ಇನ್ವೆಸ್ಟ್‌ ಕರ್ನಾಟಕ-ಹುಬ್ಬಳ್ಳಿ ಸಮಾವೇಶಕ್ಕೆ ಭರದ ಸಿದ್ಧತೆ: 1200ಕ್ಕೂ ಹೆಚ್ಚು ಉದ್ಯಮಿಗಳು ಭಾಗಿ

By Kannadaprabha NewsFirst Published Jan 31, 2020, 7:28 AM IST
Highlights

‘ಇನ್ವೆಸ್ಟ್‌ ಕರ್ನಾಟಕ- ಹುಬ್ಬಳ್ಳಿ’ ಸಮಾವೇಶಕ್ಕೆ ಭರದ ಸಿದ್ಧತೆ| ಫೆ. 14ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಮಾವೇಶ| ಜಗದೀಶ ಶೆಟ್ಟರ್‌, ಪ್ರಹ್ಲಾದ ಜೋಶಿ ಪ್ರಯತ್ನದಿಂದಾಗಿ ಇದೀಗ ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜನೆ|

ಶಿವಾನಂದ ಗೊಂಬಿ

ಹುಬ್ಬಳ್ಳಿ[ಜ.31]:  ಇದೇ ಮೊಟ್ಟ ಮೊದಲ ಬಾರಿಗೆ ಉತ್ತರ ಕರ್ನಾಟಕವನ್ನು ಕೇಂದ್ರವನ್ನಾಗಿಟ್ಟುಕೊಂಡು ಫೆ. 14ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ‘ಇನ್ವೆಸ್ಟ್‌ ಕರ್ನಾಟಕ- ಹುಬ್ಬಳ್ಳಿ’ ಸಮಾವೇಶಕ್ಕೆ ಭರದ ಸಿದ್ಧತೆ ನಡೆದಿದೆ. ಮೊದಲು ಬೆಳಗಾವಿ ವಿಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಈ ಸಮಾವೇಶದ ವ್ಯಾಪ್ತಿಗೆ ಇದೀಗ ಕೊಪ್ಪಳ ಹಾಗೂ ಬಳ್ಳಾರಿಯೂ ಸೇರ್ಪಡೆಯಾಗಿದೆ. 1200ಕ್ಕೂ ಅಧಿಕ ಉದ್ಯಮಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಕೈಗಾರಿಕೆಗಳೆಲ್ಲ ಬರೀ ಬೆಂಗಳೂರಿಗಷ್ಟೇ ಸೀಮಿತವಾಗಿವೆ. ಯಾವೊಂದು ಕೈಗಾರಿಕೆಗಳು ಇತ್ತ ಕಡೆಗೆ ಬರುವುದೇ ಇಲ್ಲ. ಹಾಗಂತ ಇಲ್ಲಿ ದೊಡ್ಡ ಕೈಗಾರಿಕೆಗಳೇ ಇಲ್ಲ ಅಂತೇನೂ ಅಲ್ಲ. ಬಿಡಿಕೆ, ಕೆಇಸಿ, ಸುಂದತ್ತಾ, ಮಹಾದೇವ ಜವಳಿ ಗಿರಣಿ ಸೇರಿದಂತೆ ಹಲವು ದೊಡ್ಡ ದೊಡ್ಡ ಕೈಗಾರಿಕೆಗಳು ಇಲ್ಲಿದ್ದವು. ಆದರೆ, ದಿನ ಕಳೆದಂತೆ ಒಂದೊಂದು ಬಾಗಿಲು ಹಾಕುತ್ತಾ ಬಂದವು. ಇದೀಗ ‘ಬಿಡಿಕೆ’ ಇದೆಯಾದರೂ ಹೇಳಿಕೊಳ್ಳುವಂತಹ ಪರಿಸ್ಥಿತಿಯೇನು ಅಲ್ಲಿಲ್ಲ. ಉತ್ಪಾದನೆ ಕಡಿಮೆಗೊಳಿಸಿದೆ. ಇನ್ನು ಟಾಟಾ ನ್ಯಾನೋ ಘಟಕ ಇಲ್ಲಿನ ರಾಜಕಾರಣದಿಂದಾಗಿ ಪಶ್ಚಿಮ ಬಂಗಾಳಕ್ಕೆ ಎತ್ತಂಗಡಿಯಾಯಿತು. ಇನ್ನು ಉಳಿದಿರುವುದು ಸಣ್ಣ ಪುಟ್ಟಕೈಗಾರಿಕೆಗಳಷ್ಟೇ. ಅವುಗಳಲ್ಲಿ ಸಾಕಷ್ಟು ಕೈಗಾರಿಕೆಗಳು ಬಾಗಿಲು ಮುಚ್ಚಿವೆ.

