ಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿದೆ. ಮಕ್ಕಳ ಮೇಲೆ ವಿಶೇಷ ಕಾಳಜಿ ತೋರಿಸಿ, ಅಭ್ಯಾಸ ಮಾಡಿಸಿ ಅವರು ಪರೀಕ್ಷೆ ಬರೆಯಲು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ಮಾಡಬೇಕೆಂದು ಜಿಲ್ಲಾ ಉಪನಿರ್ದೇಶಕರಾದ ಸಿ.ನಂಜಯ್ಯ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ತುರುವೇಕೆರೆ : ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿದೆ. ಮಕ್ಕಳ ಮೇಲೆ ವಿಶೇಷ ಕಾಳಜಿ ತೋರಿಸಿ, ಅಭ್ಯಾಸ ಮಾಡಿಸಿ ಅವರು ಪರೀಕ್ಷೆ ಬರೆಯಲು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ಮಾಡಬೇಕೆಂದು ಜಿಲ್ಲಾ ಉಪನಿರ್ದೇಶಕರಾದ ಸಿ.ನಂಜಯ್ಯ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ತಾಲೂಕಿನ ಆನೆಕೆರೆಯ ಶ್ರೀ ಗಂಗಾಧರೇಶ್ವರ ಗ್ರಾಮಾಂತರಯಲ್ಲಿ ಜಿಲ್ಲಾ ಉಪ ನಿರ್ದೇಶಕರ ಕಚೇರಿ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಫಲಿತಾಂಶ ಉತ್ತಮ ಪಡಿಸುವ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ಫೆ. 6ರಂದು ನಡೆಯುವ ಎರಡನೇ ಹಂತದ ಅಭ್ಯಾಸ ಪತ್ರಿಕೆ ಪರೀಕ್ಷೆಯಲ್ಲಿ ಐದು ವಿಷಯಗಳು ಆಯಾ ಶಾಲಾ ಹಂತದಲ್ಲಿ ನಡೆಯಲಿದೆ. ಫೆ. 1 ರಂದು ನಡೆಯುವ ಒಂದು ಪತ್ರಿಕೆಯ ಪರೀಕ್ಷೆ ಮಾತ್ರ ಆಯ್ದ ಮುಖ್ಯ ಶಿಕ್ಷಕರ ಅಭಿಪ್ರಾಯದ ಮೇರೆಗೆ ಆಯಾ ತಾಲೂಕುಗಳ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಿ ಮಧ್ಯಾಹ್ನ ವಿಷಯ ತಜ್ಞರಿಂದ ಮಕ್ಕಳೊಂದಿಗೆ ಸಂವಾದ ನಡೆಸುವ ಆಲೋಚನೆ ಇದೆ. ಕಲಿಕೆಯಲ್ಲಿ ಹಿಂದುಳಿದ ಮತ್ತು ಸರಾಸರಿ ಇರುವ ಮಕ್ಕಳಿಗೆ ವಿಶೇಷ ಒತ್ತು ಕೊಟ್ಟು ಪರೀಕ್ಷೆ ಪಾಸು ಮಾಡುವ ಕೌಶಲಗಳ ಕಲಿಸಬೇಕು. ವಾಸ್ತವ ಬದುಕಿನ ಸಂಕೀರ್ಣತೆಗಳನ್ನು ಮಕ್ಕಳಿಗೆ ಅರ್ಥಮಾಡಿಸಿ. ಸಾಧನೆಯೆಡೆಗೆ ಸಾಗಲು ದೃಢ ಸಂಕಲ್ಪ ಹೊಂದುವಂತೆ ಪ್ರೇರೇಪಿಸಿ. ಶಿಕ್ಷಕರು ಮೊದಲ ಅಭ್ಯಾಸ ಪತ್ರಿಕೆಯನ್ನು ಕಟ್ಟುನಿಟ್ಟಾಗಿ ಮೌಲ್ಯಮಾಪನ ಮಾಡಿ ಆ ವಿದ್ಯಾರ್ಥಿಗಳ ಕಲಿಕಾಮಟ್ಟಆಧರಿಸಿ ಮುಂದಿನ ಯೋಜನೆಗಳನ್ನು ರೂಪಿಸಿ ಎಂದು ಸಲಹೆ ನೀಡಿದರು.
