Udupi: ಜನಸ್ನೇಹಿ ಪೊಲೀಸ್ ಇನ್ಸ್ ಪೆಕ್ಟರ್‌ ಸತೀಶ್‌ಗೆ ರಾಷ್ಟ್ರಪತಿ ಪದಕ

By Sathish Kumar KHFirst Published Dec 14, 2022, 6:59 PM IST
Highlights

ಪ್ರಸ್ತುತ ಉಡುಪಿ ಜಿಲ್ಲೆಯ ಹೆಬ್ರಿ ಎ.ಎನ್.ಎಫ್ ಕ್ಯಾಂಪ್ ನಲ್ಲಿ ಪೋಲಿಸ್ ನಿರೀಕ್ಷಕರಾಗಿರುವ ಸತೀಶ್ ಅವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ದೊರೆತಿದೆ.

ಉಡುಪಿ (ಡಿ.14): ಅದ್ಯಾಕೋ ಏನೋ ಪೊಲೀಸ್ ಇಲಾಖೆ ಅಂದ್ರೆ ಜನರಿಗೆ ಏನೋ ಒಂದು ಅಲರ್ಜಿ, ಇಲಾಖೆಯಲ್ಲಿ ಪ್ರಾಮಾಣಿಕತೆ ಕಡಿಮೆಯಾಗುತ್ತಿದೆ. ಭ್ರಷ್ಟಾಚಾರ, ಲಂಚಗುಳಿತನ ಹೆಚ್ಚು ಅನ್ನುವ ಆರೋಪ. ಇಂತಹಾ ಆರೋಪಗಳು ಕೇಳಿ ಬರುತ್ತಿರುವಾಗಲೇ, ಅಲ್ಲೊಂದು ಇಲ್ಲೊಂದು ಪ್ರಾಮಾಣಿಕ ಅಧಿಕಾರಿಗಳು ಇಲಾಖೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುತ್ತಿದ್ದಾರೆ. ಅಂತಹ ಪ್ರಾಮಾಣಿಕ ಅಧಿಕಾರಿಗಳಲ್ಲಿ ಒಬ್ಬರಾಗಿರುವ, ಜಿಲ್ಲೆಯ ವಿವಿಧ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ರಾಷ್ಟ್ರಪತಿ ಪದಕ ಪಡೆದ ಇನ್ಸ್ ಪೆಕ್ಟರ್ ಸತೀಶ್ ಅವರಿಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. 

ಪ್ರಸ್ತುತ ಉಡುಪಿ ಜಿಲ್ಲೆಯ ಹೆಬ್ರಿ ಎ.ಎನ್.ಎಫ್ ಕ್ಯಾಂಪ್ ನಲ್ಲಿ ಪೋಲಿಸ್ ನಿರೀಕ್ಷಕರಾಗಿರುವ ಸತೀಶ್ ಅವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ದೊರೆತಿದೆ. ಇವರು 2022 ರಲ್ಲಿ ಹೆಬ್ರಿಯಿಂದ 20 ಕಿಮೀ ದೂರದಲ್ಲಿರುವ ನಾಡ್ಪಾಲು ಗ್ರಾಮದ ತೆಂಗುಮಾರು ದಟ್ಟ ಅರಣ್ಯದಲ್ಲಿ ಟರ್ಪಾಲಿನಲ್ಲಿ ವಾಸವಿದ್ದ ನಾರಾಯಣ ಗೌಡ (75) ಅವರಿಗೆ ಪೋಲಿಸ್ ನಿರೀಕ್ಷಕ ಸತೀಶ್ ಅವರು ತಮ್ಮ ಬೆಟಾಲಿಯನ್ ನ ಸಿಬ್ಬಂದಿಯವರ ಜೊತೆ ಸೇರಿ ಮನೆಯನ್ನು ಕಟ್ಟಿಸಿಕೊಟ್ಟಿದ್ದರು. 

