* ಖಾಸಗಿ ಏಜೆನ್ಸಿಗಳಿಂದ ಮಾಹಿತಿ ಸಂಗ್ರಹಿಸಿ ಪ್ರಸ್ತಾವನೆ ತಯಾರಿಸುತ್ತಿರುವ ಜಿಲ್ಲಾಡಳಿತ
* ರೋಪ್ ವೇ ನಿರ್ಮಾಣಕ್ಕೂ ಪ್ರಸ್ತಾವ, ಪಾರ್ಕಿಂಗ್ ವ್ಯವಸ್ಥೆಗೆ ಭೂಸ್ವಾಧೀನಕ್ಕೆ ತಯಾರಿ
* ರೋಪ್ ವೇ ಏರುವುದಕ್ಕೆ ಮತ್ತು ಇಳಿಯುವುದಕ್ಕೆ ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆ ಕಲ್ಪಿಸುವುದು
ಸೋಮರಡ್ಡಿ ಅಳವಂಡಿ
ಕೊಪ್ಪಳ(ಮಾ.12): ರಾಜ್ಯ ಸರ್ಕಾರ(Government of Karnataka) ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ(Anjanadri Hill) ಅಭಿವೃದ್ಧಿಗೆ 100 ಕೋಟಿ ಘೋಷಣೆ ಮಾಡಿರುವುದರಿಂದ ಜಿಲ್ಲಾಡಳಿತ ಕಾರ್ಯೋನ್ಮುಖವಾಗಿದ್ದು, ವಿವಿಧ ಖಾಸಗಿ ಏಜೆನ್ಸಿಗಳ ಮೂಲಕ ಪ್ರಸ್ತಾವನೆ ಆಹ್ವಾನಿಸಿದೆ. ಅನೇಕ ಮಾದರಿಗಳನ್ನು ಖಾಸಗಿ ಏಜೆನ್ಸಿಗಳ ಮೂಲಕ ತರಿಸಿಕೊಂಡು ಪ್ರಸ್ತಾವನೆಯನ್ನು ಸಿದ್ಧಗೊಳಿಸುವ ಕಾರ್ಯ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ.
ಏನೇನು ಅಭಿವೃದ್ಧಿ?:
ಈಗಿರುವ ಪ್ರಾಥಮಿಕ ಪ್ರಸ್ತಾವನೆಯ ಪ್ರಕಾರ ರೋಪ್ ವೇ(Rope Way) ನಿರ್ಮಿಸಲು ತೀರ್ಮಾನಿಸಲಾಗಿದೆ. ಇದನ್ನು ಪ್ರಥಮ ಆದ್ಯತೆ ಮೇಲೆ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಈ ಹಿಂದೆಯೇ ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾರ್ಟನರ್‌ಶಿಪ್) ಯೋಜನೆಯಲ್ಲಿ ನಿರ್ಮಾಣಕ್ಕೆ ಪ್ರಸ್ತಾವನೆ ಮಾಡಲಾಗಿತ್ತು. ಅಲ್ಲದೇ ಕಳೆದ ಬಜೆಟ್‌ನಲ್ಲಿ(Karnataka Budget) .20 ಕೋಟಿ ಘೋಷಣೆಯಾದಾಗಲೇ ಸಿದ್ಧ ಮಾಡಿದ ಯೋಜನೆಯನ್ನೇ ಪುನಃ ಅಳವಡಿಸಿಕೊಳ್ಳಲಾಗಿದೆ.
