ಇಂತಹ ಕೃತ್ಯ ಮಾಡಿದವರಿಗೆ ಸರ್ಕಾರ ಒದ್ದು ಬುದ್ಧಿ ಕಲಿಸಬೇಕು: ಪ್ರಮೋದ್ ಮುತಾಲಿಕ್| ಇಂತಹ ಅಪಾಯಕಾರಿ ಬೆಳವಣಿಗೆಗೆ ಕಡಿವಾಣ ಹಾಕಬೇಕು| ಎಸ್‌ಡಿಪಿಐ, ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳನ್ನು ನಿಷೇಧ ಮಾಡಬೇಕು| ಈ ಸಂಘಟನೆಗಳನ್ನು ನಿಷೇಧ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು|
ಧಾರವಾಡ(ಆ.13): ಈ ದೇಶ ತಾಲಿಬಾನ್, ಪಾಕಿಸ್ತಾನ, ಅಫಘಾನಿಸ್ತಾನ ಅಲ್ಲ. ಇದು ಭಾರತ ಎಂಬುದನ್ನು ಅರಿತು ಬಾಯಿ ಮುಚ್ಚಿಕೊಂಡಿರಬೇಕು. ಹೇಯ ಕೃತ್ಯಗಳನ್ನು ನಡೆಸುವವರಿಗೆ ಸರ್ಕಾರ ಒದ್ದು ಬುದ್ಧಿ ಕಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೂ ಬೆಂಕಿ ಹಚ್ಚುತ್ತಾರೆ.
ಇದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಆಕ್ರೋಶದ ಮಾತು. ಬೆಂಗಳೂರಿನ ಕೆ.ಜೆ. ಹಳ್ಳಿಯಲ್ಲಿ ನಡೆದಿರುವ ಗಲಾಟೆ ಕುರಿತು ಧಾರವಾಡದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಈ ಕುರಿತು ಶ್ರೀರಾಮ ಸೇನೆ, ಬಜರಂಗದಳ ಅಲ್ಲದೇ ಶಾಸಕ ಅಮೃತ ದೇಸಾಯಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಮುಸ್ಲಿಮರೇ ದಾಳಿ ಮಾಡಿದ್ರು, ಅವರೇ ಬದುಕಿಸಿದ್ರು: ಅಳಲು ತೋಡಿಕೊಂಡ ಶಾಸಕರ ಅಕ್ಕ
ತಮಗೆ ಅನ್ಯಾಯವಾಗಿದ್ದರೆ ಕಾನೂನು ಕ್ರಮಕೈಗೊಳ್ಳಬಹುದಿತ್ತು. ಆದರೆ, ಕೆ.ಜಿ. ಹಳ್ಳಿಯಲ್ಲಿ ನಡೆದಿರುವ ಗಲಾಟೆ, ಸಾರ್ವಜನಿಕ ಆಸ್ತಿ ಹಾನಿ ಮಾಡಿದ್ದು, ಅಂಥವರನ್ನು ಎನ್‌ಕೌಂಟರ್ ಮಾಡಬೇಕೆಂದು ಮಾಧ್ಯಮಗಳ ಮೂಲಕ ಹೇಳಿಕೆ ನೀಡಿರುವ ಮುತಾಲಿಕ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹಾಕಿದವರ ಮೇಲೆ ಕ್ರಮಕೈಗೊಳ್ಳಲು ಬೇರೆ ದಾರಿಗಳಿವೆ. ಅದನ್ನು ಬಿಟ್ಟು ಗಲಭೆ ನಡೆಸುವುದು ಸರಿಯಲ್ಲ. ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದವರ ವಿರುದ್ಧ ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಬೇಕು. ಅದನ್ನು ಬಿಟ್ಟು ಸಿಕ್ಕ ಸಿಕ್ಕ ಕಡೆಗಳಲ್ಲಿ ಬೆಂಕಿ ಹಚ್ಚುವುದು, ಗಲಾಟೆ ಮಾಡುವುದು ಏತಕ್ಕೆ ಎಂದು ಪ್ರಶ್ನಿಸಿದರು.
ಇಂತಹ ಅಪಾಯಕಾರಿ ಬೆಳವಣಿಗೆಗೆ ಕಡಿವಾಣ ಹಾಕಬೇಕು. ಎಸ್‌ಡಿಪಿಐ, ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಬಿಜೆಪಿ ಹೇಳುತ್ತಲೇ ಇತ್ತು. ಆದರೆ ಈಗ ಅಧಿಕಾರದಲ್ಲಿದ್ದರೂ ಆ ಕೆಲಸ ಮಾಡುತ್ತಿಲ್ಲ. ಈ ಸಂಘಟನೆಗಳನ್ನು ನಿಷೇಧ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದರು.
ಸಮಾಜಘಾತುಕರಿಗೆ ಭಯ ಹುಟ್ಟಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಅದಕ್ಕಾಗಿ ಪೊಲೀಸರಿಗೆ ಮುಕ್ತ ಅವಕಾಶ ನೀಡಬೇಕು. ಇಂತಹ ಕೃತ್ಯಗಳನ್ನು ನಡೆಸುವವರನ್ನು ಯಾವ ರೀತಿ ಹದ್ದುಬಸ್ತಿನಲ್ಲಿ ಇಡಬೇಕು ಎಂಬುದು ಪೊಲೀಸರಿಗೆ ಗೊತ್ತಿದೆ. ಆದರೆ, ಸರ್ಕಾರ ಅವರಿಗೆ ಮುಕ್ತ ಅವಕಾಶ ನೀಡದ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಸರ್ಕಾರ ಮುಂದಿನ ದಿನಗಳಲ್ಲಾದರೂ ಪೊಲೀಸರಿಗೆ ಮುಕ್ತ ಅವಕಾಶ ನೀಡುವ ಮೂಲಕ ಸಮಾಜಘಾತುಕ ಕೆಲಸಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.