Police Medal: ಕರ್ನಾಟಕ ಪೊಲೀಸ್ ದೇಶದ ನಂಬರ್ 1 ಪೊಲೀಸ್ ಪಡೆಯಾಗಿದೆ: ಸಿಎಂ ಬೊಮ್ಮಾಯಿ‌

ಕಾಫಿ ನಾಡಿನಿಂದ ಕಾರ್ಕಳದ ಕಾಡಿಗೆ: ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಳಗಲಿ ಗ್ರಾಮದ ಸುಬ್ಬಣ್ಣ ಬಿ.ಪಿ ಮತ್ತು ಕಮಲಾಕ್ಷಿ ಎಮ್.ಎಸ್ ದಂಪತಿಗಳ ಪ್ರಥಮ ಪುತ್ರನಾಗಿ ಜನಿಸಿದ ಅವರು, 1996 ಚಿಕ್ಕಮಗಳೂರಿನಲ್ಲಿ ಪೋಲಿಸ್ ವೃತ್ತಿಯನ್ನು ಆರಂಭಿಸಿ, 2003 ರಲ್ಲಿ ಪೋಲಿಸದ ಸಬ್ ಇನ್ಸ್ ಪೆಕ್ಟರ್ ಆದರು. ಮೈಸೂರು, ಮಂಡ್ಯ, ಬೆಂಗಳೂರು, ಉಡುಪಿ ಮತ್ತು ಬೆಂಗಳೂರಿನ ಸಿ.ಐ.ಡಿ ಕಚೇರಿಯಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿ, ಪೋಲಿಸ್ ನಿರೀಕ್ಷಕರಾಗಿ ಮುಂಭಡ್ತಿ ಪಡೆದು ಬೆಂಗಳೂರು ಹಾಗು ಮಂಗಳೂರಿನ ಸಿ.ಐ.ಡಿಯ ಎನ್.ಡಿ.ಸಿಯಲ್ಲಿ ಕರ್ತವ್ಯ ನಿರ್ವಹಿಸಿ ನಂತರ ದಾಂಡೇಲಿ ಮತ್ತು ಸುಳ್ಯದಲ್ಲಿ ವೃತ್ತ ನಿರೀಕ್ಷಕನಾಗಿ, ಕೊಡಗಿನಲ್ಲಿ ಗುಪ್ತಚರ ವಿಭಾಗ, ಉಡುಪಿ ಎಸಿಬಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 

ದಕ್ಷತೆಗೆ ಸಿಕ್ಕ ಮನ್ನಣೆ:  ಉಡುಪಿ ಜಿಲ್ಲೆಯ ವಿವಿಧ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿರುವ ಸತೀಶ್ ಅವರನ್ನು ಜಿಲ್ಲೆಯ ಜನತೆ ಅಪಾರವಾಗಿ ಗೌರವಿಸುತ್ತಾರೆ. ಯಾರಿಂದಲೂ ಒಂದು ರೂಪಾಯಿ ಹಣವನ್ನು ಪಡೆಯದ ಸತೀಶ್ ಇದುವರೆಗೆ ಇಲಾಖೆಯಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ನಿಷ್ಠಾವಂತ ಅಧಿಕಾರಿ ಎಂದು ಹೆಸರುವಾಸಿಯಾಗಿದ್ದಾರೆ. ಹಾಗಾಗಿ ಅವರಿಗೆ ಸಿಕ್ಕ ಪ್ರಶಸ್ತಿಯನ್ನು ನಾಗರಿಕರು ಕೂಡ ಸಂಭ್ರಮಿಸಿದ್ದಾರೆ. ಸತೀಶ್ ಅವರು ಶ್ರದ್ದೆ ಮತ್ತು ಕಠಿಣ ಪರಿಶ್ರಮದಿಂದ ಕೆಲಸ ಮಾಡುವ ಅಧಿಕಾರಿ. ಶಿಸ್ತಿನಿಂದ ತಾನು ವಹಿಸಿಕೊಂಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಅವರಿಗೆ ರಾಷ್ಟ್ರಪತಿ ಪದಕ ದೊರಕಿರುವುದು ಹೆಮ್ಮೆ ತಂದಿದೆ ಎಂದು ಎ.ಎನ್.ಎಫ್ ಎಸ್ಪಿ ( ಕಾರ್ಕಳ) ಪ್ರಕಾಶ್ ನಿಕ್ಕಂ ಹೇಳಿದ್ದಾರೆ. 2012 ರಲ್ಲಿ ಕೇರಳದಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಕೊಲೆ ಕೇಸಿನ ತನಿಖೆ ತರಬೇತಿಯಲ್ಲಿ ದ್ವೀತಿಯ ಸ್ಥಾನ ಪಡೆದಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ 2018 ರಲ್ಲಿ ಡೆವಲಪಿಂಗ್ ಸ್ಪೆಷಲೈಸ್ಡ್ ಇನ್ ವೆಸ್ಟೀಂಗೇಟರ್ ಎಂಬ ವಿಶೇಷ ತರಬೇತಿಗಾಗಿ ಸಿಂಗಾಪುರಕ್ಕೆ ಕಳುಹಿಸಿದ್ದರು.

