನ್ನೂ ಓದಿ: ಮುಡಾ ಹಗರಣದಲ್ಲಿ ಸಿಎಂಗೆ ಗೆಲುವು, ಸ್ನೇಹಮಯಿಗೆ ಮೊದಲ ಸೋಲಾಗಲು ಈ ಘಟನೆ ಕಾರಣವೇ?

ಈ ರೀತಿ 'ಸ್ಮಶಾನ'ಕ್ಕೆಂದು ಮೀಸಲಿಟ್ಟಿರುವ 4 ಎಕರೆ ಸ್ವತ್ತನ್ನು ಕೆಂಪೇಗೌಡ ಬಡಾವಣೆಯ ವಿಸ್ತರಣೆಗೆಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಟ್ಟುಕೊಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮನವಿ ಮಾಡಿತ್ತು. ಆದರೆ “ರುದ್ರಭೂಮಿ”ಗೆಂದು ಮೀಸಲಿಟ್ಟ ಸ್ವತ್ತನ್ನು ಬೇರೆ ಉದ್ದೇಶಗಳಿಗೆ ಬಿಟ್ಟುಕೊಡಲು ಕಾನೂನು ರೀತ್ಯಾ ಅವಕಾಶವಿರುವುದಿಲ್ಲವೆಂಬ ಉತ್ತರವನ್ನು ಜಿಲ್ಲಾಡಳಿತ ನೀಡಿರುತ್ತದೆ. ಇದಾದ ನಂತರ ರಾಜ್ಯ ಕಂದಾಯ ಇಲಾಖೆಯು 07/01/2022 ರಂದು ಸದರಿ 4 ಎಕರೆ ವಿಸ್ತೀರ್ಣದ ಸ್ಮಶಾನದ ಜಾಗವನ್ನು 'ಸೂಲಿಕೆರೆ ಗ್ರಾಮ ಪಂಚಾಯ್ತಿ'ಯ ವಶಕ್ಕೆ ನೀಡಿ ಆದೇಶಿಸಿರುತ್ತದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 'ಕೆಂಪೇಗೌಡ ಬಡಾವಣೆ ಸನಿಹದಲ್ಲೇ 120 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಖಾಸಗಿ ಬಡಾವಣೆ ನಿರ್ಮಿಸಲಾಗುತ್ತಿದ್ದು, ಈ ಬಡಾವಣೆ ನಿವೇಶನಕ್ಕೆ ಪ್ರತೀ ಚ. ಅಡಿಗೆ ₹6,000ನಂತೆ ಮಾರಾಟ ಮಾಡಬಹುದು. ಆದರೆ, ಕೆಂಪೇಗೌಡ ಬಡಾವಣೆ ಮತ್ತು ಖಾಸಗಿ ಬಡಾವಣೆ ಮಧ್ಯದಲ್ಲಿರುವ ಸೂಲಿಕೆರೆ ಗ್ರಾಮದ 4 ಎಕರೆ ಸ್ಮಶಾನದ ಜಾಗದಲ್ಲಿ 24 ಮೀಟರ್ ಅಗಲದ ರಸ್ತೆ   (80 ಅಡಿ) ರಸ್ತೆ ನಿರ್ಮಿಸಿದರೆ ಆಗ ಈ ಖಾಸಗಿ ಬಡಾವಣೆ ನಿವೇಶನಕ್ಕೆ ಪ್ರತೀ ಚ.ಅಡಿಗೆ  ₹10,000 ಬೆಲೆ ಬರಲಿದೆ. ಆದ್ದರಿಂದ ಬೆಂಗಳೂರು ದಕ್ಷಿಣ ತಾಲ್ಲೂಕಿನ ಉಪ ತಹಸೀಲ್ದಾರ್ ಸೇರಿದಂತೆ ಎಲ್ಲ ಅಧೀನ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಹಣದ ಆಮಿಷದೊಂದಿಗೆ ಸೂಲಿಕೆರೆ ಗ್ರಾಮದ 'ರುದ್ರಭೂಮಿ' ಜಾಗದಲ್ಲಿ ಖಾಸಗಿ ಬಡಾವಣೆಯ ರಸ್ತೆಯನ್ನು ನಿರ್ಮಿಸಿಕೊಳ್ಳಲು 'ನಿರಾಕ್ಷೇಪಣಾ ಪತ್ರ' (NOC) ನೀಡಲು ಟಿಪ್ಪಣಿ ಮಂಡಿಸಿ ತಹೀಲ್ದಾರ್ ಅನುಮೋದನೆ ಕಳಿಸಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗಿಂದು ಸಿಬಿಐ ಟೆನ್ಷನ್‌: ತನಿಖೆಗೆ ಹೈಕೋರ್ಟ್‌ ಆದೇಶಿಸುತ್ತಾ?

'ಸ್ಮಶಾನ ಜಾಗ'ವನ್ನು ಬೇರೆ ಉದ್ದೇಶಗಳಿಗೆ ಬಳಸಲು ಕಾನೂನು ರೀತ್ಯಾ ಅವಕಾಶವಿಲ್ಲದಿದ್ದರೂ ಸಹ ಮತ್ತು 07/01/2022 ರಂದು ರಾಜ್ಯ ಕಂದಾಯ ಇಲಾಖೆಯು 'ಸೂಲಿಕೆರೆ ಗ್ರಾಮ ಪಂಚಾಯ್ತಿ'ಯ ವಶಕ್ಕೆ ನೀಡಿದ್ದರೂ ಸಹ - 100 ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ ಸರ್ಕಾರಿ ಸ್ಮಶಾನದ ಜಾಗವನ್ನು ಖಾಸಗಿ ಬಡಾವಣೆಗೆಂದು ಬಿಟ್ಟುಕೊಡಲು 'ಕಾನೂನು ಬಾಹಿರ ಟಿಪ್ಪಣಿ' ಮಂಡಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಜೊತೆಗೆ, ಲೋಕಾಯುಕ್ತ ತನಿಖಾ ಸಂಸ್ಥೆಗೂ ಸಹಿತ ದೂರು ಸಲ್ಲಿಸಿದ್ದಾಗಿ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ತಿಳಿಸಿದ್ದಾರೆ.

PREV
Read more Articles on
click me!

Recommended Stories

'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ
Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!