ಬೆಟ್ಟ ಏರುವ ಮೆಟ್ಟಿಲುಗಳನ್ನು ಮತ್ತಷ್ಟುಸುಭದ್ರ ಮಾಡುವುದು, ಮೆಟ್ಟಿಲು ಏರುವ ಎರಡು ಬದಿ ಆಡಿಯೋ ಮತ್ತು ವೀಡಿಯೋ ಮೂಲಕ ಚರಿತ್ರೆಯನ್ನು ಹೇಳುವ ವಿನೂತನ ಪ್ರಯೋಗ ಮಾಡಲಾಗುತ್ತದೆ. ಬೆಟ್ಟಏರುತ್ತ ಅಂಜನಾದ್ರಿಯ ಮಾಹಿತಿ ಭಕ್ತರಿಗೆ ನೋಡುವುದಕ್ಕೆ ಹಾಗೂ ಕೇಳುವುದಕ್ಕೆ ಅನುಕೂಲವಾಗುವಂತೆ ಮಾಡಲಾಗುತ್ತದೆ. ಮೆಟ್ಟಿಲು ಏರುವ ವೇಳೆ ಅಲ್ಲಲ್ಲಿ ವಿಶ್ರಾಂತಿಗಾಗಿ ಸ್ಥಳಗಳನ್ನು ನಿಗದಿ ಮಾಡಿ ಕನಿಷ್ಠ ಸೌಲಭ್ಯ ಇರುವಂತೆ ಮಾಡುವ ಯೋಜನೆ ರೂಪಿಸಲಾಗಿದೆ.
Karnataka Budget: ಅಂಜನಾದ್ರಿಗೆ ಘೋಷಿಸಿದ್ದ ನಯಾ ಪೈಸೆನೂ ಬಂದಿಲ್ಲ..!
ರೋಪ್ ವೇ ಏರುವುದಕ್ಕೆ ಮತ್ತು ಇಳಿಯುವುದಕ್ಕೆ ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆ ಕಲ್ಪಿಸುವುದು. ಅಲ್ಲದೇ ಬೆಟ್ಟದ ಮೆಟ್ಟಿಲುಗಳನ್ನು ಏರುವುದಕ್ಕೆ ಮತ್ತು ಇಳಿಯುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡುವ ಯೋಜನೆಯೂ ಇದೆ. ಆದರೆ, ಇದನ್ನು ಪ್ರಾಚ್ಯವಸ್ತು ಇಲಾಖೆಯ ಡಿಸೈನ್ ಮೂಲಕವೇ ಮಾಡಬೇಕಾಗುತ್ತದೆ.
ಅಂಜನಾದ್ರಿ ಬೆಟ್ಟದಲ್ಲಿ ಇನ್ನಷ್ಟು ವಿಶಾಲವಾದ ಸ್ಥಳವಕಾಶ ದೊರೆಯುವಂತೆ ಮಾಡುವುದು, ಸುತ್ತಲು ರಕ್ಷಣಾ ಗೋಡೆ ಅಥವಾ ಗ್ರಿಲ್ ಅಳವಡಿಸುವುದು, ತುಂಗಭದ್ರಾ ನದಿಯಲ್ಲಿ ನೀರಿನ ಸೌಂದರ್ಯವನ್ನು ಅನುಭವಿಸುವುದಕ್ಕೆ ಅಲ್ಲಲ್ಲಿ ಸ್ಥಳ ನಿರ್ಮಾಣ ಮಾಡಲು ಖಾಸಗಿ ಏಜೆನ್ಸಿಯಿಂದ ಮಾಹಿತಿ ಕೇಳಲಾಗಿದೆ.
ಯಾತ್ರಿ ನಿವಾಸ ನಿರ್ಮಿಸುವುದು. ಸೂರ್ಯೋದಯ ಮತ್ತು ಸೂರ್ಯಾಸ್ತ ವೀಕ್ಷಣಾ ಸ್ಥಳ ರಚನೆ, ಮುಂದಿನ 10 ವರ್ಷಗಳ ಭಕ್ತರ(Devotees), ಪ್ರವಾಸಿಗರ ಭೇಟಿಯ ನಿರೀಕ್ಷೆಯ ಲೆಕ್ಕಾಚಾರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವುದಕ್ಕೆ ಅಂಜನಾದ್ರಿ ಸುತ್ತಲು ಭೂ ಸ್ವಾಧೀನಕ್ಕೆ ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ.
ಸರ್ಕಾರ ಘೋಷಣೆ ಮಾಡಿರುವ .100 ಕೋಟಿಗೆ ಖಾಸಗಿ ಏಜೆನ್ಸಿಯ ಮೂಲಕ ಪ್ರಸ್ತಾವನೆ ತರಿಸಿಕೊಂಡು ಉತ್ತಮ ಯೋಜನೆ ಸಿದ್ಧ ಮಾಡುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಿ ಅಲ್ಲಿಂದ ಅನುಮೋದನೆಯಾಗುತ್ತಿದ್ದಂತೆ ಅಭಿವೃದ್ಧಿ ಕಾರ್ಯ ಪ್ರಾರಂಭವಾಗುತ್ತದೆ ಅಂತ ಕೊಪ್ಪಳ ಡಿಸಿ ವಿಕಾಸ್ ಕಿಶೋರ ಸುರಳ್ಕರ್ ತಿಳಿಸಿದ್ದಾರೆ.
ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ: ಜೊಲ್ಲೆ
ವಿಧಾನ ಪರಿಷತ್: ಆಂಜನೇಯ ಹುಟ್ಟಿದ ಸ್ಥಳವೆಂದು ಪ್ರಸಿದ್ಧವಾಗಿರುವ ಕೊಪ್ಪಳ ಜಿಲ್ಲೆ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ 100 ಕೋಟಿ ರು, ನಿಗದಿಪಡಿಸಿದ್ದು, ಪ್ರವಾಸಿಗಳ ಮೂಲಭೂತ ಸೌಕರ್ಯ, ರೋಪ್‌ವೇ ಒಳಗೊಂಡ ಕಾಮಗಾರಿ ಅನುಷ್ಠಾನ ಮಾಡಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ(Shashikala Jolle) ತಿಳಿಸಿದರು.
Koppal: ಆಂಜನೇಯನ ಜನ್ಮಸ್ಥಳ ದಾಖಲೆ ಸಂಗ್ರಹ ಚುರುಕು
ಬಿಜೆಪಿಯ(BJP) ಎನ್. ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೂಲ ಸೌಕರ್ಯ ಒದಗಿಸಲು ಬೆಟ್ಟದ ಕೆಳಗಡೆ 13.34 ಗುಂಟೆ ಜಮೀನು(Land) ವಶ ಪಡಿಸಿಕೊಂಡು ಅದಕ್ಕೆ ತಗುಲುವ ವೆಚ್ಚ 5.50 ಕೋಟಿ ರು.ಗಳನ್ನು ಬಿಡುಗಡೆ ಮಾಡಬೇಕೆಂಬ ಪ್ರಸ್ತಾವನೆ ಪರಿಶೀಲಿಸಲಾಗುತ್ತಿದೆ, ಅದೇ ರೀತಿ ಆಯೋಧ್ಯೆಗೆ ಬಂದ ಭಕ್ತರು ರಾಮನ ಬಂಟ ಆಂಜನೇಯ ಹುಟ್ಟಿದ ಸ್ಥಳಕ್ಕೂ ಭೇಟಿ ನೀಡಲು ವಿಮಾನ ಯಾನ ಸೇವೆ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಪ್ರತಿ ವರ್ಷ ದೇವಾಲಯಗಳ ಪ್ರವಾಸದ ವಿಶೇಷ ಪ್ಯಾಕೇಜ್ ಆರಂಭಿಸಲಾಗುವುದು ಎಂದರು.
‘ದೇಗುಲ ಪ್ರವಾಸೋದ್ಯಮ’ಕ್ಕೆ ಒತ್ತು ನೀಡಿ ‘ದೈವ ಸಂಕಲ್ಪ’ ಯೋಜನೆ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಗ್ರೂಪ್ ‘ಎ’ವರ್ಗದ 25 ದೇವಾಲಯಗಳನ್ನು ಗುರುತಿಸಿ ಆಯಾ ದೇವಾಲಯಗಳಿಂದ ಬರುವ ಆದಾಯದಿಂದ ದೇವಾಲಯಗಳಲ್ಲಿ ಯೋಜಿತ ರೀತಿಯಲ್ಲಿ ಅಭಿವೃದ್ಧಿ ಮಾಡಲು ‘ಮಾಸ್ಟರ್ ಪ್ಲಾನ್’ ರೂಪಿಸಲಾಗುವುದು ಎಂದು ಸಚಿವರು ತಿಳಿಸಿದರು.