ಹುಬ್ಬಳ್ಳಿ: ಇನ್ವೆಸ್ಟ್‌ ಕರ್ನಾಟಕ ಸಮಾವೇಶದಲ್ಲಿ ದಾವೋಸ್‌ ಉದ್ಯಮಿಗಳು ಭಾಗಿ

ಇದರಿಂದಾಗಿ ಇಲ್ಲಿ ಎಷ್ಟೇ ಕಲಿತವರಿದ್ದರೂ ಬೆಂಗಳೂರು, ಪುಣೆ, ಮುಂಬೈ ನಗರಗಳಿಗೆ ತೆರಳಬೇಕಿತ್ತು. ಇದರೊಂದಿಗೆ ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲೂ ಹಿಂದುಳಿಯುವಂತಾಯಿತು. ಈ ಭಾಗದಲ್ಲೂ ಕೈಗಾರಿಕೆಗಳನ್ನು ತೆರೆಯಬೇಕು ಎಂಬ ಬೇಡಿಕೆ ಬಹುವರ್ಷಗಳದ್ದು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪ್ರಯತ್ನದಿಂದಾಗಿ ಇದೀಗ ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗಿದೆ. ಫೆ. 14ರಂದು ಇಲ್ಲಿನ ಡೆನಿಸನ್‌ ಹೋಟೆಲ್‌ನ ಯಶೋಧರ ಲಾಂಜ್‌ನಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶದ ಯಶಸ್ಸಿಗಾಗಿ ಉನ್ನತ ಅಧಿಕಾರಿಗಳ, ಕೆಲವು ಸಂಘಟನೆಗಳ ತಂಡವನ್ನೂ ಈಗಾಗಲೇ ರಚಿಸಲಾಗಿದ್ದು, ಅವು ನಿರಂತರವಾಗಿ ಶ್ರಮಿಸುತ್ತಿವೆ.

ಯಾವ್ಯಾವ ಜಿಲ್ಲೆಗಳ ವ್ಯಾಪ್ತಿ:

ಮೊದಲು ಬೆಳಗಾವಿ ವಿಭಾಗದ ಬೆಳಗಾವಿ, ಹುಬ್ಬಳ್ಳಿ- ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳನ್ನೊಳಗೊಂಡು ಈ ಸಮಾವೇಶ ಆಯೋಜಿಸಲಾಗಿತ್ತು. ಆದರೆ, ಇದೀಗ ಹೈದರಾಬಾದ್‌ ಕರ್ನಾಟಕದ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳನ್ನು ಇದರಡಿ ಸೇರಿಸಿಕೊಳ್ಳಲಾಗಿದೆ. ಇಲ್ಲಿನ ಭೌಗೋಳಿಕತೆ ತಕ್ಕಂತೆ ಕೈಗಾರಿಕೆಗಳನ್ನು ಇಲ್ಲಿಗೆ ಆಕರ್ಷಿಸುವಂತೆ ಮಾಡುವುದೇ ಸಮಾವೇಶದ ಉದ್ದೇಶ.

