ರಾಜ್ಯದಲ್ಲಿ ಮರೆಯಾದ ಲಾಳಗೊಂಡ ಸಮುದಾಯದ ಇತಿಹಾಸ: ಬಯಲಾಟದ ಮೂಲಕ ಸಂಶೋಧನೆಗೆ ಹಂಪಿ ವಿವಿಗೆ ಮನವಿ

Sathish Kumar KH   | Kannada Prabha
Published : Nov 03, 2026, 07:45 AM IST
Lalagonda Community History

ಸಾರಾಂಶ

ಲಾಳಗೊಂಡ ಸಮುದಾಯದ ಐತಿಹಾಸಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಯಲಾಟಗಳ ಮೂಲಕ ಸಂರಕ್ಷಿಸಬೇಕು ಎಂದು ಡಾ.ಕೆ.ಎಂ.ಮೇತ್ರಿ ಕಂಪ್ಲಿಯಲ್ಲಿ ತಿಳಿಸಿದರು. ಕುರುಗೋಡು ನೀಲಮ್ಮನ ಹೆಸರಿನಲ್ಲಿರುವ 800 ಮಠಗಳು ಹಾಗೂ ಲಾಳಗೊಂಡೇಶ್ವರರ ಚರಿತ್ರೆಯನ್ನು ಸಂಶೋಧಿಸಿ ಪುಸ್ತಕ ರೂಪದಲ್ಲಿ ಹೊರತರಲು ಶ್ರೀ ನಿಜಾನಂದ ಮಹಾಸ್ವಾಮೀಜಿ ಭರವಸೆ ನೀಡಿದರು.

ಬಳ್ಳಾರಿ (ನ.03): ಲಾಳಗೊಂಡ ಸಮುದಾಯದ ಐತಿಹಾಸಿಕ ಹಿನ್ನೆಲೆ, ಸಾಂಸ್ಕೃತಿಕ ಪರಂಪರೆ ಹಾಗೂ ಪೂರ್ವಜರ ಜೀವನಗಾಥೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕುರುಗೋಡು ನೀಲಮ್ಮ, ಲಾಳಗೊಂಡೇಶ್ವರ ಹಾಗೂ ಬೊಮ್ಮಗೊಂಡೇಶ್ವರರ ಕಥಾವಸ್ತುವನ್ನು ಆಧರಿಸಿ ಬಯಲಾಟಗಳನ್ನು ಪ್ರದರ್ಶಿಸುವ ಮೂಲಕ ಸಮುದಾಯದ ಇತಿಹಾಸವನ್ನು ಸಂರಕ್ಷಿಸಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎಂ.ಮೇತ್ರಿ ಹೇಳಿದರು.

ಗ್ರಾಮದ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ನಡೆದ ಲಾಳಗೊಂಡ ಸಮಾಜದ ಸಂಘದ ಉದ್ಘಾಟನೆ, ಲಾಂಛನ ಹಾಗೂ ಕಿರುಹೊತ್ತಿಗೆ ಬಿಡುಗಡೆ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಟಿಪ್ಪು ಸುಲ್ತಾನ ಹಾಗೂ ಆನೆಗುಂದಿ ಅರಸರ ಕಾಲಘಟ್ಟದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಕುರುಗೋಡಿನ ನೀಲಮ್ಮ ತಮ್ಮ ಸಮುದಾಯದವರೊಂದಿಗೆ ದಾವಣಗೆರೆ ಕಡೆಗೆ ಪ್ರಯಾಣ ಬೆಳೆಸಿದ ಐತಿಹಾಸಿಕ ಕಥನಗಳಿವೆ. ಕುರುಗೋಡು, ಸಿಂಧಿಗೇರಿ ಸೇರಿದಂತೆ ರಾಜ್ಯದ ವಿವಿಧೆಡೆ ನೀಲಮ್ಮನ ಹೆಸರಿನಲ್ಲಿ ಸುಮಾರು 800 ಮಠಗಳಿವೆ. ಮಹಿಳೆಯೊಬ್ಬರ ಹೆಸರಿನಲ್ಲಿ ಇಷ್ಟೊಂದು ಸಂಖ್ಯೆಯ ಮಠಗಳು ಇರುವುದು ವಿಶೇಷವಾಗಿದೆ ಎಂದು ವಿವರಿಸಿದರು.

