ಆದಾಯ ಸಂಗ್ರಹಣೆಯಲ್ಲಿ ಬಾರೀ ಪ್ರಮಾಣದ ಇಳಿಕೆ| ಕಳೆದ ಮಾರ್ಚ್ 24ರಿಂದ ಲಾಕ್‌ಡೌನ್ ಘೋಷಣೆಯಾದ ಬಳಿಕ ದೇವಾಲಯಗಳ ಬಾಗಿಲು ಬಂದ್| ಭಕ್ತಾದಿಗಳ ಪ್ರವೇಶ ನಿರ್ಬಂಧಿಸಲಾಗಿರುವುದರಿಂದ ಆದಾಯ ಸಂಗ್ರಹಣೆಯಲ್ಲಿ ಗಣನೀಯ ಇಳಿಕೆ| ಅಷ್ಟೇ ಅಲ್ಲದೇ ಸರ್ಕಾರದ ಬೊಕ್ಕಸಕ್ಕೂ ತೊಂದರೆ|
ಸಿದ್ಧಲಿಂಗಸ್ವಾಮಿ ವೈ.ಎಂ.
ಬಳ್ಳಾರಿ(ಮೇ.15): ಇಡೀ ವಿಶ್ವವನ್ನೇ ನಡುಗಿಸಿ, ಆರ್ಥಿಕತೆಯನ್ನೇ ಪಾತಾಳಕ್ಕೆ ತಳ್ಳಿದ ಮಹಾಮಾರಿ ಕೊರೋನಾ ವೈರಸ್‌ನ ಕರಿನೆರಳು ದೇಗುಲಗಳ ಆದಾಯ ಮೇಲೂ ಬಿದ್ದಿದ್ದು, ಆದಾಯ ಸಂಗ್ರಹಣೆಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿದೆ.
ಹೌದು, ಕಳೆದ ಮಾರ್ಚ್ 24ರಿಂದ ಲಾಕ್‌ಡೌನ್ ಘೋಷಣೆಯಾದ ಬಳಿಕ ದೇವಾಲಯಗಳ ಬಾಗಿಲು ಮುಚ್ಚಿದೆ. ಭಕ್ತಾದಿಗಳ ಪ್ರವೇಶ ನಿರ್ಬಂಧಿಸಲಾಗಿರುವುದರಿಂದ ಆದಾಯ ಸಂಗ್ರಹಣೆಯಲ್ಲಿ ಗಣನೀಯ ಇಳಿಕೆಯಾಗಿದೆ. ಅಷ್ಟೇ ಅಲ್ಲದೇ ಸರ್ಕಾರದ ಬೊಕ್ಕಸಕ್ಕೂ ತೊಂದರೆ ಎದುರಾಗಿದೆ.
ಗಂಗಾವತಿಯಿಂದ ಕಂಪ್ಲಿಗೆ ಆಟೋದಲ್ಲಿ ತೆರಳಿದ್ದವನಿಗೆ ಕೊರೋನಾ: ಆತಂಕದಲ್ಲಿ ಜನತೆ
ಅರ್ಚಕರಿಗೆ ಸಂಕಷ್ಟ:
ಹಲವು ದೇವಸ್ಥಾನಗಳಲ್ಲಿ ದಕ್ಷಿಣೆ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದ ಅರ್ಚಕರಿಗೂ ಗಂಭೀರ ಸಮಸ್ಯೆ ತಂದೊಡ್ಡಿದೆ. ಜಿಲ್ಲೆಯಲ್ಲಿನ ಎ, ಬಿ, ಸಿ ಶ್ರೇಣಿಯ 350ಕ್ಕೂ ಹೆಚ್ಚಿನ ದೇಗುಲಗಳು ಬಂದಾಗಿವೆ. ಮೂರು ತಿಂಗಳ ಆದಾಯವನ್ನು ಎಣಿಕೆ ಮಾಡಿಲ್ಲ. ಲಾಕ್‌ಡೌನ್ ಮುಕ್ತಾಯವಾದ ತಕ್ಷಣ ಎಣಿಕೆ ಪ್ರಾರಂಭಿಸಿದರೂ ಮಾ. 1 ರಿಂದ 23ರ ವರೆಗಿನ ಆದಾಯ ಮಾತ್ರ ಈ ಸಾಲಿಗೆ ಸೇರುತ್ತದೆ. ಎಲ್ಲ ದೇವಸ್ಥಾನಗಳ ಹಿಡಿದರೂ 10 ಲಕ್ಷ ದಾಟುವ ಸಾಧ್ಯತೆಯಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಳೆದ 2019ರ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಎ ಶ್ರೇಣಿ ದೇವಸ್ಥಾನಗಳಾದ ಹಂಪಿ ಶ್ರೀವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನ 35.89 ಲಕ್ಷ, ಮೈಲಾರ ಶ್ರೀಮೈಲಾರಲಿಂಗಸ್ವಾಮಿ ದೇವಸ್ಥಾನ 89.61 ಲಕ್ಷ, ಕೊಟ್ಟೂರಿನ ಶ್ರೀಗುರುಬಸವೇಶ್ವರ ಸ್ವಾಮಿ ದೇವಸ್ಥಾನ 47.68 ಲಕ್ಷ , ಕುರುವತ್ತಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ 25.67 ಲಕ್ಷ , ಕುರುಗೋಡು ಶ್ರೀ ದೊಡ್ಡಬಸವೇಶ್ವರಸ್ವಾಮಿ ದೇವಸ್ಥಾನ 30.19 ಲಕ್ಷ , ಬಳ್ಳಾರಿಯ ಕನಕ ದುರ್ಗಮ್ಮದೇವಿ ದೇವಸ್ಥಾನ 54.85 ಲಕ್ಷ , ಎತ್ತಿನ ಬೂದಿಹಾಳ ಶ್ರೀ ಕಟ್ಟೆಬಸವೇಶ್ವರಸ್ವಾಮಿ ದೇವಸ್ಥಾನ 11.57 ಲಕ್ಷ ಆದಾಯ ಗಳಿಸಿದ್ದವು. ಇದಲ್ಲದೇ ಬಿ ಮತ್ತು ಸಿ ಶ್ರೇಣಿಯ ದೇವಸ್ಥಾನಗಳಿಗೂ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಹರಿದು ಬರುತ್ತಿತ್ತು. ಆದರೆ, ಈ ಬಾರಿ ಕೊರೋನಾ ಎಫೆಕ್ಟ್ನಿಂದಾಗಿ ಮಾಚ್‌ರ್ ತಿಂಗಳಲ್ಲೇ ದೇಗುಲಗಳು ಬಂದ್ ಆಗಿದ್ದು ಕಾಣಿಕೆ ಸಂಗ್ರಹಣೆಯಲ್ಲಿ ಗಣನೀಯ ಕುಸಿತ ಕಂಡಿದೆ.
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವುದಕ್ಕಾಗಿ ಸರ್ಕಾರದ ನಿರ್ದೇಶನದ ಮೇರೆಗೆ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ, ಆದಾಯ ಸಂಗ್ರಹಣೆ ಕುಸಿದಿದೆ. ಇದರಿಂದ ಅರ್ಚಕರಿಗೂ ತೊಂದರೆಯಾಗಿದೆ ಎಂದು ಬಳ್ಳಾರಿ ಮುಜರಾಯಿ ಇಲಾಖೆಯ ಪ್ರಭಾರಿ ಸಹಾಯುಕ ಆಯುಕ್ತ ಲೋಕೇಶ ಹೇಳಿದ್ದಾರೆ.
ದೇವಸ್ಥಾನಗಳನ್ನು ತೆರೆಯುವುದರಿಂದ ಸಂಕಷ್ಟದಲ್ಲಿರುವ ಭಕ್ತಾಧಿಗಳು ದೇವಸ್ಥಾನಕ್ಕೆ ಆಗಮಿಸಿ ಮಾನಸಿಕ ನೆಮ್ಮದಿ ಪಡೆಯುತ್ತಾರೆ. ಇದರಿಂದ ಮನುಷ್ಯನಲ್ಲಿ ಧನಾತ್ಮಕ ಅಂಶ ವೃದ್ಧಿಯಾಗುತ್ತದೆ. ಸರ್ಕಾರ ದೇವಾಲಯಗಳ ಪ್ರಾರಂಭಕ್ಕೆ ಅನುಮತಿ ಕೊಡಬೇಕು ಎಂದು ಬಳ್ಳಾರಿ ದುರ್ಗಮ್ಮ ದೇವಾಲಯದ ಹಿರಿಯ ಅರ್ಚಕರು ರಾಜಶೇಖರ ಅವರು ಹೇಳಿದ್ದಾರೆ.