ಎಷ್ಟು ಉದ್ಯಮಿಗಳಿಗೆ ಆಹ್ವಾನ?:

ಮುಂಬೈ, ಹೈದರಾಬಾದ್‌ನಲ್ಲಿ ಈಗಾಗಲೇ ರೋಡ್‌ ಶೋಗಳನ್ನು ನಡೆಸಲಾಗಿದೆ. ದಾವೋಸ್‌ನಲ್ಲಿ ಇತ್ತೀಚೆಗೆ ಭೇಟಿ ನೀಡಿದ್ದ ಸಚಿವ ಜಗದೀಶ ಶೆಟ್ಟರ್‌ ಅಲ್ಲಿನ ಕೈಗಾರಿಕೋದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇನ್ನು ಆಸ್ಸಾಂ, ಗುವಾಹಟಿ, ಲಕ್ನೋ ಮತ್ತಿತರರ ಕಡೆಗಳಲ್ಲೂ ಶೆಟ್ಟರ್‌ ರೋಡ್‌ ಶೋ ನಡೆಸಲಿದ್ದಾರೆ. ಅಲ್ಲಿನ ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಲು ನಿರ್ಧರಿಸಿದ್ದಾರೆ. ಟೈರ್‌-2 ಸಿಟಿಗಳಲ್ಲಿ ಕೈಗಾರಿಕೆಗಳು ಬರುವಂತಾಗಬೇಕು. ಅಂದಾಗ ಸ್ಥಳೀಯವಾಗಿ ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತದೆ. ಈ ಸಲದ ಬಂಡವಾಳ ಹೂಡಿಕೆದಾರರ ಸಮಾವೇಶ ಈ ಹಿನ್ನೆಲೆಯಲ್ಲೇ ಆಯೋಜಿಸಲಾಗುತ್ತಿದೆ ಎಂದು ಶೆಟ್ಟರ್‌ ಅಭಿಪ್ರಾಯ ಪಡುತ್ತಾರೆ.

ಈಗಾಗಲೇ 2000ಕ್ಕೂ ಅಧಿಕ ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಕನಿಷ್ಠವೆಂದರೂ 1200ಕ್ಕೂ ಹೆಚ್ಚು ಜನ ಉದ್ಯಮಿಗಳು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸುತ್ತವೆ.

ಸಮಾವೇಶದ ಯಶಸ್ಸಿಗಾಗಿ ಈಗಾಗಲೇ ಹತ್ತಾರು ಬಾರಿ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಸಮಾವೇಶ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ.

ಡೆನಿಸನ್ಸ್‌ ಹೋಟೆಲ್‌ನ ಯಶೋಧರ ಲಾಂಜ್‌ನಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಸಮಾವೇಶಕ್ಕೆ ಜಾಗ ಸಾಕಾಗುತ್ತದೆ. ಇಲ್ಲಿನ ಭೌಗೋಳಿಕತೆಗೆ ತಕ್ಕಂತೆ ಕೈಗಾರಿಕೆಗಳನ್ನು ಆಕರ್ಷಿಸುವಂತೆ ಮಾಡುವುದು ಸಮಾವೇಶದ ಉದ್ದೇಶ. ದೊಡ್ಡ ಕೈಗಾರಿಕೆ ಹಾಗೂ ಸ್ಥಳೀಯ ಸಣ್ಣ ಕೈಗಾರಿಕೋದ್ಯಮಿಗಳಿಗೆ ಅನುಕೂಲಕ್ಕೆ ತಕ್ಕಂತೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ ಅವರು ಹೇಳಿದ್ದಾರೆ.

ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ. ಈ ಮೂಲಕ ಈ ಭಾಗದಲ್ಲೂ ಕೆಲವೊಂದಿಷ್ಟುಕೈಗಾರಿಕೆಗಳು ಬಂದರೆ ಇಲ್ಲಿನ ನಿರುದ್ಯೋಗ ಸಮಸ್ಯೆಗೆ ನಿವಾರಣೆಯಾಗುತ್ತದೆ. ಇಲ್ಲಿಂದ ದೂರದ ಊರಿಗೆ ಯುವ ಸಮೂಹ ವಲಸೆ ಹೋಗುವುದು ತಪ್ಪುತ್ತದೆ. ಇದು ಯಶಸ್ಸಿಯಾಗಿ ಕೆಲವು ಕೈಗಾರಿಕೆಗಳು ಬರಲಿ ಎಂದು  ಲಕ್ಷ್ಮೇಕಾಂತ ಘೋಡಕೆ ಹೇಳಿದ್ದಾರೆ.
 

click me!