ಕೇದಾರಮಠದ ಚರಿತ್ರೆಯಲ್ಲಿಯೂ ಲಾಳಗೊಂಡೇಶ್ವರರ ಉಲ್ಲೇಖ

ಕೇದಾರಮಠದ ಚರಿತ್ರೆಯಲ್ಲಿಯೂ ಲಾಳಗೊಂಡೇಶ್ವರರ ಉಲ್ಲೇಖವಿದ್ದು, ಅವರು ತಮ್ಮ ಸಮುದಾಯದ ಜನರನ್ನು ದಕ್ಷಿಣ ಭಾರತಕ್ಕೆ ಕರೆತಂದರು ಎಂಬ ಐತಿಹಾಸಿಕ ಕಥನ ಪ್ರಚಲಿತದಲ್ಲಿದೆ. ಇಂತಹ ಐತಿಹಾಸಿಕ ಸಂಗತಿಗಳನ್ನು ಕೇವಲ ದಾಖಲೆಗಳಿಗೆ ಸೀಮಿತಗೊಳಿಸದೆ, ಬಯಲಾಟದಂತಹ ಜನಪದ ಕಲಾ ಪ್ರಕಾರಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಬೇಕು. ಇದರಿಂದ ಸಮುದಾಯದ ಕಳೆದುಹೋಗುತ್ತಿರುವ ಸಾಂಸ್ಕೃತಿಕ ಸ್ಮೃತಿ ಹಾಗೂ ಚರಿತ್ರೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ರಾಯಚೂರು ಜಿಲ್ಲೆಯ ಮಿಟ್ಟೆ ಮಲ್ಕಾಪುರದ ಶಾಂತಾಶ್ರಮದ ಪೀಠಾಧಿಪತಿ ಶ್ರೀ ನಿಜಾನಂದ ಮಹಾಸ್ವಾಮೀಜಿ ಮಾತನಾಡಿ, ಲಾಳಗೊಂಡ ಸಮುದಾಯದ ಇತಿಹಾಸವನ್ನು ಸಮಗ್ರವಾಗಿ ಸಂಶೋಧಿಸಿ ದಾಖಲಿಸುವ ಕಾರ್ಯವಾಗಬೇಕು. ಸಂಶೋಧಕರು ಸಮುದಾಯದ ಚರಿತ್ರೆಯನ್ನು ಸಂಗ್ರಹಿಸಿ ಲಿಖಿತ ರೂಪದಲ್ಲಿ ನೀಡಿದರೆ, ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಸಹಕರಿಸಲಾಗುವುದು ಎಂದರು.

ಇತಿಹಾಸಕಾರರಾದ ಡಾ.ಎಂ.ಆರ್.ಪಂಪನಗೌಡ ಹಾಗೂ ಸುರೇಶಗೌಡ ಪಾಟೀಲ್ ಗೋನಾಳ ಅವರು ಲಾಳಗೊಂಡ ಸಮುದಾಯದ ಐತಿಹಾಸಿಕ ಹಿನ್ನೆಲೆ, ಪರಂಪರೆ ಮತ್ತು ಸಾಧನೆಗಳ ಕುರಿತು ಉಪನ್ಯಾಸ ನೀಡಿದರು.

ರಾಮಸಾಗರ ಗ್ರಾಮ ಘಟಕದ ಅಧ್ಯಕ್ಷ ಗೆಣಕಿಹಾಳ ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಲಾಳಗೊಂಡ ಸಮಾಜದ ರಾಜ್ಯಾಧ್ಯಕ್ಷ ಅರವಿ ಬಸವನಗೌಡ, ತಾಲೂಕು ಅಧ್ಯಕ್ಷ ಜಿ.ಅಮರೇಗೌಡ, ಜಿ.ಚಂದ್ರಶೇಖರಗೌಡ, ಬಿ.ಶರಣಪ್ಪ, ಜಿ.ಸಂಗಮೇಶ, ಎಸ್.ಭೀಮನಗೌಡ ನಾಗರಾಜ್, ಜಿ.ರವಿಶಂಕರ್, ಎಚ್.ಶಿವಶಂಕರಗೌಡ ಸೇರಿದಂತೆ ರಾಯಚೂರು, ಕೊಪ್ಪಳ, ಗದಗ ಹಾಗೂ ಬಳ್ಳಾರಿ ಜಿಲ್ಲೆಗಳ ಲಾಳಗೊಂಡ ಸಮಾಜದ ಮುಖಂಡರು, ಸಮುದಾಯದ ಸದಸ್ಯರು ಪಾಲ್ಗೊಂಡಿದ್ದರು.

PREV
Read more Articles on
click me!

Recommended Stories

ಶಿವಮೊಗ್ಗ ಕೆನಾಲ್ ಮೇಲೆಯೇ 10 ಎಕರೆ ಸಂತೆ ಮೈದಾನ! ಸಂಸದರಿಂದ ರೈತರಿಗೆ ₹15 ಕೋಟಿ ಕೋಲ್ಡ್ ಸ್ಟೋರೇಜ್ ಗಿಫ್ಟ್
25 ವರ್ಷ ಹಳೆಯ ಗೋಪುರ ಕೆಡವದೇ ಶಿಫ್ಟ್! ಮೂಲ್ಕಿ ಬಪ್ಪನಾಡು ಸ್ವಾಗತ ಕಮಾನು ಸ್ಥಳಾಂತರ ಕಾರ್ಯ ಬಹುತೇಕ ಯಶಸ್ವಿ