ಬರ ಸ್ಥಿತಿ ಎದುರಿಸಲು ಸಕಲ ಸಿದ್ಧತೆ: ಸಚಿವ ಎಚ್‌.ಕೆ. ಪಾಟೀಲ

By Kannadaprabha News  |  First Published Sep 20, 2023, 3:00 AM IST

ಮೋಡ ಬಿತ್ತನೆ ಸರ್ಕಾರದ ಕಾರ್ಯಕ್ರಮವಲ್ಲ, ಕೆಲ ಎನ್‌ಜಿಓಗಳು, ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದಾಗಿ ಮುಂದೆ ಬಂದ ಹಿನ್ನೆಲೆಯಲ್ಲಿ ಆ ಪ್ರಯತ್ನ ಮಾಡಲಾಗಿತ್ತು. ಅದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮೋಡ ಬಿತ್ತನೆಗೆ ಅನುಮತಿ ಕೋರಿ ಪತ್ರ ಬರೆಯಲಾಗಿತ್ತು. ಆದರೆ ಸದ್ಯಕ್ಕೆ ಕೆಲವೆಡೆ ಉತ್ತಮ ಮಳೆ ಬರುತ್ತಿದೆ. ಇದರ ಬಗ್ಗೆ ಯಾವುದೇ ಗೊಂದಲ ಮಾಡುವುದು ಬೇಡ: ಸಚಿವ ಎಚ್‌.ಕೆ. ಪಾಟೀಲ 


ಗದಗ(ಸೆ.20): ರಾಜ್ಯ ಸರ್ಕಾರ ಈಗಾಗಲೇ ಬರ ಪೀಡಿತ ತಾಲೂಕುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಸದ್ಯಕ್ಕೆ 6 ತಾಲೂಕುಗಳನ್ನು ಘೋಷಣೆ ಮಾಡಿದ್ದು, ಮುಂಡರಗಿ ತಾಲೂಕನ್ನು ಕೂಡಾ ಬರಪೀಡಿತ ಎಂದು ಘೋಷಣೆ ಮಾಡಲು ಸರ್ಕಾರಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗುವುದು ಮತ್ತು ಜಿಲ್ಲೆಯಲ್ಲಿ ಬರಗಾಲ ಸ್ಥಿತಿ ಎದುರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕಾನೂನು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಅವರು ಮಂಗಳವಾರ ಗದಗ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ 191 ತಾಲೂಕುಗಳನ್ನು ಸರ್ಕಾರ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ. ಜಿಲ್ಲೆಯ 6 ತಾಲೂಕುಗಳನ್ನು ಈಗಾಗಲೇ ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು ಮುಂಡರಗಿ ತಾಲೂಕಿನ ಅಧ್ಯಯನ ಇನ್ನೂ ನಡೆದಿದೆ. ಅಧ್ಯಯನ ವರದಿ ನಂತರ ಘೋಷಣೆ ಮಾಡಲಾಗುವುದು ಎಂದರು.

Tap to resize

Latest Videos

undefined

ರಾಜ್ಯದ 195 ತಾಲೂಕಲ್ಲಿ ಬರ, ಸರ್ಕಾರ ಘೋಷಣೆ: ನಿಮ್ಮ ಊರು ಇದೆಯಾ ಚೆಕ್ ಮಾಡಿಕೊಳ್ಳಿ!