ಜಿಲ್ಲಾ ಉಪನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿ ಮಾಧವರೆಡ್ಡಿ, ಸಮಗ್ರ ಶಿಕ್ಷಣದ ಡಿವೈಪಿಸಿ ರಂಗಧಾಮಪ್ಪ, ಕನ್ನಡ ವಿಷಯ ಪರಿವೀಕ್ಷಕ ಗಿರೀಶ್ ಅವರು ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಮತ್ತು ಆಯ್ದ ಮುಖ್ಯಶಿಕ್ಷಕರು ತಮ್ಮ ಶಾಲೆಗಳಲ್ಲಿ ಕೈಗೊಂಡಿರುವ ವಿನೂತನ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಗಣಿತ ವಿಷಯ ಪರಿವೀಕ್ಷಕ ಮಂಜುನಾಥಚಾರ್, ತಾಲೂಕು ಸಮನ್ವಯಾಧಿಕಾರಿ ವೀಣಾ, ಇಸಿಒ ಪಿ.ಸಿದ್ದಪ್ಪ, ತಾಲೂಕು ಅಕ್ಷರ ದಾಸೋಹದ ಪ್ರಭಾರ ಅಧಿಕಾರಿ ಮಂಜಪ್ಪ, ಮುಖ್ಯ ಶಿಕ್ಷಕ ರಾಜಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿಕ್ಷಕರು ಮಕ್ಕಳ ಸಾಮರ್ಥ್ಯ ಅರಿಯಿರಿ
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ.ಪದ್ಮನಾಭ ಮಾತನಾಡಿ, ಮಕ್ಕಳ ಸಾಮಾಜಿಕ ಜೀವನಕ್ಕೆ ಎಸ್ಸೆಸ್ಸೆಲ್ಸಿ ಪಾಸಾಗುವುದು ಅತ್ಯಗತ್ಯ. ಶಿಕ್ಷಕರು ಶ್ರದ್ಧೆಯಿಂದ ಮಕ್ಕಳ ಸಾಮರ್ಥ್ಯ ಅರಿತು, ಅವರೊಂದಿಗೆ ಬೆರೆತು ಬೋಧಿಸಿದರೆ ಗುಣಾತ್ಮಕ ಕಲಿಕೆ ಉಂಟು ಮಾಡಲು ಸಾಧ್ಯ. ಪ್ರತಿ ಶನಿವಾರ ಬಿಆರ್‌ಸಿ ಕಚೇರಿಯಲ್ಲಿ ಜೂಮ್ ವೆಬಿನಾರ್ ಮಾಡಿ ದಿನಕ್ಕೊಂದು ವಿಷಯ ತೆಗೆದುಕೊಂಡು ಆ ವಿಷಯಗಳಲ್ಲಿ ಮಕ್ಕಳಿಗಿರುವ ಸಮಸ್ಯೆಗಳು, ಕ್ಲಿಷ್ಟಾಂಶಗಳು, ಪರೀಕ್ಷೆ ಪಾಸು ಮಾಡುವ ಸರಳ ವಿಧಾನಗಳು ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಪರಿಹಾರ, ಸಲಹೆ ನೀಡುವುದು, ಇಲಾಖಾ ಸಮಸ್ಯೆಗಳಿಗೆ ನಾನು ಉತ್ತರಿಸುವೆ. ಆಯಾ ಕ್ಲಸ್ಟರ್ ವ್ಯಾಪ್ತಿಯಲ್ಲಿನ ಶಿಕ್ಷಕರ ಸೇವಾ ದಾಖಲೆಗಳ ಪರಿಶೀಲನೆಯನ್ನು ಗುರುಸ್ಪಂದನಾ ಕಾರ‍್ಯಕ್ರಮದಡಿ ಮಾಡಲಾಗುವುದು. ಮಕ್ಕಳಿಂದ ಹತ್ತನೆ ತರಗತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಹೆಚ್ಚಿರುವ ಶಾಲೆಗಳಿಗೆ ಭೇಟಿ ನೀಡಲಾಗುವುದು ಎಂದರು.