 

 

ಕರ್ನಾಟಕದ 19 ಅಧಿಕಾರಿಗಳಿಗೆ ಪೊಲೀಸ್ ಮೆಡಲ್ ಗೌರವ

ಹಲವು ಸಾಧನೆಗಳು: 2015 ರಲ್ಲಿ ಪಂಜಾಬ್ ನಲ್ಲಿ ನಡೆದ ಆಲ್ ಇಂಡಿಯಾ ಪೋಲಿಸ್ ಡ್ಯೂಟಿ ಮೀಟ್ ನಲ್ಲಿ ಭಾಗವಹಿಸುವಿಕೆ, 2018 ರಲ್ಲಿ ವಿಶ್ವಸಂಸ್ಥೆ ಶಾಂತಿ ಪಾಲನ ಪಡೆಯಲ್ಲಿ ಕರ್ತವ್ಯಕ್ಕೆ ನಡೆದ ಪರೀಕ್ಷೆಯಲ್ಲಿ ದೇಶಕ್ಕೆ 82 ನೇ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ. 2019 ರಲ್ಲಿ ಭಾರತ ಚೀನಾ ಗಡಿಯಾದ ಜಮ್ಮು ಕಾಶ್ಮೀರದ ಲೇಹ್ ಲಡಾಕ್ ನ ಬಿಸಿ ನೀರಿನ ಬುಗ್ಗೆಗೆ ಭೇಟಿ ನೀಡಿ 1959 ರಲ್ಲಿ ಭಾರತ ಚೀನಾ ಗಡಿ ವಿವಾದದಲ್ಲಿ ವೀರ ಮರಣ ಹೊಂದಿದ ಪೋಲಿಸರಿಗೆ ಗೌರವ ವಂದನೆ ಸಲ್ಲಿಸಿದ್ದಾರೆ.

2020 ರಲ್ಲಿ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ. 2021 ರಲ್ಲಿ ಜೈ ದುರ್ಗಾ ಈಜು ಕ್ಲಬ್ ಕಡೆಕಾರು, ಉಡುಪಿ ಇವರೊಂದಿಗೆ ತನ್ನ ಮಕ್ಕಳಾದ ಸುಧನ್ವ (13), ಸುಧಾಂಶು (10) ರೊಂದಿಗೆ ಅರಬ್ಬೀ ಸಮುದ್ರದಲ್ಲಿ ಸುಮಾರು 3.8 ಕಿ.ಮೀ ದೂರದ ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ದ್ವೀಪದಿಂದ ಮಲ್ಪೆಯವರೆಗೆ ಈಜಿದ್ದಾರೆ. 2021 ರಲ್ಲಿ ಕೊಲ್ಲೂರಿನ ಧುಬೆ ಗೇಟ್ ನಿಂದ ಕೊಡಚಾದ್ರಿ ಬೆಟ್ಟದವರೆಗೆ ಸುಮಾರು 20 ಕೀ.ಮಿ ದೂರವನ್ನು ಉಪವಾಸದಲ್ಲಿಯೇ ಹತ್ತಿ ಇತರ ಸಾಹಸಿಗರಿಗೆ ಸ್ಪೂರ್ತಿಯಾಗಿದ್ದಾರೆ.

click me!