ಜಿಲ್ಲೆಯಲ್ಲಿ 213941 ಹೆಕ್ಟೇರ್ ಪ್ರದೇಶ ಹಾನಿಗೊಳಗಾಗಿದೆ. 138898 ರೈತರು ಇದರಿಂದ ತೊಂದರೆಗೊಳಗಾಗಿದ್ದಾರೆ. ಎನ್.ಡಿ.ಆರ್.ಎಫ್. ಪ್ರಕಾರ ಹೆಕ್ಟೇರ್‌ಗೆ ಒಣಬೇಸಾಯಕ್ಕೆ ₹ 8500 ಹಾಗೂ ನೀರಾವರಿ ಜಮೀನಿಗೆ ₹ 17000 ಹೆಕ್ಟೇರ್‌ನಂತೆ ಲೆಕ್ಕ ಮಾಡಲಾಗಿ ಜಿಲ್ಲೆಯಲ್ಲಿ ಒಟ್ಟು ₹ 215.53 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ₹ 1515.25 ಕೋಟಿ ನೈಜ ಹಾನಿಯಾಗಿದ್ದು ಈ ಕುರಿತು ರಾಜ್ಯ ಸರ್ಕಾರಕ್ಕೆ ಮಾಹಿತಿ ಒದಗಿಸಲಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿ ಮಾಡಲು ಸರ್ಕಾರವು ಸಕಲ ಪ್ರಯತ್ನ ಮಾಡಲಾಗುತ್ತಿದೆ. ಬರಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಲು ಜಾನುವಾರುಗಳಿಗೆ ಅನುಕೂಲವಾಗುವಂತೆ ಪಂಚಾಯತ್ ಮಟ್ಟದಲ್ಲಿ ಹಾಗೂ ಹೋಬಳಿ ಮಟ್ಟಗಳಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಲಾಗುವುದು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ( ನರೇಗಾ) ಯೋಜನೆಯಡಿ ಇದ್ದ 100 ಮಾನವ ದಿನಗಳನ್ನು 150ಕ್ಕೆ ಹೆಚ್ಚಿಸಲಾಗುವುದು. ಇದರಿಂದ ಕೂಲಿ ಕಾರ್ಮಿಕರಿಗೆ, ಬಡವರಿಗೆ, ಉದ್ಯೋಗ ಒದಗಿಸಿ ಆರ್ಥಿಕ ಸಹಾಯ ದೊರಕಿದಂತಾಗುತ್ತದೆ ಎಂದರು.

ಕರ್ನಾಟಕದಲ್ಲಿ ಬರ: ಈ ವರ್ಷ ಹಂಪಿ ಉತ್ಸವ ಇಲ್ಲ..!

ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಜಿಲ್ಲೆಯ ಸಿಂಗಟಾಲೂರು ಮತ್ತು ನವಿಲು ತೀರ್ಥದಲ್ಲಿ ಅಗತ್ಯ ನೀರು ಸಂಗ್ರಹಣೆ ಮಾಡಲಾಗಿದ್ದು ಸಂಗ್ರಹಿಸಲಾದ ನೀರನ್ನು ಕುಡಿಯಲು ಮಾತ್ರವೇ ಬಳಕೆಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗೆ ಬೋರ್‌ವೆಲ್‌ ಕೊರೆಸುವ ವ್ಯವಸ್ಥೆ ಮಾಡಲಾಗುವುದು. ಒಂದು ವೇಳೆ ಜಲಸಂಪನ್ಮೂಲಗಳ ಕೊರೆತೆಯಿರುವ ಪ್ರದೇಶಗಳಲ್ಲಿ ಟ್ಯಾಂಕರ್‌ ಗಳ ಮೂಲಕ ನೀರು ಸರಬರಾಜಿಗೆ ಕ್ರಮ ವಹಿಸಲಾಗುವುದು. ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಲು ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ವಿಶೇಷ ಸಹಾಯವಾಣಿ ತೆರೆಯಲಾಗುವುದು. ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜಿಲ್ಲಾಡಳಿತ ಕಾರ್ಯ ನಿರ್ವಹಿಸಲಿದೆ ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಮೋಡ ಬಿತ್ತನೆ ಸರ್ಕಾರದ ಕಾರ್ಯಕ್ರಮವಲ್ಲ, ಕೆಲ ಎನ್‌ಜಿಓಗಳು, ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದಾಗಿ ಮುಂದೆ ಬಂದ ಹಿನ್ನೆಲೆಯಲ್ಲಿ ಆ ಪ್ರಯತ್ನ ಮಾಡಲಾಗಿತ್ತು. ಅದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮೋಡ ಬಿತ್ತನೆಗೆ ಅನುಮತಿ ಕೋರಿ ಪತ್ರ ಬರೆಯಲಾಗಿತ್ತು. ಆದರೆ ಸದ್ಯಕ್ಕೆ ಕೆಲವೆಡೆ ಉತ್ತಮ ಮಳೆ ಬರುತ್ತಿದೆ. ಇದರ ಬಗ್ಗೆ ಯಾವುದೇ ಗೊಂದಲ ಮಾಡುವುದು ಬೇಡ ಎಂದು ಕಾನೂನು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ತಿಳಿಸಿದ್ದಾರೆ.  

click me!